ಹೊಸಪೇಟೆ: ಕುರುಬರು ಸೇರಿದಂತೆ ಯಾವುದೇ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿಸಲು ನಮ್ಮ ವಿರೋಧವಿಲ್ಲ. ಆದರೆ, ಅದು ನಿಯಮಾನುಸಾರವಾಗಿ ಅರ್ಹತೆ ಪಡೆದಿರಬೇಕು. ಜೊತೆಗೆ ಹೆಚ್ಚುವರಿ ಮೀಸಲಾತಿಯನ್ನೂ ತರಬೇಕು. ಅನ್ನದ ಜೊತೆಗೆ ತಟ್ಟೆಯನ್ನೂ ತರಬೇಕು. ಖಾಲಿ ತಟ್ಟೆಯೊಂದಿಗೆ ಬಂದು ನಮ್ಮ ಮೀಸಲಾತಿಗೆ ಕೈ ಹಾಕುವುದಾದರೆ ಸಲ್ಲದು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದರು.
ಯಾವುದೇ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆಗೊಳಿಸುವ ಕುಲಶಾಸ್ತ್ರ ಅಧ್ಯಯನ ನಡೆಯಬೇಕು. ಬಳಿಕ ಸರ್ಕಾರ ರಚಿಸುವ ಸಮಿತಿ ಅದನ್ನು ನಿರ್ಧಾರ ಮಾಡುತ್ತದೆ. ಆದರೆ, ಅದಕ್ಕೂ ಮುನ್ನವೇ ನಮ್ಮ ತಟ್ಟೆಗೆ ಕೈ ಹಾಕಬೇಡಿ ಎಂಬುದನ್ನು ನಾವೆಲ್ಲ ಸ್ಪಷ್ಟವಾಗಿ ಹೇಳಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಇದರ ಮನವರಿಕೆ ಆಗಿದೆ. ಹೀಗಿದ್ದರೂ ಎಸ್‌ಟಿಗೆ ಸೇರಿಸಲೇಬೇಕು ಎಂದಾದರೆ ಎಸ್‌ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲೇಬೇಕು ಎಂದು ಆಗ್ರಹಿಸಿದರು.
ಕುರುಬ ಸಮುದಾಯ ಎಸ್‌ಟಿಗೆ ಒಳಪಡುತ್ತದೆಯೇ ಎಂಬುದರ ಕುರಿತು ಮೊದಲಾಗಿ ಕುಲಶಾಸ್ತ್ರೀಯ ಅಧ್ಯಯನ ಆಗಬೇಕು. ಗೊಲ್ಲ, ಬೆಸ್ತರು ಮೊದಲಾದ ಸಮಯದಾಯಗಳಲ್ಲೂ ಇದೇ ರೀತಿಯ ಅಧ್ಯಯನ ಆಗಬೇಕು. ಅದರ ಹೊರತಾಗಿ ಈಗಿನ ಸ್ಥಿತಿಯಲ್ಲೇ ಎಸ್‌ಟಿಗೆ ಸೇರಿಸುವ ಪ್ರಯತ್ನಗಳು ಒಳ್ಳೆಯದಲ್ಲ. ಕುಲಶಾಸ್ತ್ರೀಯ ಅಧ್ಯಯನ ನಡೆದು ಎಲ್ಲ ಅರ್ಹರನ್ನೂ ಎಸ್‌ಟಿಗೆ ಸೇರಿಸಬಹುದು. ಜೊತೆಗೆ ಮೀಸಲಾತಿ ಪ್ರಮಾಣವನ್ನೂ ಹೆಚ್ಚಿಸಬೇಕು ಎಂದರು.ವಾಲ್ಮೀಕಿ ಸಮಾಜದ ಕಾರ್ಯದರ್ಶಿ ದೇವರಮನೆ ಶ್ರೀನಿವಾಸ್ ಮಾತನಾಡಿ, ಹೆಚ್ಚುವರಿ ಮೀಸಲಾತಿಯೊಂದಿಗೆ ಇತರೆ ಸಮುದಾಯಗಳನ್ನು ಎಸ್‌ಟಿಗೆ ಸೇರ್ಪಡೆಗೊಳಿಸಬಹುದು ಎಂಬ ಉಗ್ರಪ್ಪ ಅಭಿಪ್ರಾಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಬಹುಸಂಖ್ಯಾತ ಕುರುಬರು ಸೇರಿದಂತೆ ಇನ್ನಿತರೆ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದರಿಂದ ಮೂಲ ಫಲಾನುಭವಿಗಳಿಗೆ ಭವಿಷ್ಯದಲ್ಲಿ ಅನ್ಯಾಯವಾಗುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಮತ್ತು ಕಮಲಾಪುರಗಳಲ್ಲಿ ಎರಡು ವಿಚಾರ ಸಂಕಿರಣಗಳನ್ನು ಏರ್ಪಡಿಸಿ, ವಾಲ್ಮೀಕಿ ನಾಯಕ ಸಮಾಜದ ಸ್ಪಷ್ಟ ಅಭಿಪ್ರಾಯಗಳನ್ನು ರಾಜ್ಯಕ್ಕೆ ತಿಳಿಸಲು ಸಭೆ ನಿರ್ಧರಿಸಿತು. ಸಮಾಜದ ಅಧ್ಯಕ್ಷ ಗೋಸಲ ಭರಮಪ್ಪ, ಏಳು ಕೇರಿಗಳ ಮುಖಂಡರು ಪಾಲ್ಗೊಂಡಿದ್ದರು.