ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವ ಪ್ರಕ್ರಿಯೆ ವ್ಯಾಪಕಗೊಳ್ಳುವ ಅಗತ್ಯವಿದೆ ಎಂದು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.ಚಿತ್ರದುರ್ಗ ತಾಲೂಕಿನ ಡಿ.ಎಸ್ ಹಳ್ಳಿಯ ಜ್ಞಾನಪೂರ್ಣ ಶಾಲೆಯಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಸಾಹಿತ್ಯ ಶ್ರಾವಣ - 2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಮಕ್ಕಳಲ್ಲಿ ಅದಮ್ಯ ಚೈತನ್ಯ ಅಡಗಿದೆ. ಅದು ವ್ಯಕ್ತಗೊಳ್ಳಲು ಪೂರಕ ವಾತಾವಾರಣ ಸೃಷ್ಠಿಸಬೇಕೆಂದರು.
ಮಕ್ಕಳ ಸಾಹಿತ್ಯ ಜ್ಞಾನದ ಜೊತೆಗೆ ಅವರಿಗೆ ಬದುಕುವ ಕಲೆಯನ್ನು ಕಲಿಸುತ್ತದೆ. ಸಾಹಿತಿಗಳು ಮಕ್ಕಳ ಸಾಹಿತ್ಯ ಕೃತಿಗಳನ್ನು ರಚಿಸುವುದಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ವಿದ್ಯಾರ್ಥಿಗಳನ್ನು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿದ್ದಲ್ಲಿ ವಿಶ್ವ ಸಾಹಿತ್ಯಕ್ಕೆ ಅಮೋಘ ಕೊಡುಗೆ ನೀಡಬಲ್ಲರು. ಮಕ್ಕಳ ಸಾಹಿತ್ಯದ ಅಭಿರುಚಿ ಸಾಮಾನ್ಯ ಜನರನ್ನು ಸಹ ತಲುಪಬೇಕು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ದಶಮಾನೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸರಣಿ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಹಾಗು ಜಿಲ್ಲಾ ಸಾಹಿತ್ಯ ಸಮ್ಮೇಳನ ಆಯೋಜಿಸುವ ಕುರಿತು ಸಹ ಚಿಂತನೆ ನಡೆಯುತ್ತಿದೆ ಎಂದರು.ಎಸ್ಆರ್‌ಎಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಣ್ಣಪ್ಪ ಮಾತನಾಡಿ, ಸಾಹಿತ್ಯ ಒಂದು ಭಾಷೆಯಾಗಿ ಅಸ್ಥಿತ್ವ ಕಾಯ್ದುಕೊಂಡಿಲ್ಲ. ಅದು ಮನುಷ್ಯನ ಸಂಸ್ಕಾರದ ಸಂವಹನ ಮಾಧ್ಯಮ. ಕನ್ನಡ ಸಾಹಿತ್ಯದಲ್ಲಿ ಪಂಪ, ಪೊನ್ನ, ರನ್ನ ರೀತಿಯಲ್ಲಿ ಮಕ್ಕಳ ಸಾಹಿತ್ಯದಲ್ಲೂ ಪಂಜೆ ಮಂಗೇಶರಾಯರು, ಅರಗ ಲಕ್ಷ್ಮಣರಾವ್ ಮತ್ತು ಜಿ.ಪಿ.ರಾಜರತ್ನಂ ರಂತಹ ರತ್ನತ್ರಯರು ಇದ್ದಾರೆ. ಇವರೆಲ್ಲಾ ಬರೆದಿರುವ ಸಾಹಿತ್ಯ ಮಕ್ಕಳ ಬೌದ್ಧಿಕ ಮಟ್ಟಕ್ಕೆ ಹತ್ತಿರವಾಗುವಂತಿವೆ. ನಾಗರಹಾವೆ ಹಾವೊಳು ಹೂವೆ , ಬಣ್ಣದ ತಗಡಿನ ತುತ್ತೂರಿ ಸಾರ್ವಕಾಲಿಕವಾಗಿ ನಿಲ್ಲುತ್ತವೆ ಎಂದರು.
ಸಾಹಿತ್ಯ ಹಿರಿಯರಿಗೆ, ಪಂಡಿತ ಪಾಮರರಿಗೆ ಮಾತ್ರವಲ್ಲ. ಚಿಕ್ಕವರಿಂದಲೇ ಸಾಹಿತ್ಯದಂತಹ ಅಭಿರುಚಿಯನ್ನು ಬೆಳೆಸಬೇಕು. ಈ ದೇಶದ ಸಂಪತ್ತು ಮಕ್ಕಳು. ಅವರಿಗಾಗಿಯೇ ಮಕ್ಕಳ ಸಾಹಿತ್ಯ ಪರಿಷತ್ ಇದೆ. ಇದಕ್ಕೊಂದು ಜೀವ ತುಂಬಿ ಇಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಖುಷಿ ಸಂಗತಿ ಎಂದು ಹೇಳಿದರು.ಜ್ಞಾನಪೂರ್ಣ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಎನ್.ಎಲ್ ವೆಂಕಟೇಶ್ ರೆಡ್ಡಿ ಮಾತನಾಡಿ, ಮಸಾಪ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ನಮ್ಮ ಶಾಲೆಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ಶಾಲಾ ಘಟಕವನ್ನು ಆರಂಭಿಸಲಾಗುವುದು ಎಂದರು. ಜ್ಞಾನಪೂರ್ಣ ಸಮೂಹ ಸಂಸ್ಥೆಗಳ ಸಹಕಾರ್ಯದರ್ಶಿ ಸುಹಾಸಿನಿ ವೆಂಕಟೇಶ್ ರೆಡ್ಡಿ, ಆಡಳಿತಾಧಿಕಾರಿ ಡಾ.ಸ್ವಾಮಿ ಕೆ.ಎನ್, ಜಿಲ್ಲಾ ಮಸಾಪ ಉಪಾಧ್ಯಕ್ಷ ಬಿ.ವಿಜಯಕುಮಾರ್ ಇದ್ದರು.