ಮುಂಡರಗಿ: ಮಕ್ಕಳಿಗೆ ಶಾಲೆಯಲ್ಲಿ ಗುರುಗಳು, ಗುರುಮಾತೆಯರು ಶಿಕ್ಷಣ ಕಲಿಸಿದರೆ ಅದರ ಜೊತೆಯಲ್ಲಿ ಮನೆಯಲ್ಲಿ ಪಾಲಕರು ಉತ್ತಮವಾದ ಸಂಸ್ಕಾರ ಕಲಿಸಬೇಕು ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು. ಅವರು ಮಂಗಳವಾರ ಪಟ್ಟಣದ ರೋಟರಿ ಶಿಕ್ಷಣ ಸಂಸ್ಥೆಯ ಶ್ರೀ ವಿ.ಜಿ. ಲಿಂಬಿಕಾಯಿ ಕನ್ನಡ ಪ್ರಾಥಮಿಕ ಮತ್ತು ಪ್ರೌಢಶಾಲೆ ಮುಂಡರಗಿ, ಶ್ರೀಮತಿ ಸರಸ್ವತಮ್ಮ ಲಿಂಬಿಕಾಯಿ ಪೂರ್ವ ಪ್ರಾಥಮಿಕ ಶಾಲೆ ಮುಂಡರಗಿ ಇವುಗಳ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ಇಂದು ಆಂಗ್ಲಭಾಷಾ ಶಿಕ್ಷಣ, ಮಾತೃಭಾಷಾ ಶಿಕ್ಷಣ ಎನ್ನುವ ಭೇದ ಭಾವವಿಲ್ಲದೇ ಮಕ್ಕಳ ಬುದ್ಧಿಮಟ್ಟಕ್ಕೆ ತಕ್ಕಂತೆ ಅವರನ್ನು ಓದಿಸಿದರೆ ಆ ಮಗು ಓದಿನಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮಕ್ಕಳು ಹೆಚ್ಚು ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು ಎಂದರು. ಇಂದಿನ ಪಾಲಕರು ತಮ್ಮ ಮಕ್ಕಳಿಗೆ ದುಬಾರಿ ಮೊಬೈಲ್ ಕೊಡಿಸಿ ಅದಕ್ಕೆ ಇಂಟರ್ ನೆಟ್ ಹಾಕಿಸಿ ಕೊಟ್ಟರೆ ಸಾಲದು. ಮಗು ಆ ಮೊಬೈಲನ್ನು ಕಲಿಕೆಗೆ ಬಳಸಿಕೊಳ್ಳುತ್ತಾನೋ ಅಥವಾ ಅದರಿಂದ ದಾರಿ ತಪ್ಪುತ್ತಿದ್ದಾನೋ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸುವುದು ಅವಶ್ಯ, ಮೊಬೈಲ್‌ನಲ್ಲಿ ಆಟವಾಡಿ ಸಮಯ ವ್ಯರ್ಥ ಮಾಡುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಓದಿ ಸಾಧನೆ ಶಿಖರವನ್ನು ಮುಟ್ಟಬೇಕು ಎಂದರು. ಶಾಸಕ ಡಾ. ಚಂದ್ರು ಲಮಾಣಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಕನ್ನಡ ಮಾಧ್ಯಮ ಶಾಲೆಗಳು ನಶಿಸುತ್ತಿರುವ ಇಂದಿನ ದಿನಮಾನಗಳಲ್ಲಿ ಇಷ್ಟೊಂದು ಮಕ್ಕಳನ್ನು ಹೊಂದಿದ ಶಾಲೆಯನ್ನು ನೋಡುವುದು ಅಪರೂಪ.
ಮಕ್ಕಳು ಇಂದು ಅಭ್ಯಾಸದ ಜೊತೆಗೆ ಕ್ರಿಯಾಶೀಲ ಚಟುವಟಿಕೆಗಳನ್ನು ಬೆಳೆಸಿಕೊಳ್ಳುವುದು ಹಾಗೂ ಕಲೆ ಸಾಹಿತ್ಯ, ವಿಜ್ಞಾನ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಸಾಧನೆಗಳನ್ನು ಮಾಡಬೇಕು. ಕನ್ನಡ ಮಾಧ್ಯಮ ಶಾಲೆಗಳಿಗೆ ಸಹಾಯ ಸಹಕಾರ ನೀಡುವುದರಲ್ಲಿ ನಾನು ಶ್ರಮಿಸುವುದರ ಜೊತೆಗೆ ಈ ಶಾಲೆಗೆ ಎರಡು ಹಂತದಲ್ಲಿ 10 ಲಕ್ಷ ರು.ಗಳ ಅನುದಾನ ನೀಡುವುದಾಗಿ ಭರವಸೆ ನೀಡಿದರು.ದಾವಣಗೆರೆ ವೈದ್ಯ ಡಾ. ಎಲ್.ಎಸ್. ಪಾಟೀಲ ಮಾತನಾಡಿ, ಇಂದಿನ ಆಂಗ್ಲ ಮಾಧ್ಯಮದ ಭರದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿರುವುದು ವಿಷಾದಕರ ಸಂಗತಿ. ಆದರೆ ರೋಟರಿ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಇಲ್ಲಿನ ವಿ.ಜಿ. ಲಿಂಬಿಕಾಯಿ ಶಾಲೆಯಲ್ಲಿ ಇಷ್ಟೊಂದು ಮಕ್ಕಳು ಕನ್ನಡ ಮಾಧ್ಯಮದಲ್ಲಿಯೇ ಕಲಿಯುತ್ತಿರುವುದು ಬಹಳಷ್ಟು ಹೆಮ್ಮೆ ತರುವಂತದ್ದು ಎಂದರು.ರೋಟರಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಅಕ್ಕಮಹಾದೇವಿ ಕಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಿ.ಡಿ. ಮೋರನಾಳ, ಹೇಮಗಿರೀಶ ಹಾವಿನಾಳ, ಲಿಂಗರಾಜಗೌಡ ಪಾಟೀಲ, ಎಸ್.ವಿ. ಲಿಂಬಿಕಾಯಿ, ಕೆ.ಎಫ್. ಅಂಗಡಿ, ಡಾ.ಎ.ಎಂ. ಮೇಟಿ, ಎಸ್.ವೈ. ನಾಡಗೌಡ್ರ, ಪಾಲಾಕ್ಷಗೌಡ ಪಾಟೀಲ, ಜಗನ್ನಾಥ ಅಳವಂಡಿ, ಪವಿತ್ರಾ ಕಲ್ಲುಕುಟಗರ್, ಪವನ್ ಮೇಟಿ, ಮುಖ್ಯೋಪಾಧ್ಯಾಯರಾದ ಸಿ.ವಿ. ಪಾಟೀಲ, ಎಂ.ಬಿ. ನಾಗರಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕೊಟ್ರೇಶ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.