ಗಣೇಶ ವಿಸರ್ಜನೆ ಗಲಾಟೆಗೆ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ: ಕೆ.ಜೆ. ಜಾರ್ಜ್

KannadaprabhaNewsNetwork |  
Published : Sep 10, 2025, 01:03 AM IST
9ಎಚ್‌ಯುಬಿ21ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರನ್ನು ಕಾಂಗ್ರೆಸ್‌ ಕಾರ್ಯಕರ್ತರು ಸನ್ಮಾನಿಸಿದರು | Kannada Prabha

ಸಾರಾಂಶ

ಗಣೇಶನಿಂದ ಗದ್ದಲ ಅಲ್ಲ, ಗಣೇಶ ಬಂದರೆ ಒಳ್ಳೆಯದು. ಇಂತಹ ಘಟನೆಗಳು ನಡೆದಾಗ ರಾಜಕೀಯ ಮಾಡಬಾರದು. ಎಲ್ಲರೂ ಕುಳಿತು ಆಗಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು.

ಹುಬ್ಬಳ್ಳಿ: ಗಣೇಶನ ವಿಸರ್ಜನೆ ವೇಳೆ ಗಲಾಟೆಯಾಗಿದ್ದು, ಇದಕ್ಕೆ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ. ಹಾಗೆ ಯಾರಾದರೂ ಪಾಕಿಸ್ತಾನ ಪರ ಘೋಷಣೆ ಕೂಗಿದರೆ ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬೇಕಾದ ಎಲ್ಲ ಕ್ರಮವನ್ನೂ ಸರ್ಕಾರ ಕೈಗೊಂಡಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶನಿಂದ ಗದ್ದಲ ಅಲ್ಲ, ಗಣೇಶ ಬಂದರೆ ಒಳ್ಳೆಯದು. ಇಂತಹ ಘಟನೆಗಳು ನಡೆದಾಗ ರಾಜಕೀಯ ಮಾಡಬಾರದು. ಎಲ್ಲರೂ ಕುಳಿತು ಆಗಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಬಿಜೆಪಿಗೆ ಆರೋಪ ಮಾಡುವುದನ್ನು ಬಿಟ್ಟು ಏನೂ ಕೆಲಸವಿಲ್ಲ. ನಮ್ಮ ಸರ್ಕಾರದ ಒಳ್ಳೆಯ ಕೆಲಸ ನೋಡಿ ಅವರಿಗೆ ನಿದ್ದೆ ಬರುತ್ತಿಲ್ಲ. ಹೀಗಾಗಿ, ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಹಳೇ ಹುಬ್ಬಳ್ಳಿ ಗಲಾಟೆಯ ಪ್ರಕರಣಗಳನ್ನು ವಾಪಸ್‌ ಪಡೆದಿರುವ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಲ್ಲು ತೋರಾಟ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿದ್ದಾರೆ. ಅದು ಜನಪ್ರತಿನಿಧಿಗಳ ಕೆಲಸ ಅಲ್ಲ. ಈ ಹಿಂದಿನ ಎಲ್ಲ ಸರ್ಕಾರಗಳೂ ಕೆಲವು ಪ್ರಕರಣಗಳನ್ನು ಹಿಂಪಡೆದಿವೆ. ನಾವಷ್ಟೇ ಹಿಂಪಡೆದಿಲ್ಲ. ಜಾತಿ, ಧರ್ಮ, ಪಕ್ಷ ನೋಡಿ ಕೇಸ್ ಹಿಂಪಡೆಯುವುದಿಲ್ಲ ಎಂದರು.

ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಎಲ್ಲ ಸಮಾಜದವರು ಇದ್ದಾರೆ. ಹಿಂದಿನ ಸರ್ಕಾರಗಳಲ್ಲಿ ಬೇರೆ ಧರ್ಮದವರ ಕರೆಸಿ ದಸರಾ ಉದ್ಘಾಟನೆ ಮಾಡಿಲ್ವಾ? ದಸರಾ ಉದ್ಘಾಟನೆಗೆ ಅವರನ್ನು ಕರಯಿಸಬೇಕು ಎಂಬ ನಿರ್ಧಾರ ಸರ್ಕಾರ ತೆಗೆದುಕೊಂಡಿದೆ. ನಮ್ಮದು ಸರ್ವಧರ್ಮದ ತೋಟ. ಯಾವುದೇ ಸರ್ಕಾರ ಜನಪರ ಕೆಲಸ ಮಾಡಬೇಕು. ಜನಪರ ಕೆಲಸ ಮಾಡಿದವರನ್ನು ಜನರು ಆಯ್ಕೆ ಮಾಡುತ್ತಾರೆ. ಬಿಜೆಪಿ ಜನಪರ ಕೆಲಸ ಮಾಡದ ಕಾರಣ ಅಧಿಕಾರಕ್ಕೆ ಬಂದಿಲ್ಲ. ನಾವು ಕಾನೂನು ಸುವ್ಯಸ್ಥೆಯಡಿಯಲ್ಲಿ ಇದ್ದೇವೆ. ಮಾಜಿ ಸಂಸದ ಪ್ರತಾಪ್‌ ಸಿಂಹ ಕೋರ್ಟಿಗೆ ಹೋದ ಕುರಿತಂತೆ ಅವರನ್ನೇ ಕೇಳಬೇಕು ಎಂದರು. ಅಲ್ಲದೇ, ನಮ್ಮದು ಚುನಾಯಿತ ಸರ್ಕಾರವಾಗಿದೆ. ಹೀಗಾಗಿ, ನಾವು ಕೆಲ ತೀರ್ಮಾನಗಳನ್ನು ಕೈಗೊಂಡಿರುತ್ತೇವೆ ಎಂದರು.

ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇಲ್ಲ. ಸಮರ್ಪಕ ವಿದ್ಯುತ್‌ ಪೂರೈಕೆಗೆ ಸರ್ಕಾರ ಎಲ್ಲ ಕ್ರಮಕೈಗೊಂಡಿದೆ. ಆದಷ್ಟು ಬೇಗ ಹಗಲಿನಲ್ಲಿಯೇ ರೈತರಿಗೆ ವಿದ್ಯುತ್ ನೀಡುವ ಕೆಲಸವನ್ನು ಸರ್ಕಾರ ಮಾಡಲಿದೆ. ಪ್ರತಿ ತಿಂಗಳು ₹೯೦೦ ಕೋಟಿಯನ್ನು ಗೃಹಜ್ಯೋತಿ ಹಣವನ್ನು ಸರ್ಕಾರ ನೀಡುತ್ತಿದೆ. ಸರ್ಕಾರದಿಂದ ಯಾವುದೇ ಬಾಕಿ ಉಳಿದಿಲ್ಲ ಎಂದರು.

ಸ್ಮಾರ್ಟ್ ಮೀಟರ್‌ಗೆ ಸಂಬಂಧಿಸಿದ ಮೂರು ಪ್ರಕರಣಗಳನ್ನು ದಾಖಲಿಸಿರುವುದು ಬಿಜೆಪಿಯವರೆ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಹೆಚ್ಚಿಗೆ ಮಾತನಾಡುವುದಿಲ್ಲ. ನ್ಯಾಯಾಲಯವು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ ತೀರ್ಪು ನೀಡಲಿದೆ. ಆ ನಂತರ ಈ ಬಗ್ಗೆ ಮಾತನಾಡುತ್ತೇನೆ ಎಂದ ಅವರು, ರಾಜ್ಯದಲ್ಲಿ ೨೫೦೦ ಮೆಗಾವ್ಯಾಟ್ ಸಾಮರ್ಥ್ಯದ ಸುಮಾರು ೧೦೦ ಉಪ ಕೇಂದ್ರಗಳನ್ನು ಆರಂಭಿಸಲು ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲ್ ಕುಮಾರ ಪಾಟೀಲ, ಶಾಸಕ ಎನ್‌.ಎಚ್. ಕೋನರಡ್ಡಿ, ಹೆಸ್ಕಾಂ ಅಧ್ಯಕ್ಷ ಅಜ್ಜಿಂಪೀರ್ ಖಾದ್ರಿ, ಹುಡಾ ಅಧ್ಯಕ್ಷ ಶಾಕೀರ ಸನದಿ, ಅಲ್ತಾಫ್ ಹಳ್ಳೂರ, ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ, ಸುವರ್ಣಾ ಕಲ್ಲಕುಂಟ್ಲಾ, ಮೋಹನ ಹಿರೇಮನಿ ಸೇರಿದಂತೆ ಹಲವರಿದ್ದರು.

PREV

Recommended Stories

ಫಾರಿನ್‌ಗೆ ಅನ್ನಭಾಗ್ಯ ಅಕ್ಕಿ 2 ರೈಸ್‌ಮಿಲ್‌ ಜಫ್ತಿ: ಕೇಸು
ಮುಂದೇಕೆ, ಈಗ್ಲೆ ಮುಸ್ಲಿಂ ಆಗ್ಬಿಡಿ : ಬಿಜೆಪಿಗರ ಕಿಡಿ