ಡಂಬಳ: ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ, ಭಾವೈಕ್ಯತೆ ಭಾವ ಮೂಡಿಸುವುದು ತುಂಬಾ ಅಗತ್ಯವಿದೆ ಎಂದು ಡಂಬಳ-ಗದಗನ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ವೈರಿಯು ನಮ್ಮ ಒಳ್ಳೆಯ ಗುಣಗಳನ್ನು ಮೆಚ್ಚುವ ರೀತಿ ನಾವು ಬದುಕಬೇಕು. ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳ ಆದರ್ಶಗಳು ನಮ್ಮ ಬದುಕಿಗೆ ದಾರಿ ತೋರುತ್ತವೆ. ಅವರ ಆದರ್ಶ ಪಾಲಿಸಿದರೆ ಶ್ರೀಗಳಿಗೆ ನಾವು ಸಲ್ಲಿಸುವ ಕಾಣಿಕೆ ಎಂದು ಹೇಳಿದರು. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಉತ್ತಮ ಭವಿಷ್ಯ ನಿರ್ಮಾಣಕ್ಕೆ ಶಿಕ್ಷಣ ಅವಶ್ಯ. ಜ್ಞಾನವೇ ಶಕ್ತಿಯಾಗಿದ್ದು, ಉತ್ತಮ ನಾಗರಿಕನಾಗಲು ಶಿಕ್ಷಣ ಅತ್ಯವಶ್ಯ. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಮಾತೃ ಭಾಷೆ ಕನ್ನಡದಲ್ಲೇ ಶಿಕ್ಷಣ ನೀಡಬೇಕು. ಪರಿಸರ ರಕ್ಷಣೆ ಮಾಡುವ ಕಾರ್ಯ ಆಗಬೇಕು. ಶ್ರೀಮಠದ ಜಾತ್ರೆಯು ಭಾವೈಕ್ಯತೆಯ ಜಾತ್ರೆಯಾಗಿದೆ ಎಂದರು.
ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿ, ಜಗದ್ಗುರು ತೋಂಟದಾರ್ಯ ಮಠದ ಜಾತ್ರೆ ಅತ್ಯಂತ ವಿಶೇಷವಾದುದು. ಭಾವೈಕ್ಯದಿಂದ ಎಲ್ಲರೂ ಸೇರಿ ರೊಟ್ಟಿ ಜಾತ್ರೆ ಆಚರಣೆ ಮಾಡಲಾಗುತ್ತದೆ. 12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಗಾಗಿ ಶ್ರಮಿಸಿದರು. ಅವರಂತೆ ಲಿಂ. ಡಾ. ತೋಂಟದಸಿದ್ಧಲಿಂಗ ಶ್ರೀಗಳು ಸಮಾನತೆಗಾಗಿ, ಜ್ಞಾನಕ್ಕೆ, ಶಿಕ್ಷಣಕ್ಕಾಗಿ ಅತ್ಯುತ್ತಮ ಕೆಲಸ ಮಾಡಿದರು ಎಂದರು.ಮಾಜಿ ಸಚಿವ ಎಸ್.ಎಸ್. ಪಾಟೀಲ, ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರೊಟ್ಟಿ ಜಾತ್ರೆಯಲ್ಲಿ ಭಕ್ತರು ರೊಟ್ಟಿ, ಕರಿಂಡಿ, ಬಾನ, ಪುಂಡಿಪಲ್ಲೆ, ಅಗಸಿಚಟ್ನಿ ಪ್ರಸಾದ ಸವಿದರು.