ಸಾರಿಗೆ ಟಿಕೆಟ್‌ ದರ ಏರಿಸೋದು ಇನ್ನು ಸಲೀಸು!

KannadaprabhaNewsNetwork |  
Published : Sep 22, 2025, 01:00 AM IST
ಬಸ್‌ | Kannada Prabha

ಸಾರಾಂಶ

ಪ್ರತಿ ವರ್ಷ ಕೆಎಸ್‌ಆರ್‌ಟಿಸಿ ಸೇರಿ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಪರಿಷ್ಕರಣೆಗೆ ಅನುಕೂಲವಾಗುವಂತೆ ‘ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ’ (ಪಿಟಿಎಫ್‌ಆರ್‌ಸಿ) ರಚಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

 ಬೆಂಗಳೂರು :  ಪ್ರತಿ ವರ್ಷ ಕೆಎಸ್‌ಆರ್‌ಟಿಸಿ ಸೇರಿ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಪರಿಷ್ಕರಣೆಗೆ ಅನುಕೂಲವಾಗುವಂತೆ ‘ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ’ (ಪಿಟಿಎಫ್‌ಆರ್‌ಸಿ) ರಚಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಪ್ರತಿ ವರ್ಷ ವಿದ್ಯುತ್ ದರ ಏರಿಕೆಗೆ ಶಿಫಾರಸು ಮಾಡುವ ಕೆಇಆರ್‌ಸಿ ಮಾದರಿಯಲ್ಲಿ ಪಿಟಿಎಫ್‌ಆರ್‌ಸಿ ಕಾರ್ಯ ನಿರ್ವಹಿಸಲಿದೆ.

ಸಾರಿಗೆ ನಿಗಮಗಳಿಗೆ ವೈಜ್ಞಾನಿಕವಾಗಿ ಪ್ರಯಾಣ ದರ ಹೆಚ್ಚಿಸಲು ಈ ಹಿಂದೆ ಯಾವುದೇ ಸಮಿತಿಗಳು ರಚನೆಯಾಗಿರಲಿಲ್ಲ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಇತ್ತೀಚಿನ ವರ್ಷಗಳಲ್ಲಿ ಪ್ರಯಾಣ ದರವನ್ನು ಯಾವ ಸರ್ಕಾರ ಕೂಡ ಏರಿಕೆ ಮಾಡುವ ಪ್ರಯತ್ನಕ್ಕೆ ಕೈ ಹಾಕಿರಲಿಲ್ಲ. ಆದರೆ, ಕಾಲಕಾಲಕ್ಕೆ ಡೀಸೆಲ್ ಬೆಲೆ ಸೇರಿ ಇನ್ನಿತರ ಎಲ್ಲಾ ವೆಚ್ಚಗಳು ಹೆಚ್ಚಳವಾಗುತ್ತಾ ಬಂದಿವೆ. ದರ ಪರಿಷ್ಕರಣೆ ಇಲ್ಲದೆ ಸಾರಿಗೆ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿವೆ. ನಷ್ಟ ತಪ್ಪಿಸಿ ದರ ಹೆಚ್ಚಳ ಸರಿದೂಗಿಸಲು ದರ ಪರಿಷ್ಕರಣೆ ಅವಶ್ಯಕ ಎಂದು ಕಂಡು ಬಂದಿದೆ ಎಂದು ಸಾರಿಗೆ ಇಲಾಖೆ ಹೇಳಿದೆ.

ಬಿಎಂಟಿ‌ಸಿ 2014ರಲ್ಲಿ ಪರಿಷ್ಕರಿಸಿದ್ದರೆ, ಇತರೆ ಸಾರಿಗೆ ನಿಗಮಗಳು 2020ರಲ್ಲಿ ಪ್ರಯಾಣ ದರ ಹೆಚ್ಚಿಸಿದ್ದವು. ಆದರೆ, 2014 ರಲ್ಲಿ ದೈನಂದಿನ ಡೀಸೆಲ್ ವೆಚ್ಚ 7 ಕೋಟಿ ರು. ಇದ್ದದ್ದು, 2025ರಲ್ಲಿ 13 ಕೋಟಿ ರು.ಗೆ ಏರಿಕೆಯಾಗಿದೆ. ಅದೇ ರೀತಿ ಸಿಬ್ಬಂದಿ ವೆಚ್ಚ 6 ಕೋಟಿ ರು.ನಿಂದ 12 ಕೋಟಿ ರು.ಗೆ ಏರಿಕೆಯಾಗಿದೆ. ಈ ವೆಚ್ಚಗಳಲ್ಲಿ ಸುಮಾರು ಶೇ.100ರಷ್ಟು ಏರಿಕೆಯಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಇನ್ನು 8-10 ವರ್ಷಗಳಿಗೊಮ್ಮೆ ಏಕಾಏಕಿ ಹೆಚ್ಚು ದರ ಪರಿಷ್ಕರಣೆಯಿಂದ ಪ್ರಯಾಣಿಕರಿಗೂ ಹೊರೆಯಾಗುತ್ತದೆ. ಕಾಲ ಕಾಲಕ್ಕೆ ಅತ್ಯಲ್ಪ ಪ್ರಯಾಣ‌ ದರ ಏರಿಕೆ ವೈಜ್ಞಾನಿಕವಾಗಿ ಸಮಂಜಸವಾಗಿರುತ್ತದೆ. ರಾಜಕೀಯ ಇಚ್ಛಾಶಕ್ತಿಗಳನ್ನು ದೂರವಿರಿಸಿ, ಪ್ರಯಾಣ ದರ‌ ನಿರ್ವಹಣಾ ಸಮಿತಿಯು ಕೆಇಆರ್‌ಸಿ ಮಾದರಿಯಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದರಿಂದ ಸಾರಿಗೆ ಸಂಸ್ಥೆಗಳನ್ನು ಬಲಪಡಿಸಲು ಸಾಧ್ಯವಾಗುತ್ತದೆ ಎಂದು ಸಾರಿಗೆ ಇಲಾಖೆ ಹೇಳಿದೆ.

ಸಮಿತಿ ರಚನೆ:

ವೆಚ್ಚ ಸರಿದೂಗಿಸುವ ಉದ್ದೇಶದಿಂದ ಕರ್ನಾಟಕ ಮೋಟಾರು ವಾಹನ ನಿಯಮಗಳು, 1989ರ ಅಡಿ ರಾಜ್ಯ ಸರ್ಕಾರ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ಸಮಿತಿ ರಚಿಸಿದೆ. ಇದು ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರನ್ನು ಒಳಗೊಂಡಿರುತ್ತದೆ.

ಅಧ್ಯಕ್ಷರಾಗಿ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾಗಿರುತ್ತಾರೆ. ಇಬ್ಬರು ಸದಸ್ಯರಲ್ಲಿ ಒಬ್ಬರು ಕಾನೂನು ಶೈಕ್ಷಣಿಕ ಅರ್ಹತೆ ಹೊಂದಿರುವ ನಿವೃತ್ತ ಪ್ರಧಾನ ಕಾರ್ಯದರ್ಶಿ ಅಥವಾ ಸರ್ಕಾರದ ಕಾರ್ಯದರ್ಶಿಯಾಗಿರಬೇಕು. ಇನ್ನೊಬ್ಬ ಸದಸ್ಯರು ಕೈಗಾರಿಕಾ ತಜ್ಞರು ಅಥವಾ ಹಣಕಾಸು ತಜ್ಞರಾಗಿರಬಹುದು. ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಸಮಿತಿ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.ಸಮಿತಿಯಿಂದ ರಸ್ತೆ ಸಾರಿಗೆ ನಿಗಮಗಳಿಗೆ ನೀಡಲಾದ ಶಿಫಾರಸುಗಳ ಪ್ರತಿಯನ್ನು, ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಮುಂದೆ ಮಂಡಿಸಲು ಸರ್ಕಾರಕ್ಕೆ, ಪ್ರತಿ ವರ್ಷ ಏ.1ರ ನಂತರ ಸಾಧ್ಯವಾದಷ್ಟು ಬೇಗ ಮತ್ತು ಡಿ.31ರ ಒಳಗೆ ವಾರ್ಷಿಕ ವರದಿಯಾಗಿ ಸಲ್ಲಿಸಬೇಕು 

ಸಮಿತಿಯ ಕಾರ್ಯಗಳು 

- ಸಮಿತಿಯು ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಅಧ್ಯಯನ ಮಾಡಿ, ಕಾಲಕಾಲಕ್ಕೆ ಟಿಕೆಟ್ ದರ ಪರಿಷ್ಕರಣೆಗೆ ಶಿಫಾರಸು ಮಾಡುತ್ತದೆ.

- ಹಣಕಾಸು ಮತ್ತು ಕಾರ್ಯಾಚರಣೆಯನ್ನು ಸುಧಾರಿಸಲು ಟಿಕೆಟ್ ದರ ಹೆಚ್ಚಳದ ಜತೆಗೆ ವಿವಿಧ ಸರ್ಚಾರ್ಜ್‌ಗಳು, ಇನ್ನಿತರ ಶುಲ್ಕಗಳನ್ನು ವಿಧಿಸಲು ಸೂಚಿಸಬಹುದು.

PREV
Read more Articles on

Recommended Stories

ಬೆಂಗಳೂರು ನಗರದಲ್ಲಿ ಆನ್‌ಲೈನ್ ಇ-ಖಾತಾ ವ್ಯವಸ್ಥೆ ಜಾರಿ: ಮನೀಷ್ ಮೌದ್ಗಿಲ್
ಖಾಲಿ ನಿವೇಶನದಲ್ಲಿ ತ್ಯಾಜ್ಯ ತೆರವುಗೊಳಿಸಿ, ಆಸ್ತಿ ಮಾಲೀಕರಿಂದ ದಂಡ ವಸೂಲಿ ಮಾಡಿ: ಆಯುಕ್ತ ಸುನೀಲ್ ಕುಮಾರ್ ಸೂಚನೆ