ಕುಮಟಾ: ತಂತ್ರಜ್ಞಾನ, ಉದ್ಯಮಶೀಲತೆಯ ಬೃಹತ್ ಬೆಳವಣಿಗೆಯ ಕಾಲಘಟ್ಟದಲ್ಲಿ ನಾವಿದ್ದೇವೆ. ಭಾರತವು ಪ್ರಪಂಚದ ಪ್ರಮುಖ ಶಕ್ತಿಗಳಲ್ಲಿ ಒಂದಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಯುವಜನಾಂಗಕ್ಕೆ ಅಪಾರ ಅವಕಾಶಗಳು ಲಭ್ಯವಾಗಲಿದೆ. ಆದರೆ ಈ ಅವಕಾಶಗಳನ್ನು ಅಪ್ಪಿಕೊಳ್ಳುವುದಕ್ಕೆ ನಮ್ಮ ಯುವ ಪೀಳಿಗೆಯು ಸದೃಢ ವ್ಯಕ್ತಿತ್ವ, ನಿಷ್ಠೆ ಮತ್ತು ಸಮರ್ಪಣೆಯ ಗುಣಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹ್ಯಾಂಗ್ಯೋ ಐಸ್ ಕ್ರೀಮ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ ಜಿ. ಪೈ ಹೇಳಿದರು.
ನಮ್ಮ ಕನಸುಗಳು ದೊಡ್ಡದಾಗಿರಬೇಕು. ಶಿಕ್ಷಣದೊಟ್ಟಿಗೆ ಕೌಶಲ್ಯದ ಅಭಿವೃದ್ಧಿ ಅತ್ಯಗತ್ಯ. ಏಕೆಂದರೆ ರಾಜ್ಯದಿಂದ ಪ್ರತಿವರ್ಷ ಒಂದು ಲಕ್ಷಕ್ಕೂ ಹೆಚ್ಚು ಎಂಜಿನಿಯರುಗಳು ಕಲಿತು ಹೊರ ಬರುತ್ತಿದ್ದಾರೆ. ಅದರಲ್ಲಿ ಶೇ. ೬೦ ನಿರುದ್ಯೋಗಿಯಾಗುತ್ತಿದ್ದಾರೆ. ಅವರಿಗೆ ಉದ್ಯೋಗ ಕೊಡಿಸುವುದು ಸವಾಲಿನದ್ದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಆರೋಗ್ಯ ಕ್ಷೇತ್ರಕ್ಕೆ ಬಹಳ ಕಷ್ಟಪಟ್ಟು ಸೇವೆ ನೀಡಿ ಕೆನರಾ ಹೆಲ್ತಕೇರ್‌ನಂತಹ ಆಸ್ಪತ್ರೆಯನ್ನು ಸ್ಥಾಪಿಸಿದ ಡಾ. ಜಿ.ಜಿ. ಹೆಗಡೆ ಶಿಕ್ಷಣ ಕ್ಷೇತ್ರದಲ್ಲೂ ಹರಸಾಹಸ ಪಟ್ಟು ಗೋರೆಯಲ್ಲಿ ಪಿಯು ಕಾಲೇಜು ಕಟ್ಟಿ ಬೆಳೆಸಿ ಯಶಸ್ವಿಯಾಗಿದ್ದಾರೆ. ಅವರ ತಂದೆ ಜಿ.ಎನ್. ಹೆಗಡೆ ಅವರ ಒತ್ತಾಸೆಯೇ ಇಂದು ನನ್ನ ರಾಜಕೀಯ ಜೀವನದ ಯಶಸ್ಸಿಗೆ ಕಾರಣ ಎಂದರೆ ತಪ್ಪಲ್ಲ ಎಂದರು.ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಡಾ. ಜಿ.ಜಿ. ಹೆಗಡೆ, ಟ್ರಸ್ಟಿ ಡಿ.ಎನ್. ಭಟ್, ಪ್ರಾಚಾರ್ಯ ರಾಮ ಭಟ್, ಸಾಂಸ್ಕೃತಿಕ ಸಂಚಾಲಕಿ, ಉಪನ್ಯಾಸಕಿ ಪೂಜಾ ಭಟ್, ಕ್ರೀಡಾ ಸಂಚಾಲಕ, ಉಪನ್ಯಾಸಕ ವಿನಾಯಕ ನೇತ್ರೇಕರ, ವಿದ್ಯಾರ್ಥಿ ಪ್ರತಿನಿಧಿಗಳಾದ ಸುಜಿತ ಭಾಸ್ಕರ ಭಟ್, ತೇಜಾ ನಾರಾಯಣ ಅವಧಾನಿ ಇದ್ದರು. ಸಾಧಕ ಹಾಗೂ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರದೊಂದಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಎನ್.ಜಿ. ಹೆಗಡೆ ಕಪ್ಪೆಕರೆ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಮನಸೂರೆಗೊಂಡಿತು.