ಪ್ರತಿಭಾನ್ವಿತರಿಗೆ ವೇದಿಕೆ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ

KannadaprabhaNewsNetwork | Published : Jan 29, 2025 1:31 AM

ಸಾರಾಂಶ

It is our responsibility to provide a platform for the talented.

-ಜಾತ್ರಾ ಮಹೋತ್ಸವದ ಧಾರ್ಮಿಕ, ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮದಲ್ಲಿ ಚಿತ್ರನಟಿ ಪ್ರೇಮಾ

------

ಕನ್ನಡಪ್ರಭ ವಾರ್ತೆ, ಯಾದಗಿರಿ

ಕಳೆದ 25 ವರ್ಷಗಳ ಹಿಂದೆ ನಾನು ಚಿತ್ರರಂಗಕ್ಕೆ ಆಕಸ್ಮಿಕವಾಗಿ ಪ್ರವೇಶ ಮಾಡಿದೆ. ಪಂಚಭಾಷೆಗಳಲ್ಲಿ ನಟಿಸಿದೆ. ಒಂದು ಕುಟುಂಬಕ್ಕೆ, ಸಮಾಜಕ್ಕೆ ಒಳ್ಳೇಯ ಸಂದೇಶ ನೀಡುವ ಪಾತ್ರಗಳಲ್ಲಿ ನಟಿಸಿ, ಎಲ್ಲರ ಮೆಚ್ಚುಗೆ ಗಳಿಸಿದ್ದೇನೆ. ಅದಕ್ಕೆ ನೀವು ನೀಡಿರುವ ಅಭಿಮಾನದ ಪ್ರೋತ್ಸಾಹಕ್ಕೆ ಚಿರಋಣಿ ಎಂದು ಚಿತ್ರ ನಟಿ ಪ್ರೇಮಾ ಹೇಳಿದರು.

ಇಬ್ರಾಹಿಂಪೂರ ಗ್ರಾಮದಲ್ಲಿರುವ ಸಾಯಿ ಮಂದಿರದ ಆವರಣದಲ್ಲಿ 3ನೇ ವರ್ಷದ ಜಾತ್ರಾ ಮಹೋತ್ಸವದ ಧಾರ್ಮಿಕ ಹಾಗೂ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಹಿಂದೆ ನಾಡಿನಲ್ಲಿ ರಾಜಕುಮಾರ, ವಿಷ್ಣುವರ್ಧನ್, ಅಂಬರೀಶ, ಲೀಲಾವತಿ, ಜಯಂತಿ ಇನ್ನಿತರ ನಟ-ನಟಿಯರು ಒಳ್ಳೆಯ ಸಿನಿಮಾಗಳನ್ನು ನಾಡಿಗೆ ಪರಿಚಯಿಸುವ ಮೂಲಕ ಚಿತ್ರರಂಗಕ್ಕೆ ಮೆರಗು ತಂದರು. ಆದರೆ, ಇಂದಿನ ಚಿತ್ರರಂಗದಲ್ಲಿ ನಾವು ಹಲವಾರು ವ್ಯತ್ಯಾಸಗಳನ್ನು ಕಾಣುತ್ತಿದ್ದೇವೆ. ನಾನು ಈಗಾಗಲೇ ಹಲವಾರು ನಿರ್ದೇಶಕರೊಂದಿಗೆ ಚರ್ಚಿಸಿ, ಒಂದು ಅದ್ಭುತ ಸಿನಿಮಾ ಮಾಡಲು ಸಿದ್ಧತೆಯಲ್ಲಿದ್ದೇವೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗ ಶರಣರ, ಸೂಫಿ-ಸಂತರ ನಾಡಾಗಿದೆ. ಇಲ್ಲಿ ಮೊದಲಿನಿಂದಲೂ ಜನರು ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೆಂಬಲಿಸುತ್ತಾ ಬಂದಿರುವುದನ್ನು ಕಂಡಿದ್ದೇನೆ. ಅಲ್ಲದೇ ಹಲವಾರು ಪ್ರತಿಭಾವಂತ ಕಲಾವಿದರು ಇಲ್ಲಿದ್ದಾರೆ. ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದ ಅವರು, ಸಾಯಿಬಾಬಾರ ದರ್ಶನ ಪಡೆದು, ನನ್ನಲ್ಲಿ ಹೊಸ ಧನಾತ್ಮಕ ಶಕ್ತಿ ಮೂಡಿದೆ. ಈ ಕ್ಷೇತ್ರ ಇನ್ನಷ್ಟೂ ಪ್ರಗತಿಯಾಗಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾಜಿ ಸಚಿವ ರಾಜೂಗೌಡ, ಸಾಯಿಬಾಬಾರ ಜಾತ್ರೆ ಜನರಲ್ಲಿ ಸಾಮರಸ್ಯ ಮೂಡಿಸಿದೆ. ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ರಸಮಂಜರಿ ಕಾರ್ಯಕ್ರಮ ನಡೆಸುವ ಮೂಲಕ ನಾಡಿನ ಪ್ರತಿಭಾವಂತ ಕಲಾವಿದರ ಪ್ರದರ್ಶನ ಈ ಭಾಗದ ಜನರು ವಿಕ್ಷೀಸಲು ಸಹಕಾರಿ ಎಂದು ಹೇಳಿದರು.

ಹಿರಿಯ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ರಾಷ್ಟ್ರಕೂಟರು ಕವಿರಾಜ ಮಾರ್ಗ ಗ್ರಂಥ ನೀಡುವ ಮೂಲಕ ಹಿರಿಮೆಯನ್ನು ಹೆಚ್ಚಿಸಿದರು ಎಂದು ಕಲ್ಯಾಣ ಕರ್ನಾಟಕದ ಸಾಹಿತ್ಯ, ಕಲೆ, ಸಂಗೀತ ಕ್ಷೇತ್ರಗಳ ಮೆಲುಕು ಹಾಕಿ ವಿವರಿಸಿದರು.

ಸಮಾರಂಭದ ಸಾನಿಧ್ಯ ವಹಿಸಿದ ಗುರುಮಠಕಲ್ ಖಾಸಾಮಠದ ಪೀಠಾಧಿಪಿತ ಶಾಂತವೀರ ಮಹಾಸ್ವಾಮೀಜಿ ಮತ್ತು ಅರಕೇರಾ (ಕೆ) ಗುರುಲಿಂಗ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಮಂದಿರ ಅಧ್ಯಕ್ಷ ಮಹಾರಾಜ ದಿಗ್ಗಿ ವಹಿಸಿ ಮಾತನಾಡಿದರು. ವೇದಿಕೆ ಮೇಲೆ ಸೂಗೂರ (ಎನ್) ಭೋಜಲಿಂಗೇಶ್ವರ ಮಠದ ಹಿರಗಪ್ಪ ತಾತನವರು, ಚಟ್ನಳ್ಳಿಯ ವಿಶ್ವಾರಾಧ್ಯ ಶ್ರೀ, ಸಿದ್ದಪ್ಪಾಜಿ, ಚಿತ್ರನಟಿ ಶರಣ್ಯ ಶೆಟ್ಟಿ, ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ, ಸುಭಾಷ ರಾಠೋಡ, ಶ್ರೀನಿವಾಸರಡ್ಡಿ ಪಾಟೀಲ್ ಚನ್ನೂರ, ಡಾ. ಶರಣಭೂಪಾಲರಡ್ಡಿ ನಾಯ್ಕಲ್, ಬಸವರಾಜ ಪಡುಕೋಟೆ, ಜಹಿರುದ್ದೀನ್, ವಿಶ್ವನಾಥ ಹಿರೇಮಠ, ಹಣಮಂತರಡ್ಡಿ ಪಾಟೀಲ್ ಇಬ್ರಾಹಿಂಪೂರ, ಚನ್ನಾರಡ್ಡಿ ಜಾದವ, ಅಲ್ಲಿಸಾಬ್ ನಾಯ್ಕಲ್, ಮಲ್ಲಯ್ಯ ಕಸಬಿ, ಗಣೇಶ ದುಪ್ಪಲ್ಲಿ ಇದ್ದರು.

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕಾಮಿಡಿ ಕಿಲಾಡಿಗಳು, ಸರಿಗಮಪ, ಜೋಡಿ ನಂ.1, ಡಾನ್ಸ್ ಕರ್ನಾಟಕ ಡಾನ್ಸ್ ಕಲಾವಿದರ ತಂಡಗಳು ಸಂಗೀತ ಕಾರ್ಯಕ್ರಮ ಪ್ರೇಕ್ಷರನ್ನು ರಂಜಿಸಿತು. ನಾಗರಾಜ ಪಾಟೀಲ್ ಸ್ವಾಗತಿಸಿದರು. ಡಾ. ಜ್ಯೋತಿಲತಾ ತಡಿಬಿಡಿಮಠ ನಿರೂಪಿಸಿದರು, ಮಾಳಪ್ಪ ಯಾದವ ವಂದಿಸಿದರು.

------

ಫೋಟೊ: ಶಹಾಪುರ ತಾಲೂಕಿನ ಇಬ್ರಾಹಿಂಪೂರ ಗ್ರಾಮದಲ್ಲಿರುವ ಸಾಯಿ ಮಂದಿರದ ಆವರಣದಲ್ಲಿ ಹಮ್ಮಿಕೊಂಡಿದ್ದ 3ನೇ ವರ್ಷದ ಜಾತ್ರಾ ಮಹೋತ್ಸವದ ಧಾರ್ಮಿಕ ಹಾಗೂ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

27ವೈಡಿಆರ್11

------

ಫೋಟೊ:ಶಹಾಪುರ ತಾಲೂಕಿನ ಇಬ್ರಾಹಿಂಪೂರ ಗ್ರಾಮದಲ್ಲಿರುವ ಸಾಯಿ ಮಂದಿರದ ಆವರಣದಲ್ಲಿ ಹಮ್ಮಿಕೊಂಡಿದ್ದ 3ನೇ ವರ್ಷದ ಜಾತ್ರಾ ಮಹೋತ್ಸವದ ಧಾರ್ಮಿಕ ಹಾಗೂ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮದಲ್ಲಿ ಕನ್ನಡ ಖ್ಯಾತ ಚಿತ್ರನಟಿ ಪ್ರೇಮಾ ಮಾತನಾಡಿದರು.

27ವೈಡಿಆರ್10

Share this article