ಕನ್ನಡಪ್ರಭ ವಾರ್ತೆ ಮಂಡ್ಯ
ಗುತ್ತಿಗೆ ಪಡೆದ ನಿರಾಣಿ ಸಮೂಹ ಸಂಸ್ಥೆ ವಾರ್ಷಿಕವಾಗಿ ಪಾವತಿಸುವ ಗುತ್ತಿಗೆ ಮೊತ್ತ ೧ ಕೋಟಿ ರು.ನಲ್ಲಿ ಕಾರ್ಖಾನೆಯಲ್ಲಿರುವ ಸಿಬ್ಬಂದಿ ವೇತನ, ಇತರೆ ವ್ಯವಹಾರಗಳಿಗೆ ಖರ್ಚಾಗಿ ಹೋಗುತ್ತಿದೆ. ಇದರಿಂದ ಸಾಲ ಅಥವಾ ಸಾಲದ ಮೇಲಿನ ಬಡ್ಡಿಯಾಗಲೀ ತೀರುವಳಿಯಾಗದೆ ದಿನದಿಂದ ದಿನಕ್ಕೆ ಬಡ್ಡಿ ಹೆಚ್ಚುತ್ತಲೇ ಹೋಗುತ್ತಿದೆ. ಇದರಿಂದ ಕಾರ್ಖಾನೆಯನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ದೂಡಿದಂತಾಗುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಪ್ರಸಕ್ತ ನಡೆದಿರುವ ಗುತ್ತಿಗೆಯಿಂದ ಕಾರ್ಖಾನೆಗೆ ಅನುಕೂಲವಾಗದೇ ಇರುವುದರಿಂದ ಮತ್ತೊಮ್ಮೆ ಸರ್ಕಾರ ಗುತ್ತಿಗೆ ಪ್ರಕ್ರಿಯೆ ಪರಿಶೀಲಿಸಿ ಸಹಕಾರಿ ಕ್ಷೇತ್ರದಲ್ಲೇ ಕಾರ್ಖಾನೆ ಉಳಿಸಿಕೊಟ್ಟು ರಕ್ಷಣೆ ಮಾಡುವಂತೆ ಒತ್ತಾಯಿಸಿದ್ದಾರೆ.ಕಾರ್ಖಾನೆಯ ಮುಂಭಾಗದಲ್ಲಿರುವ ಆಡಳಿತ ಕಚೇರಿಯ ಕಟ್ಟಡಗಳು ಮತ್ತು ತೇಗದ ಮರಗಳನ್ನು ನಿರಾಣಿ ಸಂಸ್ಥೆಯವರ ಅಧೀನಕ್ಕೆ ನೀಡದೇ ಇದ್ದರೂ ಸಹ ಅವರು ಯಾರ ಅನುಮತಿ ಪಡೆಯದೆ ಅನಧಿಕೃತವಾಗಿ ಕಾರ್ಖಾನೆಯ ಆಡಳಿತ ಕಚೇರಿಯ ಕೆಲವು ಕೊಠಡಿಗಳನ್ನು ಒಡೆದುಹಾಕಿ ಅವರ ಅನುಕೂಲಕ್ಕೆ ತಕ್ಕಂತೆ ಸ್ವಂತ ಬ್ಯಾಂಕ್‌ವೊಂದನ್ನು ತೆರೆದಿದ್ದಾರೆ. ಕಾರ್ಖಾನೆಯ ಆಡಳಿತ ಕಚೇರಿಯ ಕೊಠಡಿಗಳನ್ನು ಹೊರ ರಾಜ್ಯದಿಂದ ಬಂದಿರುವ ನೌಕರರಿಗೆ ವಸತಿ ಗೃಹಗಳನ್ನು ನೀಡಿದ್ದಾರೆ ಎಂದು ದೂರಿದಿರು.
ಆಡಳಿತ ಕಚೇರಿಯ ಪಕ್ಕದಲ್ಲೇ ೧೩೦೦ ತೇಗದ ಮರಗಳಿದ್ದು, ಅದರ ಸುತ್ತ ಪಿಎಸ್‌ಎಸ್‌ಕೆಯವರು ನಿರ್ಮಿಸಿದ್ದ ತಂತಿ ಬೇಲಿಗಳನ್ನು ತೆರವುಗೊಳಿಸಿದ್ದು, ಯಾರಾದರೂ ಮರಗಳನ್ನು ಕಳ್ಳತನ ಮಾಡುವ ಸಾಧ್ಯತೆಗಳಿರುತ್ತವೆ. ಮರಗಳೀಗೆ ನೀರು ಹಾಯಿಸುವುದಕ್ಕೆ ನಿರ್ಮಿಸಿದ್ದ ಹಾಗೂ ಮರಗಳಿಗೆ ನೀರು ಹಾಕಲು ನಿರ್ಮಿಸಿದ್ದ ಪೈಪ್‌ಲೈನ್ ವ್ಯವಸ್ಥೆಯನ್ನು ನಿರಾಣಿ ಸಂಸ್ಥೆಯವರು ತೆರವು ಮಾಡಿರುವುದರಿಂದ ಮರಗಳು ಒಣಗಿಹೋಗುತ್ತಿವೆ ಎಂದು ಆಪಾದಿಸಿದರು.
ಕಳೆದ ಐದು ವರ್ಷಗಳನ್ನು ಕಾರ್ಖಾನೆಯ ಬೆಲೆಬಾಳುವ ಯಂತ್ರೋಪಕರಣಗಳ ಬಿಡಿ ಭಾಗಗಳನ್ನು ಬಿಚ್ಚಿದ್ದಾರೆ. ಅತಿ ಮುಖ್ಯವಾಗಿ ೩ ಎವಾಪರೇಟರ್ ಹಾಗೂ ಪ್ಯಾನ್ ಬಾಡಿಗಳಲ್ಲಿ ಕೋಟ್ಯಂತರ ರು. ಮೌಲ್ಯದ ಬ್ರಾಸ್‌ಟ್ಯೂಬ್‌ಗಳನ್ನು ಬಿಚ್ಚಿ ಆ ಜಾಗಕ್ಕೆ ಎಸ್‌ಎಸ್ ಟ್ಯೂಬ್‌ಗಳನ್ನು ಅಳವಡಿಸಿದ್ದಾರೆ. ಬ್ರಾಸ್ ಟ್ಯೂಬ್ ದರಕ್ಕೂ ಎಸ್‌ಎಸ್ ಟ್ಯೂಬ್ ದರಕ್ಕೂ ೧:೧೦ರ ಅನುಪಾತದಲ್ಲಿ ವ್ಯತ್ಯಾಸವಿದೆ ಎಂದರು.
ನಿರಾಣಿ ಸಂಸ್ಥೆಯವರು ಗುತ್ತಿಗೆ ಕರಾರಿನ ಷರತ್ತು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿ ಪಿಎಸ್‌ಎಸ್‌ಕೆ ಕಾರ್ಖಾನೆ ಮತ್ತು ಕಾರ್ಮಿಕರಿಗೆ ತುಂಬಾ ತೊಂದರೆ ಉಂಟುಮಾಡುತ್ತಿರುವುದರಿಂದ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.