ಸಮಾಜ ಕಾರ್ಯ ಅಧ್ಯಯನ ವಿಭಾಗದ ಕೌಶಲ್ಯ ಸಪ್ತಾಹ ಸಮಾರೋಪ
ಕನ್ನಡಪ್ರಭ ವಾರ್ತೆ ಸಂಡೂರುತಾಲೂಕಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಸಮಾಜಕಾರ್ಯ ಅಧ್ಯಯನ ವಿಭಾಗದ ವತಿಯಿಂದ ಕೌಶಲ್ಯ ಸಪ್ತಾಹದ ಸಮಾರೋಪ ಹಾಗೂ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಜರುಗಿತು.
ಬಿಕೆಜಿ ಸಂಸ್ಥೆಯ ಮಾನವ ಸಂಪನ್ಮೂಲ ಉಪ ನಿರ್ವಹಣಾಧಿಕಾರಿ ಶೈಲೇಶ ಗುಜ್ಜರ್ ಮಾತನಾಡಿ, ಸಮಾಜಕಾರ್ಯ ವಿದ್ಯಾರ್ಥಿಗಳು ಮಾನವ ಸಂಪನ್ಮೂಲ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವುದರಿಂದ ಹಿಡಿದು ಸಮುದಾಯದ ತಳ ಹಂತದವರೆಗೂ ಕಾರ್ಯನಿರ್ವಹಿಸುತ್ತಾರೆ. ಈ ನಿಟ್ಟಿನಲ್ಲಿ ವಿಶಾಲಾತ್ಮಕ ಹಾಗೂ ಸೂಕ್ಷ್ಮ ಹಂತದ ಕೌಶಲ್ಯ ಬೆಳೆಸಿಕೊಳ್ಳುವುದು ಅನಿವಾರ್ಯವಾಗಿದೆ ಹಾಗೂ ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ಕೌಶಲ್ಯಯುತ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಅವಶ್ಯಕ ಎಂದು ಹೇಳಿದರು.ಬಿಕೆಜಿ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಗೋಪಾಲ್ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ಅಧ್ಯಯನ ವಿಭಾಗವು ಬಹಳ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗುವ ಎಲ್ಲ ಕಾರ್ಯ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿ, ಉತ್ತಮ ಸಮಾಜ ಕಾರ್ಯಕರ್ತರನ್ನು ಸಮಾಜಕ್ಕೆ ನೀಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜಕಾರ್ಯ ಅಧ್ಯಯನ ವಿಭಾಗದ ಸಂಯೋಜಕಿ ಡಾ. ಸುಮಾ ಕೆ.ಜಿ. ಮಾತನಾಡಿ, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಸಮಾಜಕಾರ್ಯ ಅಧ್ಯಯನ ವಿಭಾಗ ಎರಡು ದಶಕಗಳನ್ನು ಪೂರೈಸಿ ಯಶಸ್ವಿಯಾಗಿ ಸಾಗುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಮತ್ತು ಅವರ ಭವಿಷ್ಯದ ಅವಶ್ಯಕತೆಗಳನ್ನು ಈಡೇರಿಸುವಲ್ಲಿ ಸದಾ ಚಿಂತನಶೀಲವಾಗಿದೆ. ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ವಿಷಯಗಳ ಜತೆಗೆ ಕೌಶಲ್ಯಗಳನ್ನು ಬೆಳೆಸುವ ವಿನೂತನ ಪ್ರಯತ್ನಕ್ಕೆ ವಿಭಾಗ ಕೆಲಸ ಮಾಡುತ್ತಿದೆ. ಜೀವನ ಕೌಶಲ್ಯಗಳಲ್ಲಿ ಪ್ರಮುಖವಾಗಿರುವ ಸಂವಹನ, ತಂಡ ಕಾರ್ಯ, ಸಮಯ ನಿರ್ವಹಣೆ, ವ್ಯಕ್ತಿತ್ವ ವಿಕಸನದಂತಹ ಕೌಶಲ್ಯಗಳಿಂದ ಹಿಡಿದು ತಾಂತ್ರಿಕ ಕೌಶಲ್ಯಗಳಾದ ಅಡ್ವಾನ್ಸ್ ಎಕ್ಸೆಲ್, ಪವರ್ ಬಿ.ಐ., ರೆಸುಮೆ ತಯಾರಿಕೆ, ವೃತ್ತಿಪರ ಡಿಜಿಟಲ್ ಛಾಯಾ ನಿರ್ಮಾಣ, ಕೃತಕ ಬುದ್ಧಿಮತ್ತೆ ಸಾಧನಗಳು, ಪ್ರಾಂಪ್ಟ್ ಎಂಜಿನಿಯರಿಂಗ್‌ನಂತಹ ಹಲವು ವಿಷಯಗಳ ಬಗ್ಗೆ ವಿಸ್ತೃತ ಕಾರ್ಯಾಗಾರಗಳನ್ನು ಹಮ್ಮಿಕೊಂಡು, ವಿದ್ಯಾರ್ಥಿಗಳ ಭವಿಷ್ಯದ ಹಿತಾಸಕ್ತಿ ಕಾಯುವಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಮಾಜ ಅಧ್ಯಯನ ವಿಭಾಗದ ಉಪನ್ಯಾಸಕರಾದ ಲಕ್ಷ್ಮಣ ತೋಳಿ, ಡಾ. ಹನುಮಂತ ಜಿ., ಹನುಮಂತ ಎನ್. ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರವೀಣ ಕಾರ್ಯಕ್ರಮ ನಿರೂಪಿಸಿದರು. ರೇಣುಕಾ ಸ್ವಾಗತಿಸಿ, ವಂದಿಸಿದರು.