ನಮ್ಮ ಸಂಸ್ಕೃತಿ, ಪರಂಪರೆ ಜಾಗೃತಗೊಳಿಸುವುದು ಅಗತ್ಯ

KannadaprabhaNewsNetwork |  
Published : Nov 11, 2025, 02:15 AM IST
10ಎಚ್‌ವಿಆರ್‌1 | Kannada Prabha

ಸಾರಾಂಶ

ನಮ್ಮ ಸಂಪ್ರದಾಯ, ಸಂಸ್ಕಾರ, ಸಂಸ್ಕೃತಿ, ಪರಂಪರೆ ಹಾಗೂ ಜನಪದ ಬಿಂಬಿಸುವ ಜಿನ ಭಜನೆ ಉತ್ತಮ ಕಾರ್ಯವಾಗಿದೆ. ಆಧುನಿಕ ಜೀವನ ಶೈಲಿ ಹಾಗೂ ಪಾಶ್ಚಿಮಾತ್ಯ ಅನುಕರಣೆಯಿಂದ, ನಮ್ಮ ಪುರಾತನ ಸಂಪ್ರದಾಯ, ಸಂಸ್ಕಾರ, ಸಂಸ್ಕೃತಿ ಹಾಗೂ ಪರಂಪರೆ ಗೌಣವಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಅವುಗಳನ್ನು ಜಾಗೃತಗೊಳಿಸುವ ಅವಶ್ಯಕತೆ ಇದೆ ಎಂದು ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ನುಡಿದರು.

ಹಾವೇರಿ:ನಮ್ಮ ಸಂಪ್ರದಾಯ, ಸಂಸ್ಕಾರ, ಸಂಸ್ಕೃತಿ, ಪರಂಪರೆ ಹಾಗೂ ಜನಪದ ಬಿಂಬಿಸುವ ಜಿನ ಭಜನೆ ಉತ್ತಮ ಕಾರ್ಯವಾಗಿದೆ. ಆಧುನಿಕ ಜೀವನ ಶೈಲಿ ಹಾಗೂ ಪಾಶ್ಚಿಮಾತ್ಯ ಅನುಕರಣೆಯಿಂದ, ನಮ್ಮ ಪುರಾತನ ಸಂಪ್ರದಾಯ, ಸಂಸ್ಕಾರ, ಸಂಸ್ಕೃತಿ ಹಾಗೂ ಪರಂಪರೆ ಗೌಣವಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಅವುಗಳನ್ನು ಜಾಗೃತಗೊಳಿಸುವ ಅವಶ್ಯಕತೆ ಇದೆ ಎಂದು ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ನುಡಿದರು.

ನಗರದ ಶಿವಶಕ್ತಿ ಪ್ಯಾಲೇಸ್‍ನಲ್ಲಿ ಭಾನುವಾರ ಭಾರತೀಯ ಜೈನ್ ಮಿಲನ್ ವತಿಯಿಂದ ಆಯೋಜಿಸಿದ್ದ ದಾವಣಗೆರೆ ವಿಭಾಗದ ಜಿನ ಭಜನಾ ಸ್ಪರ್ಧೆಯ 9ನೇ ಆವೃತ್ತಿಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಜಿನೇಂದ್ರ ಭಗವಂತನ ಗುಣಗಾನ ಹಾಗೂ ಸ್ಮರಣೆ ಮಾಡುವ ಜಿನ ಭಜನೆ ಉತ್ತಮ ಕಾರ್ಯಕ್ರಮ. ಅರಿಹಂತ ಅಂದರೆ ಅಸಂಖ್ಯಾತ ಕರ್ಮ ನಿರ್ಜರವಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಜಿನ ಭಜನೆ ಸ್ಪರ್ಧೆ ಹಿನ್ನೆಲೆಯಲ್ಲಿ ಎಲ್ಲರೂ ಭಕ್ತಿ ಭಾವದಿಂದ ಜಿನಭಜನೆ ಮಾಡುತ್ತಿದ್ದೀರಿ. ಇದರಿಂದ ಸಾತೀಶ ಪುಣ್ಯ ಪ್ರಾಪ್ತವಾಗುತ್ತದೆ. ಜಿನ ಭಜನೆ ಸ್ಪರ್ಧೆಗೆ ಮಾತ್ರ ಮಾಡದೆ ಪ್ರತಿನಿತ್ಯ ಜಿನಭಗವಂತರ ಸ್ಮರಣೆ ಮಾಡಬೇಕು. ನೀತಿ-ನಿಯಮ, ಸಂಯಮ, ಶಿಷ್ಟಾಚಾರವನ್ನು ಮೈಗೂಡಿಸಿಕೊಳ್ಳಬೇಕು. ವೇಗವಾಗಿ ಓಡುತ್ತಿರುವ ಕಾಲಘಟ್ಟದಲ್ಲಿ ಸಂಪ್ರದಾಯ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗುವುದು ಅವಶ್ಯವಾಗಿದೆ. ಹಾಗಾಗಿ ಮಕ್ಕಳಿಗೆ ನಮ್ಮ ಉತ್ತಮ ಸಂಸ್ಕಾರಗಳನ್ನು ಕಲಿಸಬೇಕು. ಇಂದಿನ ಪೀಳಿಗೆಗೆ ಧರ್ಮದ ದರ್ಶನ ಮಾಡಿಸುವ ಜಿನ ಭಜನೆ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹೇಳಿದರು.

ಧರ್ಮಸ್ಥಳದ ಸುರೇಂದ್ರಕುಮಾರ್ ಹಾಗೂ ಅನಿತಾ ಸುರೇಂದ್ರಕುಮಾರ ಅವರ ಪರಿಕಲ್ಪನೆಯಲ್ಲಿ ಮೂಡಿಬಂದಂತಹ ಜಿನಭಜನಾ ಸ್ಪರ್ಧೆ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಯುವ ಕಾಂಗ್ರೆಸ್‌ ಅಧ್ಯಕ್ಷ ದರ್ಶನ ಲಮಾಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತೀರ್ಪುಗಾರರಾಗಿ ನವೀನ ಜಾಂಬ್ಳೆ ಹಾಗೂ ನಮೀತಾ ಜೈನ್ ಅವರು ಭಾಗವಹಿಸಿದ್ದರು.

ಮಧ್ಯ ಕರ್ನಾಟಕ ದಾವಣಗೆರೆ ವಿಭಾಗಕ್ಕೆ ಸಂಬಂಧಪಟ್ಟ ಹಾವೇರಿ, ದಾವಣಗೆರೆ, ಉತ್ತರ ಕನ್ನಡ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಯಗಳ ಒಟ್ಟು 38ಕ್ಕೂ ಅಧಿಕ ತಂಡಗಳು ಸಂಪ್ರದಾಯಿಕ ಉಡುಗೆ-ತೊಡುಗೆಗಳಲ್ಲಿ ಭಾಗವಹಿಸಿದ್ದವು. ಕಿರಿಯರ ವಿಭಾಗದಲ್ಲಿ 14 ಹಾಗೂ ಹಿರಿಯರ ವಿಭಾಗದಲ್ಲಿ 24 ತಂಡಗಳು ಭಾಗವಹಿಸಿದ್ದವು.

ಜಿನಭವನಾ ಕೇಂದ್ರ ಸಮಿತಿ ವಿಲಾಸ್ ಪಾಸಣ್ಣವರ್, ದಾವಣಗೆರೆ ವಿಭಾಗ ಉಪಾಧ್ಯಕ್ಷ ಎಚ್.ಪಿ. ಸುಮತಿಕುಮಾರ್, ಕಾರ್ಯದರ್ಶಿ ಭರತರಾಜ್ ಎಸ್. ಹಜಾರಿ, ಸಂಯೋಜಕ ಅರಿಹಂತ ದುಂಡಣ್ಣನವರ, ಸಂತೋಷ ಜೈನ್, ವಿಮಲ ಬೋಗಾರ, ಪ್ರೀತಮ್ ದುಂಡಶಿ, ಪದ್ಮರಾಜ್ ಆರ್., ಜ್ಯೋತಿ ಅಜ್ಜಪ್ಪ, ಸಂಚಾಲಕ ಮದನಕುಮಾರ ಎಸ್.ಎಸ್., ಹಾವೇರಿ ಜೈನ್ ಸಮಾಜ ಅಧ್ಯಕ್ಷ ಚಂದ್ರನಾಥ ಕಳಸೂರ, ಹಾವೇರಿ ಜೈನ್ ಮಿಲನ್ ಅಧ್ಯಕ್ಷ ನವೀನ ಜಗಶೆಟ್ಟಿ, ಉಪಾಧ್ಯಕ್ಷ ಮಹಾವೀರ ನಡುವಿನಮನಿ, ಕಾರ್ಯದರ್ಶಿ ಪ್ರಶಾಂತ ಮುರಗಿ, ಸಂಚಾಲಕರಾದ ವಿಜಯ ಸಾತಗೊಂಡ ಹಾಗೂ ಸಂಜೀವಕುಮಾರ ಎಂ.ಇಂಡಿ ಹಾಗೂ ಹಾವೇರಿ ರತ್ನತ್ರಯ ಮಹಿಳಾ ಸಮಾಜದ ಅಧ್ಯಕ್ಷೆ ಪುಷ್ಪಾ ಕಳಸೂರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಪ್ಪು ಮಾಹಿತಿ ನೀಡಿ ಪಾರಾಗಲು ಪ್ರಯತ್ನಿಸದಿರಿ: ದದ್ದಲ್
ಕಲಬುರಗಿಯ ಕೆರೆ ಒತ್ತುವರಿ ಜಾಗ ತೆರವಿಗೆ ಲೋಕಾಯುಕ್ತರ ಸೂಚನೆ