ಶಿಕ್ಷಣದಿಂದ ಮಾತ್ರ ಜಗತ್ತಿನ ಸವಾಲುಗಳ ಎದುರಿಸಲು ಸಾಧ್ಯ-ಕೆ.ಎಸ್‌. ಈಶ್ವರಪ್ಪ

KannadaprabhaNewsNetwork | Published : Jan 14, 2025 1:01 AM

ಸಾರಾಂಶ

ಶಿಕ್ಷಣವು ಜ್ಞಾನದ ಹೆಬ್ಬಾಗಿಲು, ಇದರಲ್ಲಿ ನಮ್ಮೆಲ್ಲರ ಆಕಾಂಕ್ಷೆಗಳನ್ನು ಸಬಲಗೊಳಿಸುವ ಹಾಗೂ ಪರಿವರ್ತನೆಗೊಳಿಸುವ ಶಕ್ತಿಯಿದೆ. ಹೀಗಾಗಿ ಪ್ರತಿಯೊಂದು ಕುಟುಂಬ ಶಿಕ್ಷಣವನ್ನೇ ಸಾಮಾಜಿಕ ಭದ್ರತೆಯನ್ನಾಗಿ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ನೈಜ ಜಗತ್ತಿನ ಸವಾಲುಗಳನ್ನು ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯ ಬರಲಿವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅಭಿಪ್ರಾಯ ವಕ್ತಪಡಿಸಿದರು.

ಬ್ಯಾಡಗಿ: ಶಿಕ್ಷಣವು ಜ್ಞಾನದ ಹೆಬ್ಬಾಗಿಲು, ಇದರಲ್ಲಿ ನಮ್ಮೆಲ್ಲರ ಆಕಾಂಕ್ಷೆಗಳನ್ನು ಸಬಲಗೊಳಿಸುವ ಹಾಗೂ ಪರಿವರ್ತನೆಗೊಳಿಸುವ ಶಕ್ತಿಯಿದೆ. ಹೀಗಾಗಿ ಪ್ರತಿಯೊಂದು ಕುಟುಂಬ ಶಿಕ್ಷಣವನ್ನೇ ಸಾಮಾಜಿಕ ಭದ್ರತೆಯನ್ನಾಗಿ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ನೈಜ ಜಗತ್ತಿನ ಸವಾಲುಗಳನ್ನು ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯ ಬರಲಿವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅಭಿಪ್ರಾಯ ವಕ್ತಪಡಿಸಿದರು.

ಮೋಟೆಬೆನ್ನೂರಿನ ಪೇಸ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರಸಕ್ತ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒಬ್ಬ ವ್ಯಕ್ತಿ ಮತ್ತು ಆತನ ಕುಟುಂಬ ಮತ್ತು ಸಮಾಜಕ್ಕೆ ಶಿಕ್ಷಣ ಮುಖ್ಯವಾಗಿದೆ. ಇದರಿಂದ ಸುಶಿಕ್ಷಿತ ವ್ಯಕ್ತಿಯು ತನ್ನ ಕುಟುಂಬ ಮತ್ತು ಸಮಾಜದ ಆರ್ಥಿಕ ಬೆಳವಣಿಗೆ ಬಗ್ಗೆ ಚಿಂತನೆಗಳನ್ನು ನಡೆಸಲು ಸಾಧ್ಯ. ಕೌಶಲ್ಯಗಳ ಅಭಿವೃದ್ಧಿ ಸೇರಿದಂತೆ ನಮ್ಮನ್ನು ಜ್ಞಾನವುಳ್ಳವರನ್ನಾಗಿ ಮಾಡುತ್ತದೆಯಲ್ಲದೇ ನಮ್ಮ ಯಶಸ್ವಿ ಜೀವನಕ್ಕೆ ದಾರಿ ಮಾಡಿಕೊಡಲಿದೆ ಎಂದರು.

ಶಿಕ್ಷಣ ಬದುಕಿನ ವಿಮರ್ಶೆ ಮಾಡಲಿದೆ: ಸಂಸ್ಥೆಯ ನಿರ್ದೇಶಕ ಕೆ.ಇ. ಕಾಂತೇಶ ಮಾತನಾಡಿ, ಬಡತನದ ವಿರುದ್ಧದ ಹೋರಾಟದಲ್ಲಿ ಶಿಕ್ಷಣವು ಒಂದು ಪ್ರಮುಖ ಸಾಧನವಾಗಿದೆ. ಶಿಕ್ಷಣದಿಂದ ಜ್ಞಾನದ ಸಂಗ್ರಹವಾಗಲಿದ್ದು, ಸಂಕೀರ್ಣ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು, ತಿಳುವಳಿಕೆಯುಳ್ಳ ನಿರ್ಧಾರ ತೆಗೆದುಕೊಳ್ಳಲು ಮತ್ತು ಅರ್ಥಪೂರ್ಣ ಚರ್ಚೆಗಳಿಗೆ ಉತ್ತಮ ಅಡಿಪಾಯವಾಗಿದ್ದು, ಸುತ್ತಲಿನ ಪ್ರಪಂಚವನ್ನು ವಿಶ್ಲೇಷಣೆ ಹಾಗೂ ವಿಮರ್ಶಾತ್ಮಕವಾಗಿ ಯೋಚಿಸಲು ಮತ್ತು ಅದಕ್ಕೆ ತಕ್ಕಂತೆ ಸಿದ್ಧತೆಯಾಗಲು ಅವಕಾಶಗಳನ್ನು ಒದಗಿಸಲಿದ ಎಂದರು.

ವಿದ್ಯಾವಂತ ದೇಶಗಳು ಸುಭಿಕ್ಷವಾಗಿವೆ: ಕಾರ್ಯಕ್ರಮ ಉದ್ಘಾಟಿಸಿದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶಪ್ಪ ಮಾತನಾಡಿ, ಒಂದು ದೇಶ ನಿರ್ದಿಷ್ಟವಾದ ಸುಶಿಕ್ಷಿತ ಜನಸಂಖ್ಯೆಯನ್ನು ಹೊಂದಿರಬೇಕು, ಇದರಿಂದ ಜನರು ಮಾಹಿತಿಯುಕ್ತರಾಗಿ ನಾಗರಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಶಿಕ್ಷಣವಂತ ನಾಗರಿಕರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಸರೆಯಾಗಿ ನಿಲ್ಲುವುದಷ್ಟೇ ಅಲ್ಲ ಎದುರಾಗುವ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಲು ಶಕ್ತಿಯಾಗಿ ನಿಲ್ಲಬಲ್ಲರು, ಸ್ವಿಟ್ಜರ್ಲೆಂಡ್, ಸ್ವೀಡನ್, ಫಿನ್ಲ್ಯಾಂಡ್, ನಾರ್ವೆ, ನೆದರ್ಲ್ಯಾಂಡ್ಸ್ ಮುಂತಾದ ದೇಶಗಳು ಅತೀ ಹೆಚ್ಚು ವಿದ್ಯಾವಂತ ಜನರನ್ನು ಹೊಂದಿದ್ದು, ಅದಕ್ಕಾಗಿಯೇ ಈ ದೇಶಗಳು ಸಾಕ್ಷರತೆ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕ ಪಟ್ಟಿಯಲ್ಲಿ ಇಂದಿಗೂ ಅಗ್ರಸ್ಥಾನದಲ್ಲಿವೆ ಎಂದರು.

ವಿಜ್ಞಾನ ಶಿಕ್ಷಣ ಅವಶ್ಯ: ಪ್ರಾಚಾರ್ಯ ಮಂಜುನಾಥ ಅಡೇಮನೆ ಮಾತನಾಡಿ, ಇಂದು, ನಾವು ವೈಜ್ಞಾನಿಕವಾಗಿ ಮುಂದುವರಿದ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ, ಅದರಲ್ಲೂ ಕಂಪ್ಯೂಟರ್‌ ಜ್ಞಾನವಿಲ್ಲದಿದ್ದರೇ ನಮ್ಮನ್ನೂ ಸಹ ಅನಕ್ಷರಂತೆ ಕಾಣುವಂತಹ ವ್ಯವಸ್ಥೆಯಲ್ಲಿದ್ದೇವೆ. ಹೀಗಾಗಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಅನಿವಾರ್ಯವಾಗಿ ಇದಕ್ಕೆ ಹೊಂದಿಕೊಂಡು ನಾವೆಲ್ಲರೂ ಬದುಕಬೇಕಾಗಿದೆ ಎಂದರು.

ವೇದಿಕೆಯಲ್ಲಿ ಪ್ರೊ.ಬಿ.ಎನ್. ವಿಶ್ವನಾಥಯ್ಯ ಸೇರಿದಂತೆ ಕಾಲೇಜು ಉಪನ್ಯಾಸಕ ಸಿಬ್ಬಂದಿ ಉಪಸ್ಥಿತರಿದ್ದರು. ಇಂದುಮತಿ ಸ್ವಾಗತಿಸಿದರು. ಸಾದಿಯಾ ನಿರೂಪಿಸಿದರು. ವಾತ್ಯಲ್ಯ ವಂದಿಸಿದರು.

Share this article