ರಾಜ್ಯದ ಹಣಕಾಸು ಪರಿಸ್ಥಿತಿ ಹದಗೆಟ್ಟಿದ್ದು, ಸರ್ಕಾರದಲ್ಲಿ ಹಣವಿಲ್ಲ ಎಂದು ಆರೋಪಿಸಿ ಪ್ರಮುಖ ಪ್ರತಿಪಕ್ಷ ಬಿಜೆಪಿಯ ಶಾಸಕರು ವಿಧಾನಸೌಧದ ಕೆಂಗಲ್ ಪ್ರತಿಮೆ ಬಳಿ ಖಾಲಿ ಚೊಂಬು ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಬೆಂಗಳೂರು : ರಾಜ್ಯದ ಹಣಕಾಸು ಪರಿಸ್ಥಿತಿ ಹದಗೆಟ್ಟಿದ್ದು, ಸರ್ಕಾರದಲ್ಲಿ ಹಣವಿಲ್ಲ ಎಂದು ಆರೋಪಿಸಿ ಪ್ರಮುಖ ಪ್ರತಿಪಕ್ಷ ಬಿಜೆಪಿಯ ಶಾಸಕರು ವಿಧಾನಸೌಧದ ಕೆಂಗಲ್ ಪ್ರತಿಮೆ ಬಳಿ ಖಾಲಿ ಚೊಂಬು ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು, ಹಣಕಾಸು ಖಾತೆ ಹೊಣೆ ಹೊತ್ತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಇಲಾಖೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ತಕ್ಷಣವೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಇದು ಪಾಪರ್ ಸರ್ಕಾರ
ಇದು ಪಾಪರ್ ಸರ್ಕಾರ. ಇವತ್ತು ಕರ್ನಾಟಕದಲ್ಲಿ ಸರ್ಕಾರ ನಡೆಸುವಂಥ ಯೋಗ್ಯತೆಯನ್ನು ಶಿವಕುಮಾರ್ ಅವರು ಕಳೆದುಕೊಂಡಿದ್ದಾರೆ. ಸರ್ಕಾರಕ್ಕೆ ಹಣದ ಕೊರತೆಯಾಗಿ ದಿವಾಳಿ ಆಗಿರುವುದಕ್ಕೆ ಹಣಕಾಸು ಇಲಾಖೆಯವರು ಒಂದು ಶ್ವೇತಪತ್ರವನ್ನೇ ಬಿಡುಗಡೆ ಮಾಡಿಬಿಟ್ಟಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಖಾಲಿ ಡಬ್ಬ ಎನ್ನುವುದು ಇವತ್ತು ಸ್ಪಷ್ಟ ಆಗುತ್ತಿದೆ. ಜನರ ಪಾಲಿಗೆ ಚೊಂಬು. ಬರ ಪರಿಸ್ಥಿತಿಗೆ ದುಡ್ಡು ಕೊಡುವುದಕ್ಕೆ ಆಗಿಲ್ಲ. ನಾಲ್ಕು ತಿಂಗಳಾಯ್ತು. ಪಿಂಚಣಿ ಹಣ ಕೊಟ್ಟಿಲ್ಲ. ಬಡವರು ಸಾಯುತ್ತಿದ್ದಾರೆ. ಶಿಕ್ಷಕರಿಗೆ ಸಂಬಳ ಇಲ್ಲ, ರೈತರಿಗೆ ಕರೆಂಟ್ ಇಲ್ಲ. ಹಾಲು ಉತ್ಪಾದಕರು ಯಾರಿದ್ದಾರೋ ಅವರಿಗೆ 12 ತಿಂಗಳಿಂದ ಸಬ್ಸಿಡಿ ಹಣ ಕೊಟ್ಟಿಲ್ಲ ಎಂದು ಟೀಕಿಸಿದರು.
ಇದು ಘೋಷಣೆಗಳ ಸರ್ಕಾರ
ಇದು ಘೋಷಣೆಗಳ ಸರ್ಕಾರ. ಬೋಗಸ್ ಸರ್ಕಾರ. ಇವತ್ತು ಹಣಕಾಸು ಇಲಾಖೆಯವರು ಹೇಳಿದ್ದಾರೆ. ನೀವೊಬ್ಬರು ನಾಲಾಯಕ್ ಎನ್ನುವ ರೀತಿ ಅವರು ಹೇಳಿಲ್ಲ. ಆದರೆ ಅದರ ಅರ್ಥ ನೀವು ಹಣಕಾಸು ಇಲಾಖೆಯನ್ನು ಅರ್ಥ ಮಾಡಿಕೊಂಡಿಲ್ಲ. ನಿಮಗೆ ಮನಸ್ಸಿಗೆ ಬಂದಂಗೆ ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಅನೌನ್ಸ್ ಮಾಡ್ಕೊಂಡು ಹೋಗ್ತಾ ಇದ್ದೀರಾ. ಇದು ನ್ಯಾಯವೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ಬರಕ್ಕೆ ಒಂದು ಪೈಸೆ ಸಾಲ ಕೊಡಲ್ಲ ಅಂತ ಬರೆದಿದ್ದಾರೆ. ನಾಚಿಕೆ ಆಗುವುದಿಲ್ಲವೇ ನಿಮಗೆ? ಏನು ಆಕಾಶನೇ ಇಳಿಸೋ ರೀತಿ ಮಾತಾಡ್ತಾ ಇದ್ದೀರಿ. ನಿಮಗೆ ಅಧಿಕಾರ ಕೊಟ್ಟರೆ ನೀವು ರಾಹುಲ್ ಗಾಂಧಿಗೋಸ್ಕರ ಹಣ ಸಂಗ್ರಹಿಸುತ್ತಾ ಇದ್ದೀರಿ ಎಂದು ಆಪಾದಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಪಕ್ಷದ ಸದಸ್ಯರು ಉಪಸ್ಥಿತರಿದ್ದರು.
