ಅಂಬೇಡ್ಕರನ್ನು ದಲಿತ ನಾಯಕ ಎಂದು ಕರೆಯುತ್ತಿರುವುದು ಸರಿಯಲ್ಲ: ಡಾ.ಕೃಷ್ಣಮೂರ್ತಿ ಚಮರಂ ಬೇಸರ

KannadaprabhaNewsNetwork |  
Published : May 04, 2024, 12:35 AM IST
3ಕೆಎಂಎನ್ ಡಿ18 | Kannada Prabha

ಸಾರಾಂಶ

ಅಂಬೇಡ್ಕರ್ ಅವರ ಹೋರಾಟ ಭಾರತದ ಎಲ್ಲ ಶೋಷಿತ ದೀನ, ಶೂದ್ರ ವರ್ಗದ ಜನರ ಪರವಾಗಿತ್ತು. ಅಂದು ಕೇವಲ ಪದವಿ ಪಡೆದವರಿಗೆ, ಆದಾಯ ಕಟ್ಟುವವರಿಗೆ, ಶ್ಯಾನುಬೋಗ ಮತ್ತು ಪಟೇಲರಿಗೆ ಮಾತ್ರ ಇದ್ದ ಮತದಾನದ ಹಕ್ಕನ್ನು, ಎಲ್ಲ ವಯಸ್ಕ ಭಾರತೀಯರಿಗೆ ಕಡ್ಡಾಯವಾಗಿ ಸಿಗುವಂತೆ ಮಾಡಿದ್ದು ಅಂಬೇಡ್ಕರ್.

ಕನ್ನಡಪ್ರಭ ವಾರ್ತೆ ಮಂಡ್ಯ

ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಿ ದಲಿತ ನಾಯಕ ಎಂದು ಕರೆಯುತ್ತಿರುವುದಕ್ಕೆ ಸಾಹಿತಿ ಡಾ.ಕೃಷ್ಣಮೂರ್ತಿ ಚಮರಂ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಮಂಗಲ ಗ್ರಾಮದಲ್ಲಿ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಸಂಘದಿಂದ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 133ನೇ ವರ್ಷದ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಅಂಬೇಡ್ಕರ್ ಅವರ ಹೋರಾಟ ಭಾರತದ ಎಲ್ಲ ಶೋಷಿತ ದೀನ, ಶೂದ್ರ ವರ್ಗದ ಜನರ ಪರವಾಗಿತ್ತು. ಅಂದು ಕೇವಲ ಪದವಿ ಪಡೆದವರಿಗೆ, ಆದಾಯ ಕಟ್ಟುವವರಿಗೆ, ಶ್ಯಾನುಬೋಗ ಮತ್ತು ಪಟೇಲರಿಗೆ ಮಾತ್ರ ಇದ್ದ ಮತದಾನದ ಹಕ್ಕನ್ನು, ಎಲ್ಲ ವಯಸ್ಕ ಭಾರತೀಯರಿಗೆ ಕಡ್ಡಾಯವಾಗಿ ಸಿಗುವಂತೆ ಮಾಡಿದ್ದು ಅಂಬೇಡ್ಕರ್ ಎಂದರು.

ಅಂಬೇಡ್ಕರ್ ಅವರ ಜನ್ಮದಿನವನ್ನು ವಿಶ್ವಸಂಸ್ಥೆ ವಿಶ್ವಜ್ಞಾನ ದಿನವೆಂದು ಘೋಷಿಸಿ ಆಚರಣೆ ಮಾಡುತ್ತಿರುವುದು ಎಲ್ಲ ಭಾರತೀಯರಿಗೆ ಹೆಮ್ಮೆಯ ವಿಚಾರ ಎಂದರು.

ನೆಲದನಿ ಬಳಗದ ಅಧ್ಯಕ್ಷ ಲಂಕೇಶ್ ಮಂಗಲ ಮಾತನಾಡಿ, ಅಂಬೇಡ್ಕರ್ ಒಂದು ಜಾತಿ, ಧರ್ಮಕ್ಕೆ ಸೀಮಿತರಾಗದೇ ಸರ್ವ ಧರ್ಮದ ನಾಯಕರಾಗಿ ಶೂದ್ರ, ದಲಿತ, ಕೆಳಹಂತದ ಎ ವರ್ಗಗಳ ಪರವಾಗಿ ಹೋರಾಟ ನಡೆಸಿದರು ಎಂದು ಬಣ್ಣಿಸಿದರು.

ಇದೇ ವೇಳೆ ದ್ವೀತಿಯ ಪಿಯುಸಿಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಾದ ಪೂರ್ಣಿಮಾ ಎಂ.ಅನುಷಾ ಎಚ್.ಎಂ, ಭುವನೇಶ್ವರಿ, ರಕ್ಷಿತಾ, ಮನೀತ್ ಹಾಗೂ ದಾಕ್ಷಾಯಿಣಿ ಅವರನ್ನು ನಿವೃತ್ತ ಅಭಿಯಂತರ ಚಂದ್ರಹಾಸ, ಅಂಬೇಡ್ಕರ್ ವಿಚಾರವಾದಿ ಅಶೋಕ್ ಮರ್ಯ, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಗ್ರಾಪಂ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷೆ ವೃಂದಾ, ಸದಸ್ಯರಾದ ಕುಮಾರಗೌಡ, ಮಹದೇವಸ್ವಾಮಿ, ಕೆಂಪಮ್ಮ, ಪ್ರತಿಭಾ ಅಭಿನಂದಿಸಿದರು. ಗಾನಸುಮ ಹಾಗೂ ಮೀನಾಕ್ಷಿ ಮತ್ತು ತಂಡದವರು ಅಂಬೇಡ್ಕರ್ ಗೀತೆಗಳನ್ನು ಹಾಡಿ ರಂಜಿಸಿದರು.

ಸಮಾರಂಭದಲ್ಲಿ ವೇದಿಕೆಯಲ್ಲಿ ವಿಶ್ವಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷ ದೇವರಾಜು, ಕಾರ್ಯದರ್ಶಿ ಶಿವಲಿಂಗು, ಗೌರವಾಧ್ಯಕ್ಷ ಮಲ್ಲೇಶ್, ಖಜಾಂಚಿ ಶಿವರಾಮು, ಪದಾಧಿಕಾರಿಗಳಾದ ಮಧು , ಸುನೀಲ್. ಸನತ್‌ ಕುಮಾರ್, ಕೀರ್ತಿಕುಮಾರ್, ರಾಜೇಶ್, ವರಲಕ್ಷ್ಮಿ ಹಾಗೂ ಡಿ.ಉಮಾಪತಿ, ವಜ್ರಮುನಿ ಮತ್ತಿತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ