ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಮಾಜ ಕಲ್ಯಾಣ ಸಚಿವರನ್ನು ಗುರಿ ಮಾಡಿಕೊಂಡು ತರಾತುರಿಯಲ್ಲಿ ಕಾಲಾವಧಿ ನಿಗದಿ ಮಾಡಿ ಒಳ ಮೀಸಲಾತಿ ಜಾರಿ ಮಾಡಿ ಎಂದು ಒತ್ತಾಯ ಮಾಡುವುದು ಸರಿಯಲ್ಲ ಎಂದು ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಮಂಜುನಾಥ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ನಾಯಕ ಭಾಸ್ಕರ್ ಪ್ರಸಾದ್ ತಾಳ್ಮೆ ಕಳೆದುಕೊಳ್ಳಬಾರದು, ಒಳ ಮೀಸಲಾತಿ ಜಾರಿ ಮಾಡಿ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ಅವರನ್ನು ಗುರಿ ಮಾಡಿಕೊಂಡು ಹೇಳಿಕೆ ನೀಡಬಾರದು. ಹಿಂದಿನ ಸಚಿವರಿಗೆ ಹಾಕದ ಒತ್ತಡ ಎಚ್.ಸಿ ಮಹದೇವಪ್ಪ ಅವರಿಗೆ ಹಾಕುವುದು ಸೂಕ್ತವಲ್ಲ ಎಂದರು.
ಒಳಮೀಸಲಾತಿ ಕಲ್ಪಿಸುವ ಆಗ್ರಹ ಹಲವು ವರ್ಷಗಳ ಹಿಂದಿನಿಂದಲೂ ಕೇಳಿಬಂದಿತ್ತು. ಆಂಧ್ರಪ್ರದೇಶದ ರೀತಿಯಲ್ಲಿ ಮೀಸಲಾತಿ ಜಾರಿಗೆ ತರುವ ನಿಟ್ಟಿನಲ್ಲಿ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸದಾಶಿವ ಆಯೋಗವನ್ನು ರಚನೆ ಮಾಡಲಾಗಿತ್ತು. ಮಾದಿಗರಿಗೆ ಶೇ.6 ಹಾಗೂ ಹೊಲೆಯರಿಗೆ ಶೇ.5 ರಷ್ಟು ಮೀಸಲಾತಿ ಕಲ್ಪಿಸಲು ಸರ್ಕಾರಕ್ಕೆ ಈ ಆಯೋಗ ವರದಿ ಸಲ್ಲಿಸಿತ್ತು ಎಂದರು. ಆದರೆ, ಈ ಆಯೋಗ ಸಲ್ಲಿಸಿದ ವರದಿಯಲ್ಲಿ ಹಲವು ನ್ಯೂನತೆಗಳಿದ್ದ ಕಾರಣ ಕಾಂಗ್ರೆಸ್ ಸರ್ಕಾರ ನ್ಯಾ.ನಾಗಮೋಹನ್ ದಾಸ್ ಆಯೋಗ ರಚನೆ ಮಾಡಿತ್ತು. ಒಳ ಮೀಸಲಾತಿ ಸಂಬಂಧ ನಮ್ಮ ತಕರಾರಿಲ್ಲ. ಸಮುದಾಯಗಳ ನಡುವೆ ಅಂತರ ಸೃಷ್ಟಿಸುವುದು ಬೇಡ. ಶೋಷಿತ ಸಮುದಾಯ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದರು.ಪರಿಶಿಷ್ಟ ಜನಾಂಗದಲ್ಲಿ 101 ಉಪಜಾತಿಗಳಿವೆ. ತರಾತುರಿಯಲ್ಲಿ ಒಳ ಮೀಸಲಾತಿ ಜಾರಿ ಮಾಡುವುದು ಸರಿಯಲ್ಲ. ಬದಲಿಗೆ ಮನೆ ಮನೆಗೆ ತೆರಳಿ ಅಂಕಿ ಅಂಶಗಳನ್ನು ಸಂಗ್ರಹಿಸಿ ಆ ನಂತರ ಒಳಮೀಸಲಾತಿ ಜಾರಿ ಮಾಡಿದರೆ ಎಲ್ಲರಿಗೂ ಅನುಕೂಲವಾಗಲಿದೆ. ಪರಿಶಿಷ್ಟ ಜನಾಂಗದ ಉಪ ಜಾತಿಗಳಿಗೆ ಸಂಬಂಧಿಸಿದಂತೆ ಸೂಕ್ತ ದತ್ತಾಂಶ ಸಂಗ್ರಹಿಸಿ ಆ ನಂತರ ಒಳ ಮೀಸಲಾತಿ ಕಲ್ಪಿಸಬೇಕು ಎಂದರು.
ದಸಂಸ ಮುಖಂಡ ಕೆ.ಎಂ.ನಾಗರಾಜು ಮಾತನಾಡಿ, ಮಾದಿಗ ಜನಾಂಗದ ಕಳೆದ 20 ವರ್ಷಗಳಿಂದಲೂ ಒಳ ಮೀಸಲಾತಿಗೆ ಹೋರಾಟ ಮಾಡುತ್ತಿದೆ. ಒಳಮೀಸಲಾತಿಗೆ ನಮ್ಮ ವಿರೋಧವಿಲ್ಲ. ಸಂವಿಧಾನದಲ್ಲಿ ಒಳಮೀಸಲಾತಿಗೆ ಅವಕಾಶವಿಲ್ಲ. ಬಲಗೈ ಸಮುದಾಯದ ಮುಖಂಡರಿಗೆ ಅವಮಾನ ಮಾಡುವುದು ಬೇಡ ಎಂದರು. ಸುದ್ದಿಗೋಷ್ಟಿಯಲ್ಲಿ ಗಡಿ ಯಜಮಾನರಾದ ಶಿವಣ್ಣ, ವೀರಣ್ಣ, ನಾಗರಾಜು, ಶಿವಕುಮಾರ್, ಕೂಗು ಮುಖಂಡರಾದ ಗಣೇಶ್ ಪ್ರಸಾದ್, ಶಿವರಾಜು ಇದ್ದರು.