ಸವಣೂರ: ಕನ್ನಡ ನಾಡು, ನುಡಿ, ನೆಲ, ಜಲವನ್ನು ಸಂರಕ್ಷಿಸುವದು ನಮ್ಮೆಲ್ಲರ ಕರ್ತವ್ಯ. ಕನ್ನಡಕ್ಕೆ ಯಾವುದೇ ಅಡೆತಡೆ ಬಂದರು ಒಗ್ಗಟ್ಟಾಗಿ ನಿಂತು ಹೋರಾಡುವದು ಅವಶ್ಯವಾಗಿದೆ ಎಂದು ಪ್ರಭಾರ ಉಪವಿಭಾಗಾಧಿಕಾರಿ ಮಮತಾ ಹೊಸಗೌಡ್ರ ಹೇಳಿದರು.ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗುತ್ತಿರುವ ಸವಣೂರು ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆಯುವುದರ ಜೊತೆಗೆ 8 ಜ್ಞಾನಪೀಠ ಪ್ರಶಸ್ತಿಯನ್ನು ಪಡೆದವರ ಸಾಲಿನಲ್ಲಿ ನಮ್ಮ ಸವಣೂರಿನ ಹೆಮ್ಮೆಯ ಸುಪುತ್ರ ಡಾ. ವಿ.ಕೃ. ಗೋಕಾಕರು ಒಬ್ಬರು. ಅವರು ಜನ್ಮ ತಾಳಿದ ಪುಣ್ಯ ಭೂಮಿಯಲ್ಲಿ ೮ನೇ ಸಾಹಿತ್ಯ ಸಮ್ಮೇಳನ ವಿಜೃಂಭಣೆಯಿಂದ ಜರುಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.ತಹಸೀಲ್ದಾರ ಭರತರಾಜ ಕೆ.ಎನ್. ನಾಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದ್ರಾವಿಡ ಗುಂಪಿನ ೨೦ಕ್ಕೂ ಹೆಚ್ಚು ಭಾಷೆಗಳಲ್ಲಿ ಕನ್ನಡವೂ ಸೇರಿದೆ. ಇದು ಅತ್ಯಂತ ಹಳೆಯ ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದು, ಅಂತಹ ಕನ್ನಡ ನಾಡಿನ ಭೂಮಿಯಲ್ಲಿ ಜನಿಸಿರುವ ನಾವುಗಳು ಪುಣ್ಯವಂತರು. ಅಂತಹ, ಕನ್ನಡ ಭೂವನೇಶ್ವರಿ ತಾಯಿಯ ೮ನೇ ರಥವನ್ನು ತಾಲೂಕಿನಲ್ಲಿ ವಿಶೇಷವಾಗಿ ಎಳೆಯುತ್ತಿರುವ ಶ್ಲಾಘನೀಯವಾಗಿದೆ ಎಂದರು.ಕನ್ನಡ ಸಾಹಿತ್ಯ ಪರಿಷತ್ ಧ್ವಜಾರೋಹಣವನ್ನು ಕಸಾಪ ತಾಲೂಕು ಘಟಕ ಅಧ್ಯಕ್ಷ ಚಂದ್ರಗೌಡ ಪಾಟೀಲ ನೆರವೇರಿಸಿದರು.ಧ್ವಜಾರೋಹಣವನ್ನು ವಿವಿಧ ದೈಹಿಕ ಶಿಕ್ಷಕರು ನೆರವೇರಿಸಿದರು.ಸರ್ವಾಧ್ಯಕ್ಷರ ಮೆರವಣಿಗೆ: ಪಟ್ಟಣದಲ್ಲಿ ಮಂಗಳವಾರ ಜರುಗಿದ ತಾಲೂಕು ಮಟ್ಟದ ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ. ವೀರಯ್ಯ ಗುರುಮಠ ಅವರ ಸಾರೋಟದ ಮೆರವಣಿಗೆಗೆ ಬಿಜೆಪಿ ಮುಖಂಡ ಗಂಗಾಧರ ಬಾಣದ ಹಾಗೂ ಅಂಜುಮನ್ ಸಂಸ್ಥೆ ಅಧ್ಯಕ್ಷ ಜೀಶಾನಖಾನ ಪಠಾಣ ಚಾಲನೆ ನೀಡಿದರು.