ಕಲೆಯ ಆಯಾಮಗಳತ್ತ ಗಮನ ಹರಿಸುವುದು ಅಗತ್ಯ: ಆನಂದ ಭಾರತಿ ಸ್ವಾಮೀಜಿ

KannadaprabhaNewsNetwork | Published : Jul 31, 2024 1:01 AM

ಸಾರಾಂಶ

ಗೀತ ಗಾಯನ, ನಾಟಕ, ಭರತ ನಾಟ್ಯ ಮೊದಲಾದ ಕಲಾ ಪ್ರಕಾರಗಳು ನಮ್ಮ ಮನಸ್ಸಿಗೆ ಮುದ ನೀಡುವುದರೊಂದಿಗೆ ಚೈತನ್ಯ ನೀಡುತ್ತವೆ. ನಾವು ಮಾಡುವ ಪಾತ್ರಗಳು, ಎಲ್ಲಾ ರೀತಿಯಲ್ಲಿಯೂ ಸಮರ್ಪಕವಾಗಿದ್ದರೆ ಮಾತ್ರ ಸಹೃದಯರನ್ನು ಮುಟ್ಟಲು ಸಾಧ್ಯ.

ದೊಡ್ಡಬಳ್ಳಾಪುರ: ರಂಗ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶನಕ್ಕಷ್ಟೇ ಕಲಿಯದೇ, ರಂಗ ಕಲೆಯ ವೇಷಭೂಷಣಗಳು, ರಂಗಸಜ್ಜಿಕೆ ಹಾಗೂ ಪಾತ್ರಗಳ ಕುರಿತಂತೆ ತಿಳಿವಳಿಕೆ ಪಡೆದು ಸಿದ್ಧತೆ ಮಾಡಿಕೊಂಡಾಗ ಮಾತ್ರ ಪೂರ್ಣ ಕಲಾವಿದರಾಗಿ ರೂಪುಗೊಳ್ಳಲು ಸಾಧ್ಯ ಎಂದು ದತ್ತಾತ್ರೇಯ ಆಶ್ರಮದ ಶ್ರೀ ಆನಂದ ಭಾರತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘದ ವತಿಯಿಂದ ಕಲಾಭವನದಲ್ಲಿ ನಡೆದ ಸಾಂಸ್ಕೃತಿಕ ಕಲಾ ಜ್ಯೋತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗೀತ ಗಾಯನ, ನಾಟಕ, ಭರತ ನಾಟ್ಯ ಮೊದಲಾದ ಕಲಾ ಪ್ರಕಾರಗಳು ನಮ್ಮ ಮನಸ್ಸಿಗೆ ಮುದ ನೀಡುವುದರೊಂದಿಗೆ ಚೈತನ್ಯ ನೀಡುತ್ತವೆ. ನಾವು ಮಾಡುವ ಪಾತ್ರಗಳು, ಎಲ್ಲಾ ರೀತಿಯಲ್ಲಿಯೂ ಸಮರ್ಪಕವಾಗಿದ್ದರೆ ಮಾತ್ರ ಸಹೃದಯರನ್ನು ಮುಟ್ಟಲು ಸಾಧ್ಯ ಎಂದು ತಿಳಿಸಿದರು. ತಾಲೂಕು ಕಲಾವಿದರ ಸಂಘದ ಪ್ರಧಾನ ಕಾರ್‍ಯದರ್ಶಿ ಬಿ.ಚಂದ್ರಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಹಳಷ್ಟು ಕಲಾವಿದರು ಮಾಸಾಶನ ಬರುತ್ತಿದ್ದಂತೆ ತಮ್ಮ ಕಲಾ ಚಟುವಟಿಕೆಗಳನ್ನು ಕಡಿಮೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಈ ದಿಸೆಯಲ್ಲಿ ಕಲಾವಿದರು ಸಂಘದಲ್ಲಿ ಸಕ್ರಿಯವಾಗಿರುವುದರ ಮೂಲಕ, ಕಲಾ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕಿದೆ ಎಂದರು.

ತಬಲವಾದಕ ಬಸವರಾಜು ಚಿಕ್ಕಹೆಜ್ಜಾಜಿ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ ಅಧ್ಯಕ್ಷತೆ ವಹಿಸಿದ್ದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ, ಕಂಟನಕುಂಟೆ ಗ್ರಾಪಂ ಉಪಾಧ್ಯಕ್ಷ ಗವಿಸಿದ್ದಯ್ಯ, ಹಿರಿಯ ಕಲಾವಿದ ಬಿ.ಎಚ್.ಕೆಂಪಣ್ಣ, ತಾಲೂಕು ಕಲಾವಿದರ ಸಂಘದ ಉಪಾಧ್ಯಕ್ಷ ಎಚ್.ಪ್ರಕಾಶ್ ರಾವ್, ಕೆ.ನರಸಿಂಹಯ್ಯ, ಖಜಾಂಚಿ ಎಚ್.ಮುನಿಪಾಪಯ್ಯ, ಸಂಚಾಲಕ ಡಿ.ಬಿ.ಚೇತನ್ ಕುಮಾರ್, ನಿರ್ದೇಶಕರಾದ ಸಿ.ಎಚ್.ಕೃಷ್ಣಮೂರ್ತಿ, ಬಿ.ಎಲ್.ಸುರೇಶ್, ಕೆಂಪೇಗೌಡ, ಅಶ್ವತ್ಥನಾರಾಯಣ, ಸಲಹಾ ಸಮಿತಿ ಸದಸ್ಯ ಎಂ.ವೆಂಕಟರಾಜು, ಆನಂದ ಮೂರ್ತಿ ಮತ್ತಿತರರಿದ್ದರು.

ರಂಗಗೀತೆ, ಜನಪದ ಗೀತೆ, ಭಜನೆ, ಭಕ್ತಿಗೀತೆಗಳ ಗಾಯನ ನಡೆಯಿತು.

Share this article