ಕನ್ನಡಪ್ರಭ ವಾರ್ತೆ ಬೆಂಗಳೂರು

ಎಸ್‌ಬಿಐ ನೇತೃತ್ವದ ಒಕ್ಕೂಟ ಬ್ಯಾಂಕ್‌ಗಳಿಂದ ಅಕ್ರಮವಾಗಿ ಬಹುಕೋಟಿ ಸಾಲ ಪಡೆದು ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ(ಪಿಎಂಎಲ್‌ಎ) ಬೆಂಗಳೂರಿನ ದೀಪಕ್‌ ಕೇಬಲ್‌ ಇಂಡಿಯಾ ಲಿಮಿಟೆಡ್‌(ಡಿಸಿಐಎಲ್‌) ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ನಿರ್ದೇಶಕರು, ಪಾಲುದಾರರ ವಿರುದ್ಧ ಬೆಂಗಳೂರು ವಲಯದ ಜಾರಿ ನಿರ್ದೇಶನಾಲಯ (ಇ.ಡಿ.) ನಗರದ ಇ.ಡಿ.ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದೆ.

ದೀಪಕ್‌ ಕೇಬಲ್‌ ಇಂಡಿಯಾ ಲಿಮಿಟೆಡ್‌, ಈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೆ.ವೆಂಕಟೇಶ್ವರ ರಾವ್‌, ಮಾಜಿ ನಿರ್ದೇಶಕಿ ಸತ್ಯವತಿ ಬಲ್ಲಾ, ಸೂರ್ಯ ಟ್ರಾನ್ಸ್‌ಮಿಷನ್‌ ಲಿಮಿಟೆಡ್‌, ಆಧುನಿಕ ಪವರ್‌ ಟ್ರಾನ್ಸ್‌ಮಿಷನ್‌, ಅಮೃತ ಕನ್‌ಸ್ಟ್ರಕ್ಷನ್‌ ಪ್ರೈವೇಟ್‌ ಲಿಮಿಟೆಡ್‌, ಎಸಿಪಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪಿ.ವೆಂಕಟೇಶ್ವರ ರಾವ್‌, ಕೆಜಿಎನ್‌ ಎಲೆಕ್ಟ್ರಿಕಲ್ಸ್‌, ಇದರ ಪಾಲುದಾರ ಮೊಹಮ್ಮದ್ ಇದ್ರಿಸ್‌, ಶರಾವತಿ ಕಂಡಕ್ಟರ್ಸ್‌ ಪ್ರೈವೇಟ್‌ ಲಿಮಿಟೆಡ್‌, ಎಸ್‌ಸಿಪಿಎಲ್‌, ಇದರ ವ್ಯವಸ್ಥಾಪಕ ನಿರ್ದೇಶಕ ಕಾರದಮ್‌ ಪಟೇಲ್‌ ವಿರುದ್ಧ ಇ.ಡಿ. ನ್ಯಾಯಾಲಯಕ್ಕೆ ಚಾರ್ಜ್‌ಸೀಟ್‌ ಸಲ್ಲಿಸಿದೆ.

ಈ ಆರೋಪಿಗಳು ಕ್ರಿಮಿನಲ್‌ ಚಟುವಟಿಕೆ ನಡೆಸುವ ಮುಖಾಂತರ ಅಪರಾಧದ ಆದಾಯ ಉತ್ಪಾದನೆಯಲ್ಲಿ ನೇರ ಅಥವಾ ಪರೋಕ್ಷವಾಗಿ ಭಾಗಿಯಾಗಿದ್ದಾರೆ. ಅಕ್ರಮ ಹಣ ವರ್ಗಾವಣೆಯಲ್ಲಿ ತಪ್ಪಿತಸ್ಥರಾಗಿದ್ದಾರೆ ಎಂದು ಇ.ಡಿ. ನ್ಯಾಯಾಲಯಕ್ಕೆ ಸಲ್ಲಿಸಿರುವ ಜಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ಬೆಂಗಳೂರಿನ ಎಸ್‌ಬಿಐ ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕ ನೀಡಿದ ಲಿಖಿತ ದೂರಿನ ಮೇರೆಗೆ ಬೆಂಗಳೂರಿನ ಸಿಬಿಐ, ಬಿಎಸ್‌ಎಫ್‌ಬಿ ತನಿಖಾ ಸಂಸ್ಥೆಗಳು ಈ ಆರೋಪಿತರ ವಿರುದ್ಧ ಐಪಿಸಿ ವಿವಿಧ ಸೆಕ್ಷನ್‌ಗಳು, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿದ್ದವು. ಇದರ ಆಧಾರದಡಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಇ.ಡಿ.ತನಿಖೆ ಆರಂಭಿಸಿತ್ತು.


ಎಸ್‌ಬಿಐ ಬ್ಯಾಂಕ್‌ಗೆ 899.35 ಕೋಟಿ ರು. ನಷ್ಟ:

ಈ ಡಿಸಿಐಎಲ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ವೆಂಕಟೇಶ್ವರ ರಾವ್‌ ಮತ್ತು ಇತರ ನಿರ್ದೇಶಕರು ಎಸ್‌ಬಿಐ ಬ್ಯಾಂಕ್‌ಗೆ 899.35 ಕೋಟಿ ರು. ಅಕ್ರಮವಾಗಿ ನಷ್ಟ ಉಂಟು ಮಾಡಿದ ಆರೋಪ ಕೇಳಿ ಬಂದಿತ್ತು. ಅಂತೆಯೆ ಬೆಂಗಳೂರಿನ ಪಿಎನ್‌ಬಿ ಬ್ಯಾಂಕ್‌ಗೆ ಈ ಡಿಸಿಐಎಲ್‌ ಮತ್ತು ಅದರ ಪ್ರವರ್ತಕರು 147.93 ಕೋಟಿ ರು. ನಷ್ಟ ಉಂಟು ಮಾಡಿದ ಆರೋಪದಡಿ ಸಿಬಿಐ, ಬಿಎಸ್‌ಎಫ್‌ಬಿನಲ್ಲಿ ಮತ್ತೊಂದು ಎಫ್‌ಐಆರ್‌ ದಾಖಲಾಗಿತ್ತು. ಈ ಎಫ್‌ಐಆರ್‌ಗಳ ಆಧಾರದ ಮೇಲೆ ಇಸಿಐಆರ್‌ ದಾಖಲಿಸಿ ಇ.ಡಿ.ತನಿಖೆ ನಡೆಸಿತ್ತು.

ನಕಲಿ ದಾಖಲೆ ಸೃಷ್ಟಿಸಿ

ಕೋಟಿ ಕೋಟಿ ಸಾಲ

ಈ ಡಿಸಿಐಎಲ್‌ ಕಂಪನಿ ಅಲ್ಯೂಮಿನಿಯಂ ಕಂಡಕ್ಟರ್‌ಗಳ ತಯಾರಿಕೆ, ವಿದ್ಯುತ್ ಪ್ರಸರಣದಲ್ಲಿ ತೊಡಗಿಸಿಕೊಂಡಿದೆ. ಈ ಕಂಪನಿ ನಕಲಿ ದಾಖಲೆ ಸಲ್ಲಿಸಿ ಬ್ಯಾಂಕ್‌ಗಳ ಒಕ್ಕೂಟದಿಂದ ಸಾಲ ಪಡೆದಿರುವುದು ತಿಳಿದು ಬಂದಿದೆ. ಆರೋಪಿತ ಕಂಪನಿಗಳು ಹಾಗೂ ಕಾಲ್ಪನಿಕ ಸಂಸ್ಥೆಗಳೊಂದಿಗೆ ನಕಲಿ ಮಾರಾಟದ ವಹಿವಾಟು ತೋರಿಸಿದೆ. ಬ್ಯಾಂಕುಗಳಿಂದ ಅಕ್ರಮವಾಗಿ ಪಡೆದ ಸಾಲದ ಹಣವನ್ನು ಕಂಪನಿ ನಿರ್ದೇಶಕರ ವೈಯಕ್ತಿಕ ಖಾತೆಗಳು, ಕಂಪನಿಗಳ ಖಾತೆಗಳಿಗೆ ವರ್ಗಾಯಿಸಿದೆ. ಅಂತೆಯೆ ಖಾಸಗಿ ಈಕ್ವಿಟಿ ಷೇರುಗಳು, ಐಡಿಎಫ್‌ಸಿ ಲಿಮಿಟೆಡ್‌ನಲ್ಲಿ ಹೂಡಿಕೆ, ಅಸೆಂಟ್‌ ಇಂಡಿಯಾ ಫಂಡ್‌ ಹೊಂದಿರುವ ವಿವಿಧ ಸ್ಥಿರಾಸ್ತಿಗಳ ಖರೀದಿ, ಈಕ್ವಿಟಿ ಷೇರುಗಳ ಮರು ಖರೀದಿಗೆ ಬಳಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಈಗಾಗಲೇ ಡಿಸಿಐಎಲ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ವೆಂಕಟೇಶ್ವರ ರಾವ್‌ ಅವರನ್ನು ಕಳೆದ ಜೂ.2ರಂದು ಬಂಧಿಸಿ ಜೈಲಿಗಟ್ಟಲಾಗಿದೆ. ಆರೋಪಿಗಳ ಹೆಸರಿನಲ್ಲಿದ್ದ ಸ್ಥಿರಾಸ್ತಿಗಳು ಸೇರಿದಂತೆ 51.28 ಕೊಟಿ ರು. ಮೌಲ್ಯದ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಇ.ಡಿ. ಪ್ರಕಟಣೆಯಲ್ಲಿ ತಿಳಿಸಿದೆ.