ಪ್ರಧಾನಿ ನರೇಂದ್ರ ಮೋದಿ ಅಂದರೆ ಸ್ಥಿರತೆ, ಭದ್ರತೆ

KannadaprabhaNewsNetwork |  
Published : Sep 19, 2026, 01:15 AM IST
ಫೋಟೋ ವಿವರಣೆ : ನಗರದ ಪ್ರವಾಸಿ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಅವರ 25 ವರ್ಷಗಳ ಜನಸೇವೆಗೆ ಗೌರವಿಸುವ ಸಲುವಾಗಿ ಹಮ್ಮಿಕೊಂಡಿರುವ ಸೇವಾ ಕಾರ್ಯದ ಕುರಿತು ಸಂಸದ ಗೋವಿಂದ ಕಾರಜೋಳ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಸಂಸದ ಗೋವಿಂದ ಕಾರಜೋಳ ಅಭಮತ । ಮೋದೀಜಿ 25 ವರ್ಷದ ಜನಸೇವೆಗಾಗಿ ಸೇವಾ ಕಾರ್ಯ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಾಧನೆ ಮುಂದಿಟ್ಟು ಮತ ಕೇಳಿದ ಪ್ರಧಾನಿ ಮೋದಿಯವರು ಪ್ರಪಂಚದ ಎಲ್ಲ ದೇಶಗಳ ಜತೆ ಉತ್ತಮ ಬಾಂದವ್ಯ, ವ್ಯವಹಾರ, ನೆರೆ ಹೊರೆ ರಾಷ್ಟ್ರಗಳಿಗೆ ನೆರವು ನೀಡಿ 25 ವರ್ಷ ಯಾವುದೇ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಅವರ 25 ವರ್ಷಗಳ ಜನಸೇವೆಗೆ ಗೌರವಿಸುವ ಸಲುವಾಗಿ ಹಮ್ಮಿಕೊಂಡಿರುವ ಸೇವಾ ಕಾರ್ಯದ ಕುರಿತು ಹಾಗೂ ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ವಿಫಲ ಆಗಿರುವ ಕುರಿತು ಪತ್ರಿಕಾಗೋಷ್ಠಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಈ ದೇಶದ ಭರವಸೆ. ಸೆ.17 ರಿಂದ ಅ.17ರವರೆಗೆ ವಿಶಿಷ್ಟ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ನರೇಂದ್ರ ಮೋದಿ ಕಾಲದಲ್ಲಿ ಸಾಮಾಜಿಕ ಕಲ್ಯಾಣ, ಗರೀಬ್ ಕಲ್ಯಾಣ, ಅಕ್ಕಿ ವಿತರಣೆ, ಉಜ್ವಲ, ಪಿಎಂ ಸ್ವನಿಧಿ, ವಿಶ್ವಕರ್ಮ ಯೋಜನೆ ಉಜ್ವಲ ಯೋಜನೆ ನೈಸರ್ಗಿಕ ಸಂಪತ್ತಿಗೆ ಕೊಡುಗೆ ನೀಡಿದ್ದಾರೆ. 14 ಕೋಟಿ ಶೌಚಾಲಯ ನಿರ್ಮಾಣ, ಸ್ವಚ್ಛ ಭಾರತದ ಸಾಧನೆ ಜನೌಷಧಿ ಮೂಲಕ ಶೇ.90ರಷ್ಟು ಕಡಿಮೆ ದರದಲ್ಲಿ ಬಡವರಿಗೆ ಔಷಧಿ ದೊರೆಯುವಂತೆ ಮಾಡಿದ್ದಾರೆ.

ನರೇಂದ್ರ ಮೋದಿಯವರ ಕಾಲದಲ್ಲಿ ದೇಶದ ಆರ್ಥಿಕ ಕ್ರಾಂತಿಯಾಗಿದೆ. ಮೋದಿ ಪ್ರಧಾನಿ ಆಗುವ ಮುನ್ನ ರಾಷ್ಟ್ರ ಆರ್ಥಿಕತೆಯಲ್ಲಿ 14ನೇ ಸ್ಥಾನದಲ್ಲಿತ್ತು. ಈಗ ಭಾರತ 4ನೇ ಸ್ಥಾನ ತಲುಪಿದ್ದು 3ನೇ ಸ್ಥಾನಕ್ಕೆ ದಾಪುಗಾಲು ಇಡುತ್ತಿದ್ದೇವೆ. ಈ ಹಿಂದೆ ಭಾರತ ಸಾಲ ಕೇಳಲು ಬರುತ್ತದೆಂಬ ಭಾವನೆ ವಿದೇಶಗಳಲ್ಲಿತ್ತು. ಈಗ ರತ್ನಗಂಬಳಿ ಹಾಸಿ ಮೋದಿಗೆ ಆಹ್ವಾನಿಸುತ್ತಿದ್ದಾರೆ ಎಂದರು.

ಮೋದಿ ಸರ್ಕಾರ ತಂತ್ರಜ್ಞಾನಕ್ಕೆ ಹೆಚ್ಚು ಆದ್ಯತೆ ನೀಡಿದೆ. ನೋಟ್ ಅಮಾನ್ಯದಿಂದ ನಕಲಿ ನೋಟ್ ಹಾವಳಿಗೆ ಬ್ರೇಕ್ ಬಿದ್ದಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ದಾರೆ. ರಾಜ್ಯದಲ್ಲಿ ಬೊಮ್ಮಾಯಿ ಕಾಲದಲ್ಲಿ ಶಿಕ್ಷಣ ನೀತಿ ಜಾರಿಯಲ್ಲಿತ್ತು.

ಸಿದ್ದರಾಮಯ್ಯ ಕಾಲದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗೆ ಬ್ರೇಕ್ ಬಿದ್ದಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸದ ಹಿನ್ನೆಲೆ ತ್ರಿಶಂಕು ಸ್ಥಿತಿಯಲ್ಲಿದೆ. ರಾಜ್ಯ ಸರ್ಕಾರಕ್ಕೆ ದೂರದೃಷ್ಟಿ ಇಲ್ಲದ ಕಾರಣ ವಿದ್ಯುತ್ ಅಭಾವ ಉಂಟಾಗಿದೆ. ಜಿಲ್ಲೆಯಲ್ಲಿ 20ಲಕ್ಷ ಜಾನುವಾರುಗಳಿವೆ. ಗೋಶಾಲೆ, ಮೇವು ಬ್ಯಾಂಕ್ ತೆರೆಯಲು ನಾನು ಒತ್ತಾಯಿಸಿದ್ದೇನೆ ಎಂದ ಅವರು ಕಾಟಾಚಾರಕ್ಕೆ ಬರ ಘೋಷಣೆ ಮಾಡಿದ್ದಾರೆ. ಒಂದೇ ಒಂದು ರುಪಾಯಿ ಪರಿಹಾರಕ್ಕೆ ಕ್ರಮ ಕೈಗೊಂಡಿಲ್ಲ. ಗೋಶಾಲೆ ನಡೆಸುವ ಮಠಮಾನ್ಯಗಳಿಗೆ ಸಹಾಯ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು, ಹಿರಿಯೂರು ವ್ಯಾಪ್ತಿಯಲ್ಲಿ ಹನಿ ನೀರಿಗೂ ಪರದಾಡುವ ಸ್ಥಿತಿಯಿದೆ. ಉಪಚುನಾವಣೆ ಕಾರಣಕ್ಕೆ ಕೆಲವರು ಗಿಮಿಕ್ ಮಾಡುತ್ತಿದ್ದಾರೆ. ವಿಬಿ ಜಿ ರಾಮ್ ಜಿ ಯೋಜನೆಯಡಿ ಪರಿಹಾರ ಕ್ರಮ ಕೈಗೊಳ್ಳಬಹುದು. ಬೆಳೆ ವಿಮೆ ನೀಡಬೇಕು, ಬೆಳೆ ನಷ್ಟವಾದ ರೈತರ ಸಾಲಮನ್ನಾ ಮಾಡಬೇಕು. ಸಿಎಂ ಡಿಕೆಶಿ ನೂರು ದಿನಗಳ ಸಾಧನೆ ಸಮಾವೇಶ ಮಾಡಿದರು. ಕೇವಲ ಬಿಳಿ ಕಾಗದದ ಮೇಲೆ ಸಹಿ ಮಾಡಿದರೆ ಸಾಧನೆ ಅಲ್ಲ ಮಾತು ಕಡಿಮೆ ಮಾಡಿ ಕೆಲಸ ಮಾಡಲಿ. ಸರ್ಕಾರದ ನೂರು ದಿನದ ಸಾಧನೆ ಶೂನ್ಯ. ಮಾತಿನಲ್ಲಿ ಮಂಟಪ ಕಟ್ಟಿ ಮನೆಗೆ ಹೋಗೋದು ಅಲ್ಲ. ರಾಜ್ಯದಲ್ಲಿ ರೇಪ್, ಮರ್ಡರ್ ಪ್ರಕರಣಗಳು ಹೆಚ್ಚಿವೆ. ಕಾನೂನು ಸುವ್ಯವಸ್ಥೆ ಜವಾಬ್ದಾರಿ ಇರೋರಿಗೆ ಸಿಎಂ ಕಿವಿ ಹಿಂಡಿ ಹೇಳಬೇಕು ಎಂದು ಒತ್ತಾಯಿಸಿದರು.

ಯುಪಿಐ ಟ್ಯಾಕ್ಸ್ ನಿಂದ ಗ್ರಾಹಕರ ಮೇಲೆ ಹೊರೆ ಆಗಲ್ಲ. ಒಂದು ರಾಷ್ಟ್ರ ಒಂದು ತೆರಿಗೆ ಬಂದಾಗಲೂ ಹೀಗೆ ಹೇಳುತ್ತಿದ್ದರು. ಆದರೆ ಯಾವುದೇ ತೊಂದರೆ ಆಗಲ್ಲ. ಜನರಿಗೆ ಸಮಸ್ಯೆ ಆದರೆ ಬದಲಿಸುವುದಕ್ಕೆ ಸರ್ಕಾರಕ್ಕೆ ಅಧಿಕಾರವಿದೆ. ರಾಹುಲ್ ಗಾಂಧಿ ಹತಾಶರಾಗಿ ಟೀಕೆ ಮಾಡುತ್ತಾರೆ. ಕೆಲವರು ಹೊರದೇಶದಲ್ಲಿ ಹಣ ಡೆಪಾಸಿಟ್, ಹೂಡಿಕೆ ಮಾಡಿದ್ದಾರೆ. ಆ ಹಣ ತಂದರೆ ಪ್ರತಿ ಅಕೌಂಟಿಗೆ 15 ಲಕ್ಷ ಹಣ ಬರುತ್ತದೆ ಎಂದಿದ್ದರು. ಕೋಟಾನೋಟು ತಡೆಗೆ ನೋಟು ಅಮಾನ್ಯ ಮಾಡಲಾಗಿತ್ತು.

ಭದ್ರಾ ಮೇಲ್ದಂಡೆ ಯೋಜನೆಗೆ 5.300 ಕೋಟಿ ರು. ಘೋಷಿಸಿದ್ದು ನಿಜ. ಕೇಂದ್ರ ಸರ್ಕಾರ ಬಜೆಟ್ ನಲ್ಲೇ ಹಣ ಘೋಷಿಸಿದೆ. ಆದರೆ ಕೇಂದ್ರ ಸರ್ಕಾರದ ಕಂಡಿಷನ್ಸ್ ರಾಜ್ಯ ಸರ್ಕಾರ ಪೂರ್ಣಗೊಳಿಸಿಲ್ಲ. ರಾಷ್ಟ್ರೀಯ ಯೋಜನೆ ಎಂಬುದಾಗಿ ಘೋಷಿಸಿದರೆ ಕೇಂದ್ರಕ್ಕೆ ಹೊರೆಯಾಗಲಿದೆ. ವಿವಿಧ ರಾಜ್ಯಗಳಲ್ಲಿ ಅನೇಕ ಯೋಜನೆಗಳಿವೆ. ಕೇಂದ್ರ ಘೋಷಿತ 5300 ಕೋಟಿ ರು. ತರುವ ಪ್ರಯತ್ನದಲ್ಲಿದ್ದೇನೆ. ರಾಜ್ಯ ಸರ್ಕಾರದ ಯೋಜನೆ ಪ್ರಾಮಾಣಿಕವಾಗಿ ಮಾಡಬೇಕು.ಕೇಂದ್ರದ ಬಜೆಟ್‍ನಲ್ಲಿ ಘೋಷಿತ ಹಣ ಕ್ಯಾರಿ ಓವರ್ ಆಗುತ್ತದೆ.ಮೋದಿ ಅವರು ಮಾತು ಕೊಟ್ಟಿದ್ದಾರೆ ಕೊಡುತ್ತಾರೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಾಧುರಿ ಗೀರಿಶ್, ವಕ್ತಾರ ನಾಗರಾಜ್ ಬೇದ್ರೇ, ಸಹ ವಕ್ತಾರ ನವೀನ ಚಾಲುಕ್ಯ, ಉಪಾಧ್ಯಕ್ಷ ಡಾ,ಸಿದ್ಧಾರ್ಥ ಗುಂಡಾರ್ಪಿ ಬಸಮ್ಮ ಸಂಪತ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಡಾಳು ಸ್ವರ್ಣಗೌರಮ್ಮ ದೇವಿ ದರ್ಶನಕ್ಕೆ ಭಕ್ತರ ದಂಡು
ಜನಮನ ಸೆಳೆದ ಕಲ್ಯಾಣ ಕರ್ನಾಟಕ ಉತ್ಸವ