ಎಸ್. ನಾರಾಯಣ್ ಮುನಿರಾಬಾದ್
ತುಂಗಭದ್ರಾ ಮಂಡಳಿಯ ಕಚೇರಿಯಲ್ಲಿ ಜಲಾಶಯದ ಗೇಟ್‌ಗಳ ನಿರ್ಮಾಣ ಹಾಗೂ ಅಳವಡಿಕೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ ಅವರು, ಜಲಾಶಯದ ಗೇಟ್ ಅಳವಡಿಕೆ ವಿಚಾರದಲ್ಲಿ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ಸರ್ಕಾರಗಳು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು, ಅಂದಾಗ ಮಾತ್ರ ಜಲಾಶಯದ ಗೇಟ್‌ಗಳ ಅಳವಡಿಕೆ ಕಾರ್ಯ ಜೂನ್ ಅಂತ್ಯದ ವೇಳೆಗೆ ಮುಗಿಯಲು ಸಾಧ್ಯ. ಇಲ್ಲವಾದರೇ ಈ ವಿಳಂಬ ನೀತಿಯಿಂದ ರೈತರಿಗೆ ಅನ್ಯಾಯವಾಗಲಿದೆ ಎಂದರು.
ಮೂರು ರಾಜ್ಯಗಳ ಸರ್ಕಾರಗಳು ಹಿರಿಯ ಅಧಿಕಾರಿಗಳನ್ನು ಕಾಮಗಾರಿ ನಡೆಯುವ ಸ್ಥಳದಲ್ಲಿ ನೇಮಕ ಮಾಡಬೇಕು, ಇದರಿಂದ ಸಮನ್ವಯತೆ ಉಂಟಾಗುತ್ತದೆ ಹಾಗೂ ಸಣ್ಣಪುಟ್ಟ ಸಮಸ್ಯೆ ಬಂದರೆ ಅದನ್ನು ಸ್ಥಳದಲ್ಲೇ ಬಗೆಹರಿಸಿ ಕಾಮಗಾರಿ ತ್ವರಿತಗತಿಯಲ್ಲಿ ನಡೆಯಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.2024ರ ಆಗಸ್ಟ್ ತಿಂಗಳಲ್ಲಿ ಜಲಾಶಯದ 19ನೇ ಗೇಟು ಕಿತ್ತು ಹೋದಾಗ, ಸ್ಟಾಪ್‌ಲಾಗ್ ಅಳವಡಿಕೆ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿದರು. ಇದರಿಂದ ಕಿತ್ತು ಹೋದ ಗೇಟಿನ ಸಮಸ್ಯೆ ಬೇಗ ಪರಿಹಾರವಾಯಿತು ಎಂದರು.
ಜಲಾಶಯದ ಗೇಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆಂಧ್ರ ಸರ್ಕಾರವು ತನ್ನ ಪಾಲಿನ ಹಣ ನೀಡಿದೆ. ಕರ್ನಾಟಕ ಸರ್ಕಾರವು ತನ್ನ ಪಾಲಿನ ಹಣ ನೀಡಿ ಮತ್ತೆ ಅದನ್ನು ವಾಪಸ್ ಪಡೆದಿದೆ ಎಂದು ಗೇಟ್ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರು ತಮಗೆ ತಿಳಿಸಿದ್ದು, ತಾವು ಈ ವಿಷಯಕ್ಕೆ ಸಂಬಂಧಿಸಿದಂತೆ ಆದಷ್ಟು ಬೇಗನೆ ಗುತ್ತಿಗೆದಾರರಿಗೆ ಹಣ ನೀಡುವಂತೆ ನೀರಾವರಿ ಇಲಾಖೆ ಮುಖ್ಯ ಅಭಿಯಂತರ ಲಕ್ಷ್ಮಣ್ ನಾಯಕ್ ಅವರಿಗೆ ಸೂಚಿಸಿರುವುದಾಗಿ ತಿಳಿಸಿದರು.ಇದುವರೆಗೆ ಕೇವಲ 20 ನೂತನ ಗೇಟ್ ನಿರ್ಮಾಣವಾಗಿದ್ದು, ಈ ಸಮಯಕ್ಕೆ ಎಲ್ಲ 33 ಗೇಟ್‌ಗಳು ನಿರ್ಮಾಣವಾಗಬೇಕಾಗಿತ್ತು. ಆದರೆ ಹಣದ ಕೊರತೆಯಿಂದ ಗೇಟ್ ನಿರ್ಮಾಣ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಹೇಳಿದರು.
ಒಂದು ವೇಳೆ ಜೂನ್ ಅಂತ್ಯಕ್ಕೆ ಎಲ್ಲ 33 ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಳ್ಳದಿದ್ದರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಭಾರಿ ಸಂಕಷ್ಟ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ನಾರಾಯಣಪುರ ಜಲಾಶಯದ ಗೇಟ್ ನಿರ್ಮಿಸುವ ಸಂದರ್ಭದಲ್ಲಿ ತಾವು ಗುತ್ತಿಗೆದಾರರಿಗೆ ಸರಿಯಾದ ಸಮಯಕ್ಕೆ ಹಣ ಪಾವತಿಸಬೇಕೆಂದು ಅಂದಿನ ಸಿಎಂ ಧರ್ಮಸಿಂಗ್ ಅವರನ್ನು ಮನವಿ ಮಾಡಿದಾಗ ಅವರು ತಮ್ಮ ಮನವಿಗೆ ಸ್ಪಂದಿಸಿ ತಕ್ಷಣ ಹಣ ಬಿಡುಗಡೆ ಮಾಡಿದ್ದರು ಎಂದರು.
ಗುತ್ತಿಗೆದಾರರಿಂದ ಹಣ ವಾಪಸ್ ಪಡೆದ ವಿಷಯ ನನಗೆ ಗೊತ್ತಿಲ್ಲ. ತುಂಗಭದ್ರಾ ಮಂಡಳಿಯೇ ಹಣದ ಎಲ್ಲ ವ್ಯವಹಾರ ನೋಡಿಕೊಳ್ಳುತ್ತಿದೆ ಎಂದು ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಲಕ್ಷ್ಮಣ್ ನಾಯಕ್ ತಿಳಿಸಿದ್ದಾರೆ.ಕರ್ನಾಟಕ ಸರ್ಕಾರ ತಾನು ನೀಡಿದ ಹಣ ವಾಪಸ್ ಪಡೆದಿದ್ದು ನಿಜ. ಈಗ ಜಲಾಶಯದ ಗೇಟ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಈ ಸಮಯದಲ್ಲಿ ಸಕಾಲಕ್ಕೆ ನನಗೆ ಹಣ ಪಾವತಿಯಾದರೆ ಗೇಟ್ ಅಳವಡಿಕೆ ಕಾರ್ಯ ಸುಸೂತ್ರವಾಗಿ ನಡೆಯಲು ಸಾಧ್ಯವಾಗುತ್ತದೆ ಎಂದು ಗುತ್ತಿಗೆದಾರ ಸಾಗರ್ ತಿಳಿಸಿದ್ದಾರೆ.
ಜಲಾಶಯಕ್ಕೆ ನೂತನ ಗೇಟ್ ಅಳವಡಿಸುವುದು ಅತ್ಯಂತ ಪ್ರಮುಖ ಕಾರ್ಯವಾಗಿದೆ. ಸರ್ಕಾರ ಜೂನ್ 30ರ ಒಳಗೆ ಎಲ್ಲ ಗೇಟ್‌ಗಳನ್ನು ಅಳವಡಿಸಿ ರೈತರ ಮುಂಗಾರು ಬೆಳೆಗೆ ನೀರು ಒದಗಿಸಬೇಕು. ಒಂದು ವೇಳೆ ಜೂನ್ ಅಂತ್ಯಕ್ಕೆ ಗೇಟ್ ಅಳವಡಿಸುವ ಕಾರ್ಯ ಪೂರ್ಣಗೊಳ್ಳದಿದ್ದರೆ ರೈತ ಸಂಘದಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ್ ಮಾಲಿ ಪಾಟೀಲ್ ತಿಳಿಸಿದ್ದಾರೆ.