ಕನ್ನಡಪ್ರಭ ವಾರ್ತೆ ಶಿರಸಿ
ಕಾಂಗ್ರೆಸ್ ಮುಖಂಡ ಸುನಿಲ್ ನಾಯ್ಕ್ ನೇತೃತ್ವದಲ್ಲಿ ಸುಮಾರು 2-3 ಗಂಟೆಗಳ ಕಾಲ ರಸ್ತೆ ತಡೆ ನಡೆಸಿ, ಅಣುಕು ಶವ ಪ್ರದರ್ಶನ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಘೋಷಣೆಗಳನ್ನು ಕೂಗಿ ರಸ್ತೆ ತಡೆ ನಡೆಸಿ ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಪಟ್ಟು ಹಿಡಿದರು.ಸುದ್ದಿ ತಿಳಿದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜನರ ಮನವೊಲಿಸುವ ಪ್ರಯತ್ನ ಮಾಡಿದರು. ಆ ಸಂದರ್ಭದಲ್ಲಿ ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮೇ ಅಂತ್ಯದೊಳಗಾಗಿ ರಸ್ತೆಯನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಮೇ 7ರ ವರೆಗೆ ಶಿರಸಿ ಬಿಸಿಲಕೊಪ್ಪ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.ಮಂಗಳವಾರ ಸಾರ್ವಜನಿಕರು, ರೈತ ಸಂಘಟನೆಯವರು ಸೇರಿ ನಡೆಸಿದ ಪ್ರತಿಭಟನೆಯಲ್ಲಿ ಸಾರ್ವಜನಿಕರ ಅಹವಾಲು ಕೇಳಿದ ಸಹಾಯಕ ಆಯುಕ್ತರು, ತಾಲೂಕು ದಂಡಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕಾರಣ ಭಾರಿ ವಾಹನಗಳಾದ ಬಸ್, ಟಿಪ್ಪರ್, ಟೆಂಪೋ ಟ್ರಾವೆಲರ್, ಖಾಸಗಿ ವಾಹನಗಳಿಗೆ ಶಿರಸಿ-ಬಿಸಲ್ಕೊಪ್ಪ ಮಾರ್ಗ ಬಿಟ್ಟು ಹುಬ್ಬಳ್ಳಿ ಕಡೆಯಿಂದ ಬರುವ ವಾಹನಗಳು ಮಳಗಿ-ದಾಸನಕೊಪ್ಪ-ಬನವಾಸಿ-ಶಿರಸಿ ಹಾಗೂ ಹಾವೇರಿ ಕಡೆಯಿಂದ ಬರುವ ವಾಹನಗಳು ದಾಸನಕೊಪ್ಪ-ಬನವಾಸಿ-ಶಿರಸಿ ಮಾರ್ಗದಲ್ಲಿ ಸಂಚರಿಸಬೇಕೆಂದು ತಿಳಿಸಲಾಗಿದೆ.