ಶಿರಾ: ಒಳಮೀಸಲಾತಿ ಬಗ್ಗೆ ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷರು ವಿರೋಧ ವ್ಯಕ್ತಪಡಿಸಿರುವುದರಿಂದ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇವೆ ಎಂದು ಬಿಎಸ್‌ಪಿ ಜಿಲ್ಲಾ ಕಾರ್ಯದರ್ಶಿ ಜಿ.ಎಸ್.ಮಂಜುನಾಥ್ ತಿಳಿಸಿದರು.
ಆದರೆ ಒಳಮೀಸಲಾತಿ ವಿರೋಧಿಸುವ ಅವರ ತೀರ್ಮಾನದ ಬಗ್ಗೆ ಕರ್ನಾಟಕ ಬಿಎಸ್‌ಪಿ ನಾಯಕರು ಬಿನ್ನಾಭಿಪ್ರಾಯ ಹೊಂದಿದ್ದು, ಕಳೆದ 30 ವರ್ಷಗಳ ಒಳಮೀಸಲಾತಿ ಆಂದೋಲನವನ್ನು ಬಿಎಸ್‌ಪಿ ನಾಯಕರು ಬೆಂಬಲಿಸುತ್ತಾ ಬಂದಿದ್ದಾರೆ. ಆದರೆ ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷರೇ ವಿರೋಧ ವ್ಯಕ್ತಪಡಿಸಿರುವುದರಿಂದ ತುಮಕೂರು ಜಿಲ್ಲೆಯ ಬಿಎಸ್‌ಪಿಯ ವಿವಿಧ ಪದಾಧಿಕಾರಿಗಳು ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.
ಬಿಎಸ್‌ಪಿ ಜಿಲ್ಲಾ ಉಪಾಧ್ಯಕ್ಷ ಬೆಲ್ಲದಮಡು ಭರತ್‌ಕುಮಾರ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಬಿಎಸ್‌ಪಿ ಮಾನ್ಯವಾರ್ ಕಾನ್ಷೀರಾಂ ಅವರ ಸಿದ್ಧಾಂತದಿಂದ ಸಂಪೂರ್ಣವಾಗಿ ದೂರ ಸರಿದಿದೆ. ಅಲ್ಲದೆ ಪಕ್ಷವು ತನ್ನ ಪ್ರಜಾಸತ್ತಾತ್ಮಕ ಸ್ವರೂಪವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದು, ಬಹುಜನ ಸಮಾಜದಲ್ಲಿ ಇದುವರೆಗೂ ಸಮುದಾಯಗಳ ಅಳಲು ಕೇಳುತ್ತಿಲ್ಲ ಎಂದು ತಿಳಿಸಿದರು.ಮುಂದಿನ ದಿನಗಳಲ್ಲಿ ಮಹಾತ್ಮ ಫುಲೆ, ಶಾಹು ಮಹರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್, ಪೆರಿಯಾರ್, ನಾರಾಯಣ ಗುರು, ಬಾಬಾ ಸಾಹೇಬ್ ಅಂಬೇಡ್ಕರ್, ಮಾನ್ಯವಾರ್ ಕಾನ್ಷೀರಾಂ ಅವರ ಆದೇಶಗಳ ಮೇಲೆ ಬಹುಜನ ಚಳುವಳಿ ಮುಂದುವರೆಸುತ್ತೇವೆ ಎಂದರು.