ಭಟ್ಕಳ ಜ್ಞಾನೇಶ್ವರಿ ಬಿಇಡಿ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ
ಭ್ರಷ್ಟಾಚಾರಕ್ಕೆ ಸಾರ್ವನಿಕರೇ ಬೆಂಬಲ ಕೊಡುತ್ತಿದ್ದಾರೆ. ಸಾರ್ವಜನಿಕರು ಎಂದಿಗೂ ಭ್ರಷ್ಟಾಚಾರಕ್ಕೆ ಪ್ರಚೋದನೆ ಕೊಡಬಾರದು ಎಂದು ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಡಾ. ಮೋಹನರಾವ್ ನಾಲ್ವಡೆ ತಿಳಿಸಿದರು.
ಪಟ್ಟಣದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಶಾಖೆ, ಭಟ್ಕಳದ ವತಿಯಿಂದ ಏರ್ಪಡಿಸಲಾದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬರೂ ಕಾನೂನಿನ ಅರಿವು ಪಡೆಯುವುದು ಅಗತ್ಯವಿದೆ. ಭ್ರಷ್ಟಾಚಾರದ ನಿರ್ಮೂಲನೆಗೆ ಪ್ರತಿಯೊಬ್ಬರೂ ಮುಂದಾಗಬೇಕು. ಕಾನೂನಿನ ಅರಿವು ಇಲ್ಲದೇ ಅಪರಾಧ ಕೃತ್ಯ ಹೆಚ್ಚಾಗುತ್ತಿದೆ. ದೇಶವ್ಯಾಪಿ ನಮ್ಮ ಸಂಸ್ಥೆಯಿಂದ ಶಾಲೆ, ಕಾಲೇಜುಗಳಲ್ಲಿ ಕಾನೂನಿನ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಎಲ್ಲರೂ ನಮ್ಮ ನಮ್ಮ ಕರ್ತವ್ಯ ಮತ್ತು ಕಾನೂನಿನ ತಿಳುವಳಿಕೆ ಹೊಂದಿದರೆ ಯಾವುದೇ ರೀತಿಯ ಸಮಸ್ಯೆ ಉಂಟಾಗದು. ತಳಮಟ್ಟದಲ್ಲಿ ಕಾನೂನಿನ ಅರಿವು ಮೂಡಿಸಿದರೆ ಮಾತ್ರ ಭ್ರಷ್ಟಾಚಾರ ನಿರ್ಮೂಲನ ಸಾಧ್ಯವಾಗುತ್ತದೆ. ದೇಶದಲ್ಲಿ ಡ್ರಗ್ಸ್ ಮಾಫಿಯಾ ಹೆಚ್ಚಿದೆ. ಮಾಫಿಯಾ ಮೂಲಕ ಸಮಾಜ, ಕುಟುಂಬ ಒಡೆಯುವುದು ಮತ್ತು ಆರ್ಥಿಕ ಶಕ್ತಿ ಕುಂದುವಂತೆ ಮಾಡಲಾಗುತ್ತಿದೆ ಎಂದ ಅವರು, ಇಂತಹ ದುಷ್ಕೃತ್ಯಕ್ಕೆ ಯುವಕರು ಬಲಿಯಾಗಬಾರದು ಎಂದರು.
ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಂ.ಆರ್. ನಾಯ್ಕ ಮಾತನಾಡಿ, ಅಪರಾಧ ಮುಕ್ತ ಸಮಾಜ ನಿರ್ಮಾಣ ಆಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕಾನೂನಿನ ಜ್ಞಾನ ಹೊಂದಬೇಕು. ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಅನೇಕ ಕಾನೂನುಗಳಿವೆ. ಪ್ರತಿ ತಾಲೂಕಿನಲ್ಲೂ ಕಾನೂನು ಸೇವಾ ಪ್ರಾಧಿಕಾರಗಳಿದ್ದು, ಇದನ್ನು ಸದುಪಯೋಗಿಸಿಕೊಳ್ಳಬೇಕು ಎಂದರು.