ಭ್ರಷ್ಟಾಚಾರ ತಡೆದು ದೇಶದ ಪ್ರಗತಿಗೆ ಕೈಜೋಡಿಸಿ

KannadaprabhaNewsNetwork |  
Published : Nov 05, 2025, 02:45 AM IST
ಅಳ್ನಾವರದಲ್ಲಿ ನಡೆದ ಭ್ರಷ್ಟಾಚಾರ ನಿಗ್ರಹ ಜಾಗೃತಿ ಅರಿವು ಕಾರ್ಯಕ್ರಮದಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ಬಸವರಾಜ ಬುದ್ನಿ ಮಾತನಾಡಿದರು. | Kannada Prabha

ಸಾರಾಂಶ

ಜನರನ್ನು ಅನಗತ್ಯವಾಗಿ ಕಚೇರಿಗೆ ಅಲೆಯದಂತೆ ನೋಡಿಕೊಂಡು ಅರ್ಜಿಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ಸಮಸ್ಯೆಗೆ ಪರಿಹಾರ ನೀಡಬೇಕು. ನೌಕರಿ ಜೊತೆ ದೇಶ ಮತ್ತು ಸಮಾಜದ ಏಳಿಗೆಗೆ ಎಲ್ಲರೂ ಸೇರಿ ಒಗ್ಗಟ್ಟಾಗಿ ಶ್ರಮಿಸಬೇಕು.

ಅಳ್ನಾವರ:

ಕಷ್ಟ ಪಟ್ಟು, ಹಲವಾರು ಸ್ಪರ್ಧೆ ಎದುರಿಸಿ ಗಿಟ್ಟಿಸಿಕೊಂಡ ಸರ್ಕಾರಿ ನೌಕರಿಯನ್ನು ಶ್ರದ್ಧೆಯಿಂದ ನಿಭಾಯಿಸಬೇಕು ಎಂದಿರುವ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಬಸವರಾಜ ಬದ್ನಿ, ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತು ಹಾಕಿ ದೇಶದ ಪ್ರಗತಿಗೆ ಶ್ರಮಿಸಬೇಕೆಂದು ಹೇಳಿದರು.

ಇಲ್ಲಿನ ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ ನಡೆದ ಭ್ರಷ್ಟಾಚಾರ ನಿಗ್ರಹ ಜಾಗೃತಿ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ತಡೆದು ದೇಶದ ಉನ್ನತಿಗೆ ಅಧಿಕಾರಿ ವರ್ಗ ಕೈಜೊಡಿಸಬೇಕು ಕರೆ ನೀಡಿದರು.

ಜನರನ್ನು ಅನಗತ್ಯವಾಗಿ ಕಚೇರಿಗೆ ಅಲೆಯದಂತೆ ನೋಡಿಕೊಂಡು ಅರ್ಜಿಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ಸಮಸ್ಯೆಗೆ ಪರಿಹಾರ ನೀಡಬೇಕು. ನೌಕರಿ ಜೊತೆ ದೇಶ ಮತ್ತು ಸಮಾಜದ ಏಳಿಗೆಗೆ ಎಲ್ಲರೂ ಸೇರಿ ಒಗ್ಗಟ್ಟಾಗಿ ಶ್ರಮಿಸಬೇಕು ಎಂದರು.

ವಿಶೇಷ ಉಪನ್ಯಾಸ ನೀಡಿದ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಜೆ. ಕರುಣೇಶಗೌಡ, ಸರ್ಕಾರಿ ಕೆಲಸದಲ್ಲಿ ಶುದ್ಧ ಹಸ್ತ ಹೊಂದಿರಬೇಕು. ಹಣದ ಮೋಹಕ್ಕೆ ಬಲಿಯಾಗಿ ಕಷ್ಟ ಪಡಬಾರದು, ಪ್ರಾಮಾಣಿಕತೆ, ಮಾನಸಿಕ ನೆಮ್ಮದಿ, ಉತ್ತಮ ಆರೋಗ್ಯ ರೂಢಿಸಿಕೊಳ್ಳಲು ಭ್ರಷ್ಟಾಚಾರದಿಂದ ದೂರ ಇರಬೇಕು. ಮುಂದಿನ ಪೀಳಿಗೆಗೆ ಸರಿಯಾದ ಮಾರ್ಗ ತೋರಿಸಬೇಕು. ಜನರ ನಂಬಿಕೆ ಗಟ್ಟಿಗೊಳಿಸಲು ತಮಗೆ ನೀಡಿದ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಬೇಕೆಂದು ತಿಳಿಸಿದರು.

ಪ್ರತಿಜ್ಞಾ ವಿಧಿ ಬೋಧಿಸಿದ ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ, ವೈಯಕ್ತಿಕ ನಡುವಳಿಕೆಯಲ್ಲಿ ನಿಷ್ಠೆ ಪ್ರದರ್ಶಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು. ಲಂಚ ಪಡೆಯುವುದಿಲ್ಲ ಎಂದು ಶಪಥ ಮಾಡಬೇಕು. ಕಾನೂನಿನ ಚೌಕಟ್ಟಿನಲ್ಲಿ ಸಾರ್ವಜನಿಕರ ಕೆಲಸ ಮಾಡಬೇಕು ಎಂದರು.

ತಾಪಂ ಇಒ ಪ್ರಶಾಂತ ತುರ್ಕಾಣಿ, ಪಪಂ ಮುಖ್ಯಾಧಿಕಾರಿ ಪ್ರಕಾಶ ಮಗದಮ್, ಲೋಕೋಪಯೋಗಿ ಇಲಾಖೆಯ ಏಂಜಿನಿಯರ್ ಉತ್ತಮ ಗದಗಕರ, ರಾಘವೇಂದ್ರ ದೊಡ್ಡಮನಿ, ವಲಯ ಅರಣ್ಯಾಧಿಕಾರಿ ಶಕುಂತಲಾ ಬುಗಡಿ, ಪಿಎಸ್‌ಐ ಬಸವರಾಜ ಯದ್ದಲಗುಡ್ಡ, ಪಶು ವೈಧ್ಯಾಧಿಕಾರಿ ಡಾ. ಸುನಿಲ್ ಬನ್ನಿಗೋಳ, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ರವಿಚಂದ್ರ ಪಾಟೀಲ ಹಾಗೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’