ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿದ ಆರೋಗ್ಯ ಸಚಿವ
ಕನ್ನಡಪ್ರಭ ವಾರ್ತೆ ಯಲ್ಲಾಪುರಬಡವರ, ಜನಸಾಮಾನ್ಯರ ಪರವಾಗಿ ಬದ್ಧತೆ ಇದ್ದಾಗ ಮಾತ್ರ ಜನಪರ ಕೆಲಸ ಮಾಡುವುದಕ್ಕೆ ಸಾಧ್ಯ. ಆ ದೃಷ್ಟಿಯಿಂದ ನಮ್ಮ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜನರಿಗೆ ಭರವಸೆ ನೀಡಿದಂತೆ ಉತ್ತಮ ಆಡಳಿತ ನೀಡುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ತಾಲೂಕಿನ ಕಿರವತ್ತಿಯಲ್ಲಿ ₹೯ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ತಲಾ ಎರಡು ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞರು, ಅರವಳಿಕೆ ತಜ್ಞರು, ಒಬ್ಬ ರೇಡಿಯೊಲಜಿಸ್ಟ್ ನೇಮಕಕ್ಕೆ ಸರ್ಕಾರ ನಿರ್ಣಯಿಸಿದೆ. ಸರ್ಕಾರ ಎಲ್ಲಾ ಇಲಾಖೆಗಳಲ್ಲೂ ಅಭಿವೃದ್ಧಿಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸುತ್ತಿದೆ. ಮೂಲ ಸೌಕರ್ಯಗಳಿಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ ಎಂದ ಅವರು, ಗ್ಯಾರಂಟಿ ಅನುಷ್ಠಾನ ಸಾಧ್ಯವಿಲ್ಲ ಎಂದು ಟೀಕಿಸಿದ ವಿರೋಧ ಪಕ್ಷದವರಿಗೆ, ಸಮರ್ಪಕ ಅನುಷ್ಠಾನದ ಮೂಲಕವೇ ಉತ್ತರ ನೀಡಿದ್ದೇವೆ. ಅಲ್ಲದೇ ಅವರೇ ನಮ್ಮ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರುತ್ತಿದ್ದಾರೆ. ಆರ್ಥಿಕ ಬೆಳವಣಿಗೆಯಲ್ಲಿ ದೇಶದಲ್ಲೇ ಉನ್ನತ ಸ್ಥಾನಕ್ಕೆ ಕರ್ನಾಟಕ ಬಂದಿದೆ. ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರಿಗೆ ತಲುಪುತ್ತಿರುವುದರಿಂದ ಜನಸಾಮಾನ್ಯರು ಆರ್ಥಿಕ ಸಬಲರಾಗುತ್ತಿದ್ದಾರೆ. ಹಿಂದೂ ವಿರೋಧಿ ಎಂದು ವಿರೋಧ ಪಕ್ಷದವರು ನಮ್ಮನ್ನು ದೂರುತ್ತಾರೆ. ಗ್ಯಾರಂಟಿ ಯೋಜನೆಗಳು ಯಾವುದೇ ಜಾತಿ, ಧರ್ಮವೆನ್ನದೇ ಎಲ್ಲರನ್ನೂ ತಲುಪುತ್ತಿದೆ ಎಂದರು. ೩೯೦ ಆಶಾಕಿರಣ ಕೇಂದ್ರದ ಮೂಲಕ ಉಚಿತವಾಗಿ ಕಣ್ಣಿನ ತಪಾಸಣೆ, ಕನ್ನಡಕ, ಶಸ್ತ್ರ ಚಿಕಿತ್ಸೆಯಂತಹ ಸೌಲಭ್ಯ ನೀಡಲಾಗುತ್ತಿದೆ. ಆಶಾ ಕಾರ್ಯಕರ್ತರಿಗೆ ₹೧೫೦೦ ಗೌರವಧನ ಹೆಚ್ಚಳಕ್ಕೆ ನಿರ್ಣಯ ಕೈಗೊಳ್ಳಲಾಗಿದೆ ಎಂದ ಅವರು, ಕಿರವತ್ತಿ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ, ಸಲಕರಣೆ ಮಂಜೂರಿ ಮಾಡಲು ಕ್ರಮ ಕೈಗೊಳ್ಳಲಾಗುವುದೆಂದರು.ಶಾಸಕ ಶಿವರಾಮ ಹೆಬ್ಬಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಟ್ಟಡ ಉದ್ಘಾಟನೆಗೆ ತಕ್ಷಣ ಸ್ಪಂದಿಸಿದ ಸಚಿವರು, ಪ್ರೀತಿಯಿಂದ ಬಂದ ಅವರನ್ನು ನಾನು ಅಭಿನಂದಿಸುತ್ತೇನೆ. ಈ ಆಸ್ಪತ್ರೆ ನಿರ್ಮಾಣವಾಗಿರುವುದು ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ. ಸಣ್ಣಪುಟ್ಟ ಚಿಕಿತ್ಸೆಗೆ ಯಲ್ಲಾಪುರ, ಹುಬ್ಬಳ್ಳಿಗೆ ಹೋಗುವ ಅಗತ್ಯವಿಲ್ಲ. ಇಂತಹ ಜನಪರ ಕಾರ್ಯ ಮಾಡಿದಾಗ ಅದನ್ನು ಜನ ನೆನಪಿಟ್ಟುಕೊಳ್ಳಬೇಕು. ಈ ಆಸ್ಪತ್ರೆಗೆ ಅಗತ್ಯವಾದ ಸಿಬ್ಬಂದಿ, ಸಲಕರಣೆಗಳನ್ನು ಕೂಡ ಶೀಘ್ರ ಒದಗಿಸಿದರೆ ಹಿಂದುಳಿದ ವರ್ಗದವರೇ ಹೆಚ್ಚಾಗಿರುವ ಈ ಭಾಗದ ರೋಗಿಗಳಿಗೆ ಅನುಕೂಲವಾಗುತ್ತದೆ ಎಂದರು.ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಸವದತ್ತಿ ಶಾಸಕ ವಿಶ್ವಾಸ ವೈದ್ಯ, ಗ್ರಾಪಂ ಅಧ್ಯಕ್ಷೆ ಸಂಗೀತಾ ಕೊಕರೆ, ತಹಸೀಲ್ದಾರ ಚಂದ್ರಶೇಖರ ಹೊಸ್ಮನಿ, ತಾಪಂ ಇಒ ರಾಜೇಶ ಧನವಾಡಕರ್, ವಿಭಾಗೀಯ ಜಂಟಿ ನಿರ್ದೇಶಕಿ ಡಾ. ಪುಷ್ಪಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್ಟ, ಜಿಪಂ ಮಾಜಿ ಸದಸ್ಯ ವಿಜಯ ಮಿರಾಶಿ ಇತರರಿದ್ದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಬಿ.ಎನ್. ನೀರಜ ಸ್ವಾಗತಿಸಿದರು. ಶಿಕ್ಷಕ ಸುಧಾಕರ ನಾಯಕ ನಿರ್ವಹಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ವಂದಿಸಿದರು.