ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪ್ರತಿಯೊಬ್ಬರು ರಾಷ್ಟ್ರಪ್ರೇಮವನ್ನು ಬೆಳೆಸಿಕೊಂಡು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹೇಳಿದರು.ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
1947ರಲ್ಲಿ ಜಗತ್ತು ಬೆರಗುಗೊಳ್ಳುವ ಪ್ರಜಾಪ್ರಭುತ್ವ ರಾಷ್ಟ್ರವಾಗಿ ರೂಪಗೊಂಡಿರುವ ಸ್ವತಂತ್ರ್ಯ ಭಾರತ ಅನಾವರಣಗೊಂಡ ಅವಿಸ್ಮರಣೀಯ ದಿನವಾಗಿದೆ. ಈ ದಿನ ಸರ್ವ ಸ್ವತಂತ್ರವಾಗಬೇಕೆಂದು ಸಂಕಲ್ಪ ಮಾಡಿ ಅನೇಕ ಹೋರಾಟವನ್ನು ಮಾಡಿ ಜೀವನವನ್ನೇ ಮುಡಿಪಾಗಿಟ್ಟ ಮಹನೀಯರ ಅವಿರತ ಪರಿಶ್ರಮದಿಂದಾಗಿ ನಾವಿಂದು ಸ್ವಾತಂತ್ರ್ಯದ ಫಲವನ್ನು ಅನುಭವಿಸಿತ್ತಿದ್ದೇವೆ ಎಂದರು.ಜಿಲ್ಲೆಯಲ್ಲೂ ಅನೇಕ ಮಹಾನಿಯರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜಿಲ್ಲೆಗೆ ಗೌರವ ತಂದಿದ್ದಾರೆ. ಅವರುಗಳಿಗೆ ನಮನಗಳನ್ನು ಸಲ್ಲಿಸೋಣ. ಸ್ವಾತಂತ್ರ್ಯವನ್ನು ಉಳಿಸಿಕೊಂಡು ಜೋಪಾನ ಮಾಡುವುದು ಭಾರತೀಯರಾದ ನಮ್ಮೇಲ್ಲರ ಆದ್ಯ ಕರ್ತವನ್ಯವಾಗಿದೆ ಎಂದರು.
ದೇಶದ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸರ್ಕಾರ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಹಾಗೆಯೇ ಗಡಿಜಿಲ್ಲೆ ಚಾಮರಾಜನಗರ ಸರ್ವತೋಮುಖ ಅಭಿವೃದ್ಧಿಗೂ ಸಹ ಮುಂದಾಗಿದೆ ಎಂದರು.ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಂತೂ ಜನರಿಗೆ ಅತ್ಯಂತ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿದೆ. ಜಿಲ್ಲೆಯಲ್ಲಿ 2,78,080 ಫಲಾನುಭವಿಗಳಿಗೆ ಗೃಹ ಲಕ್ಷ್ಮಿ ಯೋಜನೆಯಿಂದ, 2,73,190 ಫಲಾನುಭವಿಗಳಿಗೆ ಗೃಹ ಜ್ಯೋತಿ ಯೋಜನೆಯಿಂದ, 8,65,861 ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಿಂದ, 10,28,41,088 ಮಹಿಳೆಯರು ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಿ ಶಕ್ತಿ ಯೋಜನೆಯಿಂದ 3,558 ನಿರುದ್ಯೋಗಿಗಳು ಯುವನಿಧಿ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ ಎಂದರು.
ಜಿಲ್ಲೆಯ ಸಂತೇಮರಹಳ್ಳಿ, ಮಲಿಯೂರು, ಕೊತ್ತಲವಾಡಿ, ಹೊನ್ನಗೌಡನಹಳ್ಳಿ, ತೆರಕಣಾಂಬಿ, ಕಬ್ಬಳ್ಳಿ, ರಾಮಾಪುರ, ಮಲೈಮಹದೇಶ್ವರ ಬೆಟ್ಟ, ಯಳಂದೂರು, ಮಳವಳ್ಳಿ, ಕೊಡಸೋಗೆ, ಕಾಮಗೆರೆ ಮತ್ತು ಆಲೂರು ಗ್ರಾಮಗಳಲ್ಲಿ ಪಶುವೈದ್ಯ ಸಂಸ್ಥೆಗಳಿಗೆ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದರು.ಕೊಳ್ಳೇಗಾಲ ಪಶು ಆಸ್ಪತ್ರೆಯನ್ನು ಪಾಲಿಕ್ಲಿನಿಕ್ ಆಗಿ ಮೇಲ್ದರ್ಜೆಗೇರಿಸಲಾಗಿದ್ದು, ಸೋಮಹಳ್ಳಿ, ಗೂಳಿಪುರ, ಗೌಡಹಳ್ಳಿ, ಪಾಳ್ಯ, ಕೊಡಸೋಗೆ, ಕುದೇರು ಗ್ರಾಮಗಳಲ್ಲಿ ಹೊಸದಾಗಿ ಪಶುವೈದ್ಯ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 69 ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ವಿಭಾಗಗಳನ್ನು ತೆರೆಯಲು ಮಂಜೂರಾತಿ ನೀಡಲಾಗಿದೆ. ಪ್ರಾಥಮಿಕ ಸಾಲೆಗಳಿಗೆ 583 ಪ್ರೌಢಶಾಲೆಗಳಿಗೆ 188 ಅತಿಥಿ ಸಿಕ್ಷಕರನ್ನು ನೇಮಕ ಮಾಡಲಾಗಿದೆ. ಕೊಳ್ಳೇಗಾಲ ವಿಧಾನಸಭೆ ಕ್ಷೇತ್ರಕ್ಕೆ ಹೊಸದಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರಾಗಿದ್ದು, ಕೊಳ್ಳೇಗಾಲ ಪಟ್ಟಣದಲ್ಲಿ 6ನೇ ತರಗತಿ ಪ್ರಾರಂಭವಾಗಿದೆ ಎಂದರು.ಜೆಜೆಎಂ ಯೋಜನೆಯಡಿ 865 ಜನವಸತಿಗಳಲ್ಲಿ 1021 ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. 8 ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಪೈಕಿ 4 ಪೂರ್ಣಗೊಂಡಿದ್ದು, 4 ಯೋಜನೆಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ ಎಂದರು.
ರಾಷ್ಟ್ರದ ಏಕತೆ, ಅಖಂಡತೆಯ ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದ್ದು, ದೇಶದ ಸಮಗ್ರ ಅಭಿವೃದ್ಧಿಗೆ ನಾವೆಲ್ಲರೂ ಕಂಕಣ ಬದ್ದರಾಗಿ ದುಡಿಯೋಣ, ಬಲಿಷ್ಠ ಸಮಾಜ ನಿರ್ಮಾಣಕ್ಕಾಗಿ ಮುಂದಾಗೋಣ ಎಂದರು.ಕಾರ್ಯಕ್ರಮದಲ್ಲಿ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಟರ್, ನಗರಸಭಾ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಮಮತಾ, ಸದಸ್ಯೆ ಲೋಕೇಶ್ವರಿ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಪಂ ಸಿಇಒ ಮೋನಾ ರೋತ್, ಎಸ್ಪಿ ಡಾ.ಬಿ.ಟಿ.ಕವಿತಾ, ಎಡಿಸಿ ಜವರೇಗೌಡ ಇತರರು ಭಾಗವಹಿಸಿದ್ದರು.