ಕನ್ನಡಪ್ರಭ ವಾರ್ತೆ ಮಂಗಳೂರು
ತುಳುನಾಡಿನ ಸಾಂಸ್ಕೃತಿಕ ಪರಂಪರೆ ಉಳಿಸಿ ಬೆಳೆಸುವುದು ಅತ್ಯಗತ್ಯ ಎಂದು ಮಂಗಳೂರು ವಿ.ವಿ. ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಡಾ.ಶೇಷಪ್ಪ ಅಮೀನ್ ಹೇಳಿದರು.ವಿದ್ಯಾರ್ಥಿ ತುಳು ಸಮ್ಮೇಳನದ ಪೂರ್ವಭಾವಿಯಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ತುಳು ಪರಿಷತ್ ಜಂಟಿಯಾಗಿ ತುಳು ಭವನದಲ್ಲಿ ಬುಧವಾರ ಹಮ್ಮಿಕೊಂಡ ತುಳು ಜನಪದ ನೃತ್ಯ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ತುಳು ಭಾಷೆ, ತುಳು ಸಂಸ್ಕೃತಿಯ ಬಗ್ಗೆ ಅಭಿರುಚಿ ಮೂಡಿಸಲು ಪ್ರೇರಣೆಯಾಗಿ ಮತ್ತು ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಅರಿತುಕೊಳ್ಳಲು ತುಳು ಜನಪದ ನೃತ್ಯಗಳ ಬಗೆಗಿನ ಒಲವಿನಿಂದ ಸಾಧ್ಯವಾಗಲಿದೆ. ಕನ್ನಡ - ತುಳು ಭಾಷೆಗಳ ನಡುವೆ ಸಾಮರಸ್ಯದ ಕೂಟವಿದೆ. ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳುವಿನಲ್ಲಿ ಗ್ರಾಮೀಣ ಪ್ರದೇಶದ ಮಣ್ಣಿನ ಸೊಗಡಿದೆ. ಮೂಲತಃ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತುಳು ಭಾಷೆಯ ಬಳಕೆ ಹೆಚ್ಚು. ಹಲವಾರು ತುಳು ಶಾಸನಗಳು ಲಭ್ಯವಿವೆ. ಪ್ರಪಂಚದಲ್ಲಿ ಎರಡು ಕೋಟಿ ತುಳು ಮಾತನಾಡುವವರನ್ನು ಕಾಣಬಹುದಾಗಿದ್ದು, ವಿದೇಶದಲ್ಲಿರುವ ಕನ್ನಡಿಗರಲ್ಲಿ ತುಳುವರು ಅಗ್ರಸ್ಥಾನದಲ್ಲಿದ್ದಾರೆ. ಇಂತಹ ತುಳುವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕರ್ತವ್ಯ ಯುವಜನತೆಯ ಮುಂದಿದೆ ಎಂದರು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಸಮಾರಂಭದ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿ, ಯುವಜನತೆಗೆ ತುಳುವಿನ ಬಗ್ಗೆ ಅಭಿಮಾನ, ಅಧ್ಯಯನ ಆಸಕ್ತಿ ಮೂಡಿಸುವ ಸಲುವಾಗಿ ಮಾ.26 ರಂದು ಮಂಗಳೂರಿನಲ್ಲಿ ವಿದ್ಯಾರ್ಥಿ ತುಳು ಸಮ್ಮೇಳನ ಆಯೋಜಿಸಲಾಗುತ್ತಿದೆ. ಯಾವುದೇ ಒಂದು ಭಾಷೆ ಮೊದಲ ಸ್ಥಾನದಲ್ಲಿ ಇದ್ದರೆ ಸಂಸ್ಕೃತಿ ಕೂಡ ಮೊದಲಾಗಿರುತ್ತದೆ. ವಿದೇಶಿಗರು ಕೂಡ ತುಳು ಭಾಷೆಯ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಹೀಗಿರುವಾಗ ಅದನ್ನು ಬೆಳೆಸಿ, ಉಳಿಸಿಕೊಂಡು ಹೋಗುವ ಕರ್ತವ್ಯ ನಮ್ಮದು. ತುಳುನಾಡಿನವರಾದ ನಾವು ತುಳು ಸಂಸ್ಕೃತಿಯ ಜ್ಞಾನ ಪಡೆದು ಸ್ನೇಹಿತರಿಗೂ ಹಾಗೂ ನೆರೆಹೊರೆಯವರಿಗೂ ಕಲಿಸಬೇಕು. ಕಲಿತ ವಿದ್ಯೆಯನ್ನು ಶಿಕ್ಷಣ ಮುಗಿದ ನಂತರ ಮರೆತು ಬಿಡದೆ ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ, ಕಾರ್ಯಕ್ರಮದ ಸಂಚಾಲಕಿ ಚಂದ್ರಕಲಾ ರಾವ್, ತುಳು ಅಕಾಡೆಮಿ ಸದಸ್ಯ ಬೂಬ ಪೂಜಾರಿ ಇದ್ದರು.ತುಳು ಪರಿಷತ್ ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಸ್ವಾಗತಿಸಿದರು. ಗೌರವಾಧ್ಯಕ್ಷ ಡಾ.ಪ್ರಭಾಕರ ನೀರ್ ಮಾರ್ಗ ವಂದಿಸಿದರು. ವಿದ್ಯಾರ್ಥಿನಿ ದಿಯಾ ನಿರೂಪಿಸಿದರು..........26 ರಂದು ವಿದ್ಯಾರ್ಥಿ ತುಳು ಸಮ್ಮೇಳನತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ ಪ್ರಾಸ್ತಾವಿಕದಲ್ಲಿ ಮಾತನಾಡಿ, ತುಳು ಭಾಷೆ ಉಳಿಸಿ, ಬೆಳೆಸಬೇಕಾದ ಮಹತ್ತರ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ತುಳು ಭಾಷೆ, ಕಲೆ, ಸಂಸ್ಕೃತಿ, ಇಲ್ಲಿನ ಆಚಾರ-ವಿಚಾರಗಳನ್ನು ಉಳಿದ ಜಿಲ್ಲೆಯವರಿಗೂ ಪ್ರಚುರಪಡಿಸಬೇಕು. ಈ ನಿಟ್ಟಿನಲ್ಲಿ ಮಾ.26 ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ವಿದ್ಯಾರ್ಥಿ ತುಳು ಸಮ್ಮೇಳನದ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ಅಧ್ಯಕ್ಷರಾಗಿರುತ್ತಾರೆ, ಅವರೇ ಕಾರ್ಯಕ್ರಮ ನಡೆಸಲಿದ್ದಾರೆ. ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳ ಅನೇಕ ಮಂದಿ ವಿದ್ಯಾರ್ಥಿಗಳು ಭಾಗಿಯಾಗುವ ನಿರೀಕ್ಷೆ ಇದೆ ಎಂದರು.