ನರಗುಂದ: ರೈಲ್ವೆ ಪರೀಕ್ಷಾ ನೇಮಕಾತಿಯಲ್ಲಿ ಕನ್ನಡವನ್ನು ಕಡೆಗಣಿಸುತ್ತಿರುವುದು ಕನ್ನಡಕ್ಕೆ ಮಾಡುತ್ತಿರುವ ಬಹುದೊಡ್ಡ ಅಪಮಾನವಾಗಿದೆ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ತಿಳಿಸಿದರು.
ಇತ್ತೀಚೆಗೆ ನೈರುತ್ಯ ರೈಲ್ವೆ ಇಲಾಖೆಯು ಹೊರಡಿಸಿರುವ ಪರೀಕ್ಷಾ ಸುತ್ತೋಲೆಯಲ್ಲಿ ಪ್ರಾದೇಶಿಕ ಭಾಷೆಯಾದ ಕನ್ನಡ ಬಳಸದೆ ಕೇವಲ ಹಿಂದಿ- ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಸುತ್ತೋಲೆ ಹೊರಡಿಸಿರುವ ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆಗಳನ್ನು ಹತ್ತಿಕ್ಕುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದೆ. ಈ ಬಗ್ಗೆ ಸಾಕಷ್ಟು ಹೋರಾಟ, ಚಳವಳಿಗಳನ್ನು ಮಾಡಿದರೂ ಪರೀಕ್ಷೆಯಲ್ಲಿ ಕನ್ನಡವನ್ನು ಬಳಕೆ ಮಾಡದಿರುವುದು ವಿಪರ್ಯಾಸದ ಸಂಗತಿ ಎಂದರು.
ಕರ್ನಾಟಕದಲ್ಲಿ ಕನ್ನಡ ಅಧಿಕೃತ ಭಾಷೆ. ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನವನ್ನು ಕಡ್ಡಾಯಗೊಳಿಸಿದೆ. ಆದರೂ ನೈಋತ್ಯ ರೈಲ್ವೆಯು ಪರೀಕ್ಷಾ ನೇಮಕಾತಿಯಲ್ಲಿ ಕರ್ನಾಟಕದಲ್ಲಿ ಸಂಪೂರ್ಣವಾಗಿ ಕನ್ನಡವನ್ನು ಕಡೆಗಣಿಸುತ್ತಿದೆ. ಈ ಕುರಿತು ಮುಖ್ಯಮಂತ್ರಿಗಳು ಹಾಗೂ ರಾಜ್ಯದ ೨೮ ಸಂಸದರು, ರಾಜ್ಯಸಭಾ ಸದಸ್ಯರು ಮತ್ತು ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ. ಸೋಮಣ್ಣನವರು ಮೌನ ಮುರಿದು ಕನ್ನಡಕ್ಕಾಗುತ್ತಿರುವ ಅನ್ಯಾಯವನ್ನು ತಡೆಯಬೇಕು ಎಂದು ಮನವಿ ಮಾಡಿದರು.ಕಂಠಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚೆನ್ನಬಸಪ್ಪ ಕಂಠಿ ಮಾತನಾಡಿ, ಕನ್ನಡ ಸಾಹಿತ್ಯ, ಕಲೆ, ಜಾನಪದ ಸಂಸ್ಕೃತಿ ಸಂವರ್ಧನೆಯ ಉದ್ದೇಶದೊಂದಿಗೆ ಸ್ಥಾಪಿತವಾದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಉಳಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.ಈ ಸಂದರ್ಭದಲ್ಲಿ ೨೦೨೬ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಅಲೆಮಾರಿ ಜನಾಂಗದ ನೀಲಾವತಿ ಯಣ್ಣಿ ಹಾಗೂ ಹತ್ತನೆ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಭೈರನಹಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರನ್ನು ಶ್ರೀಮಠದಿಂದ ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಲಾಯಿತು. ಬಿಆರ್‌ಸಿ ಅಧಿಕಾರಿಗಳಾದ ಬಿ.ಆರ್. ರಾಯನಗೌಡ್ರ, ಸಿ.ಎಫ್. ಕುರಿ, ಮುಖ್ಯಶಿಕ್ಷಕ ಎಂ.ಡಿ. ಸಕ್ಕರಿ, ಜೆ.ಆರ್. ಕದಂ, ಸಂಗಪ್ಪ ಪೂಜಾರ, ಪ್ರೊ. ಆರ್.ಬಿ. ಚಿನಿವಾಲರ, ಅಮರೇಶ ತೆಗ್ಗಿಮನಿ ಪ್ರಮುಖರು ಇದ್ದರು. ಪ್ರೊ. ಆರ್.ಕೆ. ಐನಾಪೂರ ಕಾರ್ಯಕ್ರಮ ನಿರ್ವಹಿಸಿದರು. ಮಹಾಂತೇಶ ಹಿರೇಮಠ ಸ್ವಾಗತಿಸಿ, ವಂದಿಸಿದರು.