ಬಾರೋ ಸಾಧನಕೇರಿಯ ಒಳಚರಂಡಿ ರಹಸ್ಯ ಬಯಲು!

KannadaprabhaNewsNetwork |  
Published : May 06, 2026, 02:15 AM IST
ಸಾಧನಕೇರಿ ಕೆರೆ ಪಕ್ಕದ ಉದ್ಯಾನವನ ವಾಕಿಂಗ್‌ ಪಾತ್‌ ಅಡಿಯಲ್ಲಿರುವ ಒಳಚರಂಡಿ ಮಾರ್ಗ. | Kannada Prabha

ಸಾರಾಂಶ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ದ.ರಾ. ಬೇಂದ್ರೆ ಹೆಸರಿನಲ್ಲಿರುವ ಸಾಧನಕೇರಿಯ ಬಾರೋ ಸಾಧನಕೇರಿ ಕೆರೆ ಹಾಗೂ ಉದ್ಯಾನವನಕ್ಕೆ ಕಂಟಕವಾಗಿರುವುದು ಕೊಳಚೆ ನೀರು. ಈ ಚರಂಡಿ ನೀರನ್ನು ಸರಾಗವಾಗಿ ಹೊರ ಹಾಕಲು 20 ವರ್ಷದ ಹಿಂದೆ ನಿರ್ಮಿಸಿದ್ದ ಒಳಚರಂಡಿ ವ್ಯವಸ್ಥೆ ರಹಸ್ಯ ಕೊನೆಗೂ ಬಯಲಾಗಿದೆ.

ಬಸವರಾಜ ಹಿರೇಮಠ

ಧಾರವಾಡ:

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ದ.ರಾ. ಬೇಂದ್ರೆ ಹೆಸರಿನಲ್ಲಿರುವ ಸಾಧನಕೇರಿಯ ಬಾರೋ ಸಾಧನಕೇರಿ ಕೆರೆ ಹಾಗೂ ಉದ್ಯಾನವನಕ್ಕೆ ಕಂಟಕವಾಗಿರುವುದು ಕೊಳಚೆ ನೀರು. ಈ ಚರಂಡಿ ನೀರನ್ನು ಸರಾಗವಾಗಿ ಹೊರ ಹಾಕಲು 20 ವರ್ಷದ ಹಿಂದೆ ನಿರ್ಮಿಸಿದ್ದ ಒಳಚರಂಡಿ ವ್ಯವಸ್ಥೆ ರಹಸ್ಯ ಕೊನೆಗೂ ಬಯಲಾಗಿದೆ.

ನಿತ್ಯ ಕೆರೆಗೆ ಹರಿದು ಬರುತ್ತಿರುವ ಸಾಧನಕೇರಿ ಹಾಗೂ ಮೇಲಿನ ಬಡಾವಣೆಗಳ ಚರಂಡಿ ನೀರು, ಅದರಿಂದ ಸಂಪೂರ್ಣ ಹಾಳಾಗಿರುವ ಕೆರೆ ಹಾಗೂ ಉದ್ಯಾನವನದ ಸ್ಥಿತಿ ಅರಿತ ಸ್ಥಳೀಯರಾದ ವೆಂಕಟೇಶ ತೆಲಗಾರ ಎಂಬುವರು ಪಾಲಿಕೆ ಅಧಿಕಾರಿಗಳ ಬೆನ್ನು ಬಿದ್ದು, 2007ರಲ್ಲಿ ಮೊದಲ ಬಾರಿಗೆ ಕೆರೆ ಹಾಗೂ ಉದ್ಯಾನ ನಿರ್ಮಾಣದ ವೇಳೆ ಹಾಕಿದ್ದ ಸುಮಾರು ಹತ್ತು ಅಡಿ ಭೂಮಿ ಒಳಗಿರುವ ಒಳಚರಂಡಿ ಮಾರ್ಗವನ್ನು ಇದೀಗ ಪತ್ತೆ ಹಚ್ಚಿದ್ದಾರೆ.

ಡಾ. ಎಂ.ಎಂ. ಕಲಬುರ್ಗಿ ಅವರು ದ.ರಾ. ಬೇಂದ್ರೆ ಟ್ರಸ್ಟ್‌ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಬೇಂದ್ರೆ ಭವನ ಸೇರಿದಂತೆ ಅದ್ಭುತವಾಗಿ ಬಾರೋ ಸಾಧನಕೇರಿ ಕೆರೆ ಹಾಗೂ ಉದ್ಯಾನವನ ನಿರ್ಮಿಸಿದ್ದರು. ಯಾವುದೇ ಕಾರಣಕ್ಕೂ ಚರಂಡಿ ನೀರು ಈ ಕೆರೆಗೆ ಹರಿದು ಬರದಂತೆ ಆಗಲೇ, ದುರ್ಗಾದೇವಿ ದೇವಸ್ಥಾನ ಹಿಂಬದಿ ರಾಜಕಾಲುವೆಯಿಂದ ಕೆರೆಯ ಪಾತ್‌ ವೇ ಅಡಿಯಲ್ಲಿ ಕೊಳಚೆ ನೀರು ನೇರವಾಗಿ ಕೆರೆಯ ಕೋಡಿ ಹರಿದು ಹೋಗುವ ಜಾಗಕ್ಕೆ ಸಂಪರ್ಕ ಕಲ್ಪಿಸಲಾಗಿತ್ತು.

ಆದರೆ, ದಿನಗಳೆದಂತೆ ಒಳಗಿದ್ದ ಒಳಚರಂಡಿ ನಿರ್ವಹಿಸದ ಹಿನ್ನೆಲೆ ಅದು ಮುಚ್ಚಿ ದೊಡ್ಡ ಪ್ರಮಾಣದಲ್ಲಿ ಕೊಳಚೆ ನೀರು ಕೆರೆಯ ಒಡಲು ಸೇರುತ್ತಿದೆ. ಹೀಗಾಗಿ ಈ ಕೆರೆಗೆ ಎಷ್ಟು ಕೋಟಿ ವೆಚ್ಚ ಮಾಡಿದರೂ ಸುಧಾರಣೆ ಕಂಡಿರಲಿಲ್ಲ. ಇತ್ತೀಚೆಗೆ ₹ 4.5 ಕೋಟಿ ವೆಚ್ಚದಲ್ಲಿ ಕೆರೆ ಹೂಳು ತೆಗೆದು ಅಭಿವೃದ್ಧಿ ಮಾಡಿದರೂ ಯಾವ ಪ್ರಯೋಜನವಾಗಿಲ್ಲ.

ಒಳಚಂರಡಿ ವ್ಯವಸ್ಥೆ ಸರಿಪಡಿಸಿ:

ವಾಯು ವಿಹಾರ ಹಾಗೂ ಉದ್ಯಾನವನಕ್ಕೆ ಬರುವ ಜನರು ಮೂಗು ಮುಚ್ಚಿಕೊಂಡು ಹೋಗಬೇಕಾದ ಸ್ಥಿತಿ ಇದ್ದು ಭವಿಷ್ಯದಲ್ಲಿ ಈ ಕೆರೆ ಹಾಗೂ ಉದ್ಯಾನವನ ಉಳಿಯಬೇಕಾದರೆ ಈಗ ಪತ್ತೆಯಾಗಿರುವ ಒಳಚರಂಡಿ ವ್ಯವಸ್ಥೆ ಸರಿಪಡಿಸಬೇಕಿದೆ ಎನ್ನುವುದು ಕೆರೆ, ಉದ್ಯಾನವನ ಪಕ್ಕದ ಹುಬ್ಳೀಕರ ಪ್ಲಾಟ್‌ ನಿವಾಸಿಗಳ ಆಗ್ರಹ.

ಕೊಳಚೆ ನೀರು ತಡೆದರೆ ಸಾಧನಕೇರಿ ಕೆರೆ ತಾನಾಗಿಯೇ ಅಭಿವೃದ್ಧಿ ಆಗಲಿದೆ. ಈ ಹಿನ್ನೆಲೆಯಲ್ಲಿ ಉದ್ಯಾನವನದ ನೀಲನಕ್ಷೆ ಸಿಗದೇ ಇದ್ದರೂ ಸ್ಥಳೀಯರ ಸಹಕಾರದಿಂದ ಉದ್ಯಾನವನದಲ್ಲಿದ್ದ ಒಳಚರಂಡಿ ಮಾರ್ಗ ಪತ್ತೆ ಮಾಡಲಾಗಿದೆ. ಜತೆಗೆ ಅದನ್ನು ಸರಿಪಡಿಸಿ, ಮಂಗಳಗಟ್ಟಿ ಪ್ಲಾಟ್‌ ಮೂಲಕ ಹರಿದು ಬರುವ ಕಲುಷಿತ ನೀರು, ತ್ಯಾಜ್ಯವನ್ನು ನೇರವಾಗಿ ಕೆರೆಯಿಂದ ಹೊರ ಕಳುಹಿಸುವ ಯೋಜನೆ ಹಾಕಲಾಗಿದೆ. ಇದರೊಂದಿಗೆ ಪೊಲೀಸ್‌ ಇಲಾಖೆ ಅಡಿಯಲ್ಲಿರುವ ದುರ್ಗಾದೇವಿ ದೇವಸ್ಥಾನದಿಂದ ಕೆರೆಗೆ ಸೇರುವ ಕೊಳಚೆ ನೀರು ಸಹ ತಡೆಯಲು ಇಲಾಖೆಗೆ ತಿಳಿಸಲಾಗಿದೆ ಎಂದು ಪಾಲಿಕೆಯ ಸಹಾಯಕ ಆಯುಕ್ತ ಅರವಿಂದ ಜಮಖಂಡಿ ಮಾಹಿತಿ ನೀಡಿದರು.

ಕೆರೆಗೆ ಬರುವ ಚರಂಡಿ ನೀರನ್ನು ನೇರವಾಗಿ ಕೊಡಿ ಪ್ರದೇಶಕ್ಕೆ ಹೊರ ಹಾಕುವುದಲ್ಲದೇ, ಈ ಮೊದಲಿದ್ದ ಸಂಗೀತ ಕಾರಂಜಿ ಮರು ಆರಂಭಿಸುವುದು, ಉದ್ಯಾನವನದಲ್ಲಿನ ಪ್ರತಿಮೆಗಳ ನಿರ್ವಹಣೆ, ಮಕ್ಕಳಿಂದ ಹಿಡಿದು ದೊಡ್ಡವರನ್ನು ಮನರಂಜಿಸುವ ಬೋಟಿಂಗ್ ವ್ಯವಸ್ಥೆ, ವಿವಿಧ ಆಟ, ಫುಡ್ ಕೋರ್ಟ್, ವಿಶ್ರಾಂತಿ ಗೃಹಗಳನ್ನು ಮರು ಆರಂಭಿಸಬೇಕು. ಈ ಮೂಲಕ ಬೇಂದ್ರೆ ಅವರ ಹೆಸರಿನ ಈ ಕೆರೆ, ಉದ್ಯಾನವನ ಮಾದರಿಯಾಗಿ ಮಾಡಬೇಕು ಎಂಬುದು ಸ್ಥಳೀಯ ಆಗ್ರಹ.ತ್ಯಾಜ್ಯ ಹಾಗೂ ಕೊಳಚೆ ನೀರಿನಿಂದ ತುಂಬಿರುವ ಸಾಧನಕೇರಿ ಕೆರೆ ನೋಡಿ ಮಮ್ಮುಲ ಮರಗುತ್ತಿದ್ದೇವೆ. ಕೆರೆಯ ಪಕ್ಕದ ಬಡಾವಣೆಗೂ ಕೊಳಚೆ ನೀರಿನ ವಾಸನೆ. ಆಡಳಿತ ವ್ಯವಸ್ಥೆಗೆ ದೂರು ನೀಡಿ ಬೇಸತ್ತು ಕೊನೆಗೆ ಪಾಲಿಕೆ ಅಧಿಕಾರಿಗಳ ಮೂಲಕ ಮೊದಲಿದ್ದ ಒಳಚರಂಡಿ ಪತ್ತೆ ಮಾಡಲಾಗಿದೆ. ಆದಷ್ಟು ಶೀಘ್ರ ಈ ಒಳಚರಂಡಿ ಸುಧಾರಿಸಿ ಈ ಮೂಲಕ ಕಲುಷಿತ ನೀರು ಹೊರಗೆ ಹಾಕಿದರೆ ಮಾತ್ರ ಸಾಧನಕೇರಿ ಕೆರೆ, ಉದ್ಯಾನವನ ಉಳಿಯಲಿದೆ.

ವೆಂಕಟೇಶ ತೆಲಗಾರ, ಹುಬ್ಲೀಕರ ಪ್ಲಾಟ್‌ ಹಿರಿಯರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಂಚ ರಾಜ್ಯ ಚುನಾವಣೆ ಫಲಿತಾಂಶ ಪಟ್ಟಣದಲ್ಲಿ ಬಿಜೆಪಿ ಸಂಭ್ರಮ
ಉಪಚುನಾವಣೆ ಗೆಲುವು: ಜನರ ವಿಶ್ವಾಸ ಮತ್ತೆ ಸಾಬೀತು