- ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಶಿಕ್ಷಕರಿಗೆ 3 ದಿನಗಳ ತರಬೇತಿ ಹಾಗೂ ಮಾಹಿತಿ ಕಾರ್ಯಕ್ರಮ ಉದ್ಘಾಟನೆ
ಪ್ರತಿಯೊಂದು ಮಗುವಿನ ಪಾಲನೆ, ಪೋಷಣೆ ಹಾಗೂ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಪೊಲೀಸ್ ಠಾಣಾಧಿಕಾರಿ ಬಿ.ಎಸ್.ನಿರಂಜನ್‌ಗೌಡ ಹೇಳಿದರು.
ಮಂಗಳವಾರ ಬಿಇಒ ಕಛೇರಿ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳ ಲೈಂಗಿಕ ಶೋಷಣೆ ತಡೆ ಕಾಯ್ದೆ, ಶಾಲೆಗಳಲ್ಲಿ ದೈಹಿಕ ಶಿಕ್ಷೆ ನಿಷೇಧ ಮತ್ತು ನಿರ್ಮೂಲನೆ, ಮೌಲ್ಯ ಶಿಕ್ಷಣ, ಜ್ಞಾನ ಸೇತು ವಿಚಾರ ಬಗ್ಗೆ ಶಿಕ್ಷಕರಿಗೆ ಮೂರು ದಿನಗಳ ತರಬೇತಿ ಮತ್ತು ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮಕ್ಕಳು ಈ ದೇಶದ ಸಂಪತ್ತು. ಮಕ್ಕಳು ಈ ದೇಶದ ಅಮೂಲ್ಯವಾದ ಆಸ್ತಿಯಾಗಿದ್ದಾರೆ. ಎಲ್ಲಾ ಮಕ್ಕಳಿಗೂ ಶಿಕ್ಷಣ, ಭದ್ರತೆ, ಸಾಮಾಜಿಕ ನ್ಯಾಯ ಹಾಗೂ ಆರೋಗ್ಯ ಒದಗಿಸಲು ಮಕ್ಕಳ ರಕ್ಷಣಾ ನೀತಿಯನ್ನು ಜಾರಿಗೆ ತರಲಾಗಿದೆ.ಪೋಕ್ಸೋ ಕಾಯ್ದೆ-2012 ಮಕ್ಕಳ ಲೈಂಗಿಕ ದೌರ್ಜನ್ಯ ತಡೆಯಲು ಮಹತ್ವದ ಕಾಯ್ದೆಯಾಗಿದೆ. ಮಕ್ಕಳನ್ನು ಯಾರಾದರೂ ಲೈಂಗಿಕವಾಗಿ ದೌರ್ಜನ್ಯ ಮಾಡಿದರೆ ಅಂತಹವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು. ಶಾಲಾ ಸುರಕ್ಷತಾ ನೀತಿ ಎಲ್ಲಾ ಶಿಕ್ಷಣ ಸಂಸ್ಥೆಯವರು ಅನುಸರಿಸಬೇಕು. 18 ವರ್ಷದೊಳಗಿನ ಎಲ್ಲಾ ಮಕ್ಕಳ ಮಾನಸಿಕ ಹಾಗೂ ದೈಹಿಕ ವಿಕಾಸ, ಒತ್ತಡಗಳು, ಸುತ್ತಮುತ್ತಲಿನ ಹಲವಾರು ಬೆಳವಣಿಗೆಗಳು, ಬೇಡಿಕೆಗಳು ಸಾಮಾನ್ಯವಾಗಿರುತ್ತವೆ. ಆದ್ದರಿಂದ ಪೋಷಕರು ಹಾಗೂ ವಿದ್ಯೆ ಕಲಿಸುವ ಶಾಲೆ ಶಿಕ್ಷಕರುಗಳು ಮಕ್ಕಳನ್ನು ಸ್ನೇಹಿತರಂತೆ ನೋಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಮಾತನಾಡಿ, ಶಾಲಾ ಶಿಕ್ಷಣ ಇಲಾಖೆ ತರಬೇತಿಗಳು ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷಣ ಹೆಚ್ಚಿಸುವಲ್ಲಿ ಶಿಕ್ಷಕರಿಗೆ ಬಾಹ್ಯ ಬೆಂಬಲ ನೀಡುತ್ತವೆ. ಶಾಲೆಗಳಲ್ಲಿ ಇಂತಹ ಮಾಹಿತಿ, ಅರಿವು, ಜಾಗೃತಿ ಕಾರ್ಯಕ್ರಮ ಆಯೋಜಿಸುವುದರಿಂದ ಮಕ್ಕಳ ಲೈಂಗಿಕ ದೌರ್ಜನ್ಯ, ಶೋಷಣೆಗಳನ್ನು ತಡೆಗಟ್ಟ ಬಹುದಾಗಿದೆ. ಮಕ್ಕಳು ಏನೇ ಸಮಸ್ಯೆ ಇದ್ದರೂ ಕೂಡ ಶಿಕ್ಷಕರ ಬಳಿ, ಪೋಷಕರ ಬಳಿ ಮುಕ್ತವಾಗಿ ಹೇಳಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಕ್ಷೇತ್ರ ಸಮನ್ವಯಾಧಿಕಾರಿ ಸೇವ್ಯಾನಾಯ್ಕ್ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಮಾರ್ಗದರ್ಶನ ನೀಡಲು ಅಗತ್ಯವಾಗಿದ್ದಾರೆ. ಮಕ್ಕಳು ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ಕಾನೂನಿನ ಬಗ್ಗೆ ಅರಿವು ಹೊಂದಬೇಕು. ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲೂ ಹೆಚ್ಚು ಆಸಕ್ತಿ ಹೊಂದಬೇಕು ಎಂದರು
ಸಹ ಶಿಕ್ಷಕಿ ಪ್ರಕೃತಿ ಪ್ರಾರ್ಥಿಸಿದರು. ಸಿ.ಆರ್.ಪಿ. ಎಸ್.ಗಿರೀಶ್‌ನಾಯ್ಕ್ ಸ್ವಾಗತಿಸಿದರು. ಬಿ.ಐ.ಈ.ಆರ್.ಟಿ.ತಿಮ್ಮೇಶ್ ಕಾರ್ಯಕ್ರಮ ನಿರೂಪಿಸಿದರು.ಸಿ.ಆರ್.ಪಿ.ಮಂಜುಶ್ರೀ ವಂದಿಸಿದರು. 3 ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬಿ.ಆರ್.ಪಿ ಸಂದೀಪ್ ಹಾಗೂ ಸಿ.ಆರ್.ಪಿ ಗಳಾದ ದೇವರಾಜ್, ಅನಂತಪ್ಪ,ರಾಮಾನಾಯ್ಕ,ಶಿವಣ್ಣನಾಯ್ಕ, ತಿಮ್ಮೇಶ್ ತರಬೇತಿ ನೀಡಲಿದ್ದಾರೆ.