ಸನ್ಯಾಸಿಗಳು ದೇಶವನ್ನು ಟೀಕಿಸುವುದು ಸರಿಯಲ್ಲ

KannadaprabhaNewsNetwork |  
Published : Dec 20, 2023, 01:15 AM IST
ವಿವಿಧತೆಯಲ್ಲೂ ಏಕತೆಯ ಬದುಕು ನೀಡುತ್ತಿರುವ ವೈಭವಶಾಲಿ ದೇಶ ಭಾರತ : ಕಣೇರಿಶ್ರೀ. | Kannada Prabha

ಸಾರಾಂಶ

ವಿವಿಧತೆಯಲ್ಲೂ ಏಕತೆಯ ಬದುಕು ನೀಡುತ್ತಿರುವ ವೈಭವಶಾಲಿ, ಶ್ರೀಮಂತ ಸಾಮರಸ್ಯದ ವ್ಯವಸ್ಥೆ ಹೊಂದಿರುವ ಭಾರತದ ಬಗ್ಗೆ ಪ್ರಗತಿಪರರೆಂಬ ಸೋಗಿನ ಜನರೊಡನೆ ನಮ್ಮ ಸನ್ಯಾಸಿಗಳೂ ಸೇರಿಕೊಂಡು ಟೀಕಿಸುತ್ತಿರುವುದು ಸಮರ್ಥನೀಯವಲ್ಲ ಎಂದು ಬನಹಟ್ಟಿ ನಗರದ ಶ್ರೀಕಾಡಸಿದ್ಧೇಶ್ವರ ದೇವಸ್ಥಾನದ ಕಳಸಾರೋಹಣ ಹಾಗೂ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕನೇರಿಯ ಅದೃಶ್ಯ ಮಠದ ಕಾಡಸಿದ್ಧೇಶ್ವರ ಶ್ರೀ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ವಿವಿಧತೆಯಲ್ಲೂ ಏಕತೆಯ ಬದುಕು ನೀಡುತ್ತಿರುವ ವೈಭವಶಾಲಿ, ಶ್ರೀಮಂತ ಸಾಮರಸ್ಯದ ವ್ಯವಸ್ಥೆ ಹೊಂದಿರುವ ಭಾರತದ ಬಗ್ಗೆ ಪ್ರಗತಿಪರರೆಂಬ ಸೋಗಿನ ಜನರೊಡನೆ ನಮ್ಮ ಸನ್ಯಾಸಿಗಳೂ ಸೇರಿಕೊಂಡು ಟೀಕಿಸುತ್ತಿರುವುದು ಸಮರ್ಥನೀಯವಲ್ಲ ಎಂದು ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳು ಹೇಳಿದರು.

ಬನಹಟ್ಟಿ ನಗರದ ಶ್ರೀಕಾಡಸಿದ್ಧೇಶ್ವರ ದೇವಸ್ಥಾನದ ಕಳಸಾರೋಹಣ ಹಾಗೂ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವದ ಯಾವುದೇ ದೇಶದೆದುರು ನಾವೆಲ್ಲ ಹೆಮ್ಮೆಯಿಂದ ಬದುಕುವಂತೆ ಸಹಿಷ್ಣುತೆಯ ಪಾಠ ನೀಡಿದ ನಮ್ಮ ಪ್ರಾಚೀನರ ಕ್ರಮ ಸ್ಮರಣಾರ್ಹ. ಜಲ ಒಂದೇ ಇದ್ದರೂ ನೂರಾರು ಪ್ರಕಾರ ಸ್ವಾದ. ಜಗತ್ತಿನ ಎಲ್ಲ ಅರಣ್ಯಗಳಲ್ಲಿ ಹೊಂದಿರುವ ಸಸ್ಯ, ಪ್ರಾಣಿ ಸಂಪತ್ತು ದೇಶವೊಂದರಲ್ಲಿಯೇ ಕಾಣುವ ಅದೃಷ್ಟ. ಪಕ್ಷಿ, ಕ್ರಿಮಿಕೀಟ ಸೇರಿದಂತೆ ನಾವು ತಿನ್ನುವ ಆಹಾರದ ಬೆಳೆಗಳಲ್ಲಿಯೂ ಲಕ್ಷಾಂತರ ಪ್ರಕಾರಗಳನ್ನು ಹೊಂದಿದ ಶ್ರೀಮಂತ ರಾಷ್ಟ್ರ ಭಾರತ ಎಂದರು.

ದೇಶದ ರಾಜರು ಜನಹಿತ ಬಯಸಿದ್ದರು ಎಂಬುದಕ್ಕೆ ಅವರ ಆಡಳಿತ ಅವಧಿಗಳೇ ಸಾಕ್ಷಿ. ಹಲವು ರಾಜವಂಶಗಳು ೩೦೦ ರಿಂದ ೩೫೦ ವರ್ಷಗಳವರೆಗೆ ಆಡಳಿತ ನಡೆಸಿದ ಪುರಾವೆಗಳಿವೆ. ಪರಸ್ಪರ ಪ್ರೀತಿ, ಸದ್ಬಾವ ಸಂಸ್ಕಾರದಿಂದ ಕಂಡವರು ಭಾರತೀಯರು. ನಿಸರ್ಗ ಉಪಾಸಕರಾಗಿ, ಆಧ್ಯಾತ್ಕ, ಧರ್ಮಗಳಲ್ಲಿ ಸಾಕಷ್ಟು ಸ್ವಾತಂತ್ರ್ಯ ಹೊಂದಿದ್ದು, ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ ದೇವರನ್ನು ಕಾಣುವಲ್ಲಿ ಅನುಸರಿಸಿದ ಧಾರ್ಮಿಕ ಸ್ವಾತಂತ್ರ್ಯ ಬೇರೆ ಯಾವುದೇ ರಾಷ್ಟ್ರಗಳಲ್ಲಿಲ್ಲ. ಪ್ರಾಚೀನ ಕಾಲದಿಂದಲೂ ಭಾರತೀಯರು ಸಹಿಷ್ಣುತೆಯಲ್ಲೇ ನೆಮ್ಮದಿ ಕಂಡಿದ್ದಾರೆಂದರು.

ಬ್ರಿಟಿಷರಿಂದ ದೇಶ ವಿಭಜಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ದೇವಸ್ಥಾನಗಳೇ ಆಗಿವೆ. ಎಲ್ಲ ಜಾತಿ, ಧರ್ಮ, ಪಂಥಗಳನ್ನು ಒಗ್ಗೂಡಿಸುವ ಶಕ್ತಿ ದೇವಾಲಯಕ್ಕಿವೆ. ಆದ್ದರಿಂದದೇಶ ಇಂದಿಗೂ ಸಮೃದ್ಧ ಭಾರತವಾಗಿ ಮುನ್ನಡೆಯುತ್ತಿದೆ ಎಂದು ಮಾರ್ಮಿಕವಾಗಿ ನುಡಿದ ಶ್ರೀಗಳು ಒಂದೇ ಧರ್ಮ ಆಚರಣೆಯಲ್ಲಿರುವ ರಾಷ್ಟ್ರಗಳಲ್ಲಿ ಪರಸ್ಪರ ರಕ್ತಪಾತ ಎಗ್ಗಿಲ್ಲದೇ ಸಾಗುತ್ತಿದೆ. ಆದರೆ ಭಾರತ ತನ್ನ ಗಟ್ಟಿಯಾದ ಧಾರ್ಮಿಕ, ಸಾಂಸ್ಕೃತಿಕ ಬುನಾದಿ ಮೇಲೆ ಇನ್ನೂ ಗಟ್ಟಿಯಾಗಿ ಪಸರಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಹಳೇ-ಹುಬ್ಬಳ್ಳಿಯ ಶಿವಶಂಕರ ಶ್ರೀ, ಮರೇಗುದ್ದಿಯ ನಿರುಪಾಧೀಶ್ವರ ಶ್ರೀ, ರಬಕವಿಯ ಗುರುಸಿದ್ಧೇಶ್ವರ ಶ್ರೀ, ಮಹಾಲಿಂಗಪೂರದ ಸಹಜಾನಂದ ಶ್ರೀ, ಜಮಖಂಡಿಯ ಗೌರಿ ಶಂಕರ ಶ್ರೀ, ಚಿಮ್ಮಡದ ಪ್ರಭು ಸ್ವಾಮೀಜಿ, ಆಳಂದದ ಚನ್ನಬಸವ ಪಟ್ಟದೇವರು, ನೀರಲಕೇರಿಯ ಘನಲಿಂಗ ಶ್ರೀ ಹಾಗು ಶಿರೋಳದ ಶಂಕರಾರೂಢ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಶ್ರೀಪಾದ ಬಾಣಕಾರ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸಿದ್ದು ಸವದಿ, ಸಂಗಮೇಶ ನಿರಾಣಿ, ಶ್ರೀಶೈಲ ದಭಾಡಿ ಮಾತನಾಡಿದರು. ಸಿದ್ದು ಕೊಣ್ಣೂರ, ಡಾ. ಪದ್ಮಜೀತ ನಾಡಗೌಡ ಪಾಟೀಲ, ಜಿ.ಎಸ್. ನ್ಯಾಮಗೌಡ, ರಕ್ಷಿತಾ ಈಟಿ, ಪ್ರೊ.ಬಸವರಾಜ ಕೊಣ್ಣೂರ, ಸಿದ್ಧರಾಜ ಪೂಜಾರಿ, ಶಂಕರ ಜುಂಜಪ್ಪನವರ, ಸಿದ್ಧನಗೌಡ ಪಾಟೀಲ, ಮಲ್ಲಿಕಾರ್ಜುನ ತುಂಗಳ, ಭೀಮಶಿ ಮಗದುಮ್, ವಿರುಪಾಕ್ಷ ಕೊಕಟನೂರ, ರಕ್ಷಿತಾ ಈಟಿ, ಸಿದ್ರಾಮಪ್ಪ ಸವದತ್ತಿ, ಬಸವಂತ ಜಾಡಗೌಡ, ವಿಜಯಕುಮಾರ ಜುಂಜಪ್ಪನವರ, ರಾಜಶೇಖರ ಮಾಲಾಪುರ, ಈಶ್ವರ ಬಿದರಿ, ಗಂಗಪ್ಪ ಮುಗತಿ ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ