ಮಕ್ಕಳಿಗೆ ಲಸಿಕೆ ಹಾಕಿಸುವುದು ಅಗತ್ಯ

KannadaprabhaNewsNetwork |  
Published : Sep 19, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಟಿಂಟ್ ಬಾಟಂ  | Kannada Prabha

ಸಾರಾಂಶ

ಚಿತ್ರದುರ್ಗ ಮಾರುತಿ ನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ಲಸಿಕಾ ಅಧಿವೇಶನ ನಡೆಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ನವಜಾತ ಶಿಶುಗಳಿಗೆ ಮೊದಲ ವರ್ಷದ ಹುಟ್ಟುಹಬ್ಬದ ಒಳಗಾಗಿ 12 ಮಾರಕ ರೋಗಗಳ ವಿರುದ್ಧ ತಪ್ಪದೇ ಲಸಿಕೆ ಹಾಕಿಸುವ ಮೂಲಕ ಪಾಲಕರು ಜಾಗೃತರಾಗಬೇಕು ಎಂದು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ವಿ.ಕೊಣ್ಣೂರ ಹೇಳಿದರು.

ನಗರದ ರೈಲು ನಿಲ್ದಾಣದ ಬಳಿಯ ಮಾರುತಿ ನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ನಡೆದ ಲಸಿಕಾ ಅಧಿವೇಶನಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಅವರು ತಾಯಂದಿರಿಗೆ ಜಾಗೃತಿ ಮೂಡಿಸಿ ಮಾತನಾಡಿದರು.

ಪೋಲಿಯೋ, ಹೆಪಟೈಟಿಸ್ ಬಿ, ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯು, ನ್ಯುಮೋನಿಯಾ, ವೈರಲ್ ಭೇದಿ, ಮೆದುಳು ಜ್ವರ ಹಾಗೂ ದಡಾರ ಸೇರಿದಂತೆ 12 ಮಾರಕ ರೋಗಗಳು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಮಾರಣಾಂತಿಕವಾಗಬಹುದು. ಶಿಶು ಮರಣ ಪ್ರಮಾಣ ತಡಗಟ್ಟಿ, ಮಗುವಿನ ಸಶಕ್ತ ಬೆಳವಣಿಗೆಗೆ ಆರೋಗ್ಯ ಇಲಾಖೆಯೊಂದಿಗೆ ಪಾಲಕರು ಕೈಜೋಡಿಸಬೇಕು. ಪ್ರಸ್ತುತ ನೀಡಲಾಗುತ್ತಿರುವ ಲಸಿಕೆ, ಅದರ ಪ್ರಯೋಜನ ಹಾಗೂ ಮುಂದಿನ ಡೋಸ್‍ನ ಸಮಯದ ಬಗ್ಗೆ ತಾಯಂದಿರು ಮಾಹಿತಿ ಹೊಂದಿರಬೇಕು. ಲಸಿಕೆ ಹಾಕಿಸಲು ಬರುವಾಗ ತಾಯಿ ಕಾರ್ಡ್ ತರುವುದು ಕಡ್ಡಾಯ ಎಂದರು.

ಮಗು ಜನಿಸಿದ ಅರ್ಧ ಗಂಟೆಯೊಳಗೆ ತಪ್ಪದೇ ಎದೆ ಹಾಲು ಕೊಡಬೇಕು. ಇದು ಮಗುವಿನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆರು ತಿಂಗಳವರೆಗೆ ಕೇವಲ ಎದೆಹಾಲು ಹಾಗೂ ಆರು ತಿಂಗಳ ನಂತರ ಪೂರಕ ಆಹಾರದ ಜೊತೆಗೆ ಕನಿಷ್ಠ ಎರಡು ವರ್ಷಗಳವರೆಗೆ ಎದೆಹಾಲು ನೀಡುವುದು ಅಗತ್ಯ. ಮಗು ಜನಿಸಿದ ತಕ್ಷಣ ಜೇನುತುಪ್ಪ ಅಥವಾ ಸಕ್ಕರೆ ನೀರು ನೀಡಬಾರದು ಎಂದು ಸಲಹೆ ನೀಡಿದರು.

ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಕೆ. ಲಕ್ಕಮ್ಮ ಅವರು ಮಕ್ಕಳಿಗೆ ಲಸಿಕೆ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಎಸ್, ಆಶಾ ಕಾರ್ಯಕರ್ತೆಯರಾದ ಖುಷ್ಬು, ಆಶಾ, ಆರ್.ಮಹಾದೇವಿ ಹಾಗೂ ಸ್ಥಳೀಯ ತಾಯಂದಿರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಡಾಳು ಸ್ವರ್ಣಗೌರಮ್ಮ ದೇವಿ ದರ್ಶನಕ್ಕೆ ಭಕ್ತರ ದಂಡು
ಜನಮನ ಸೆಳೆದ ಕಲ್ಯಾಣ ಕರ್ನಾಟಕ ಉತ್ಸವ