ಹಾವೇರಿ: ಕಾಂಗ್ರೆಸ್ ನಿಷ್ಠಾವಂತ ನಾಯಕ, ವಿಧಾನಪರಿಷತ್ ಮುಖ್ಯಸಚೇತಕ ಸಲೀಂ ಅಹ್ಮದ್ ಅವರ ಬಗ್ಗೆ ಡಾ. ಆರ್.ಎಂ. ಕುಬೇರಪ್ಪ ಅವರು ಹಗುರವಾಗಿ ಮಾತನಾಡಿರುವುದು ಬೇಸರ ಉಂಟು ಮಾಡಿದೆ ಎಂದು ವಿಧಾನಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಹೇಳಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರ್ನಾಟಕ ವಿಧಾನಪರಿಷತ್ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣಾ ಅಭ್ಯರ್ಥಿಗಳ ಆಯ್ಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಆಯಾ ಕ್ಷೇತ್ರಗಳ ಶಾಸಕರು ಮತ್ತು ಪಕ್ಷದ ಮುಖಂಡರ ಅಭಿಪ್ರಾಯಗಳು ಹಾಗೂ ಸಮೀಕ್ಷಾ ವರದಿಗಳನ್ನು ಆಧರಿಸಿ ಎಐಸಿಸಿಗೆ ವರದಿ ಸಲ್ಲಿಸಿದ್ದಾರೆ. ತದನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸುರ್ಜೇವಾಲಾ ಅವರು ಸಮಾಲೋಚನೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.ಡಾ. ಆರ್.ಎಂ. ಕುಬೇರಪ್ಪ ಅವರು ಪಶ್ಚಿಮ ಪದವೀಧರ ಕ್ಷೇತ್ರದ ಅಪೇಕ್ಷಿತ ಅಭ್ಯರ್ಥಿಯಾಗಿದ್ದು, ಅವರು ೮ ವರ್ಷಗಳು ಕೆಪಿಸಿಸಿ ಪದವೀಧರರ ಘಟಕದ ರಾಜ್ಯಾಧ್ಯಕ್ಷರಾಗಿದ್ದರು ಹಾಗೂ ಮೊದಲು ೨೦೨೦ರಲ್ಲಿ ಇದೇ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಅಲ್ಲದೆ, ೨೦೧೬ರಲ್ಲಿ ಶಿಕ್ಷಕರ ಮತಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ ಎಂದಿದ್ದಾರೆ.ಸಲೀಂ ಅಹ್ಮದ ಅವರು ವಿಧಾನಪರಿಷತ್ತಿನ ಮುಖ್ಯ ಸಚೇತಕರಾಗಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಹಾಗೂ ಎಐಸಿಸಿ ಕಾರ್ಯದರ್ಶಿಯಾಗಿ ಪಕ್ಷಕ್ಕಾಗಿ ನಿರಂತರವಾಗಿ ದುಡಿದ ನಿಷ್ಠಾವಂತ ನಾಯಕರು. ಪಕ್ಷದ ಮೇಲಿನ ಅವರ ಬದ್ಧತೆ ಪ್ರಶ್ನಾತೀತ. ವಾಸ್ತವ ಸ್ಥಿತಿ ಗೊತ್ತಿದ್ದರೂ ಡಾ. ಆರ್.ಎಂ. ಕುಬೇರಪ್ಪ ಅವರು ಸಲೀಂ ಅಹ್ಮದ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಆ ರೀತಿಯ ಹೇಳಿಕೆಗಳಿಂದ ಡಾ. ಆರ್.ಎಂ. ಕುಬೇರಪ್ಪ ಅವರಿಗೆ ಯಾವುದೇ ಗೌರವವೂ ದೊರೆಯುವುದಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಪಕ್ಷದ ಹಿತದೃಷ್ಟಿಯಿಂದ ಪಕ್ಷದ ಯಾವುದೇ ವ್ಯಕ್ತಿಯ ಬಗ್ಗೆ ಹೇಳಿಕೆ ನೀಡುವ ಮೊದಲು ಸಮಗ್ರ ವಿಚಾರಣೆ ಮಾಡಿ ಮಾತನಾಡಬೇಕು ಎಂದು ಲಿಂಬಿಕಾಯಿ ತಿಳಿಸಿದ್ದಾರೆ.