ಕನ್ನಡಪ್ರಭ ವಾರ್ತೆ ಮೈಸೂರು
ನಗರದ ವಿದ್ಯಾರಣ್ಯಪುರಂನ ಮಿಲ್ಕ್ ಸೆಂಟರ್ ರಸ್ತೆಯಲ್ಲಿ ಕನ್ನಡ ಗೆಳೆಯರ ಬಳಗವು ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದವಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡಿಗರಾಗಿ ಈ ಭೂಮಿಯಲ್ಲಿ ನಾವು ಹುಟ್ಟಿರುವುದೇ ನಮ್ಮ ಅದೃಷ್ಟ. ಅಪರಿಮಿತ ಸಂಪತ್ತನ್ನು ಒಳಗೊಂಡಿರುವ ನೆಲ ಕರುನಾಡು ಎಂದರು.
ರಾಜ್ಯೋತ್ಸವ ಕರ್ನಾಟಕ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಲ್ಲಿ, ವಿದೇಶದ ನೆಲದಲ್ಲಿಯೂ ಕನ್ನಡಿಗರು ಒಂದೆಡೆ ಆಚರಿಸುವ ಹಬ್ಬ. ನೂರಾರು ಜಾತಿ, ಹಲವಾರು ಧರ್ಮದ ಜನರಿದ್ದರೂ ನಾಡು ನುಡಿಯ ಬಗ್ಗೆ ಅಪಾರ ಗೌರವ ಪ್ರೀತಿಯನ್ನು ಇರಿಸಿಕೊಂಡು ಜಾತಿ ಮತಗಳ ಮೀರಿ ಆಚರಿಸುವ ಧೀಮಂತ ಶಕ್ತಿ ಕನ್ನಡಿಗರಿಗಿದೆ. ಕನ್ನಡವನ್ನು ನಾವು ಕೇವಲ ಭಾಷೆಯಾಗಿ ಮಾತ್ರ ಕಾಣದೆ ನಮ್ಮ ಅಸ್ಮಿತೆ, ಉಸಿರಾಗಿಸಿಕೊಳ್ಳಬೇಕಿದೆ ಎಂದು ಅವರು ಹೇಳಿದರು.ಆಧುನಿಕತೆ, ತಂತ್ರಜ್ಞಾನ, ವೈಜ್ಞಾನಿಕ ನಾಗಾಲೋಟದ ಕಾರಣಕ್ಕಾಗಿ ಇಂಗ್ಲಿಷಿನ ವ್ಯಾಮೋಹಕ್ಕೆ ಬಲಿಯಾಗಿ ಕನ್ನಡವನ್ನು ಮರೆಯಬಾರದು. ಬೇರೆ ರಾಜ್ಯದ, ದೇಶದ ಜನರು ತಮ್ಮ ಜೀವನಕ್ಕಾಗಿ ಕರ್ನಾಟಕದಲ್ಲಿ ಬಂದು ನೆಲೆಯೂರಿದ್ದಾರೆ. ಅವರೆಲ್ಲರಿಗೂ ನಮ್ಮ ಜನ ವಸತಿ, ಉದ್ಯೋಗ, ರಕ್ಷಣೆ ಎಲ್ಲವನ್ನೂ ಕೊಟ್ಟು ನಮ್ಮವರೇ ಎಂಬ ಮಾನವೀಯತೆಯಿಂದ ಸಮಾನತೆಯ ಭಾವವನ್ನು ಬೆಸೆದಿದ್ದಾರೆ. ಆದರೂ ಪರಭಾಷಿಗರು ಅದನ್ನೆ ಅಸ್ತ್ರವಾಗಿ ತೆಗೆದುಕೊಂಡು ಕನ್ನಡಿಗರು ಸೂಕ್ಷ್ಮ ಸಂವೇದನೆವುಳ್ಳ ಹೃದಯವಂತರು ಎಂಬುದನ್ನು ಅರಿತು ಬೇರೆ ಭಾಷೆಯಲ್ಲಿ ವ್ಯವಹರಿಸಿ ಕನ್ನಡತನಕ್ಕೆ ಕಪ್ಪುಚುಕ್ಕೆ ತಂದರೆ ಕನ್ನಡಿಗರು ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.
ಕನ್ನಡ ನೆಲ ಜಲದ ವಿಷಯ ಬಂದಾಗ ಬಡವ ಶ್ರೀಮಂತ, ಜಾತಿ, ಧರ್ಮ ಎಲ್ಲವನ್ನೂ ಬಿಟ್ಟು ಕೇವಲ ನಾವೆಲ್ಲರೂ ಕನ್ನಡಿಗರು ಎಂಬ ಒಗ್ಗಟ್ಟಿನ ಭಾವದಿಂದ ಹೋರಾಟಕ್ಕೆ ಧುಮುಕಬೇಕು. ಆ ಮೂಲಕ ಭಾಷೆಯ ಬಗ್ಗೆ ಗೌರವ ನಿರೂಪಿಸಬೇಕು. ಇಲ್ಲವಾದಲ್ಲಿ ಹೆತ್ತ ತಾಯಿಗೆ ದ್ರೋಹ ಬಗೆದಷ್ಟೇ ಅಪರಾಧವಾಗುತ್ತದೆ. ಅಷ್ಟೇ ಅಲ್ಲದೆ ಕನ್ನಡ ಕೇವಲ ಭಾಷೆ ಮಾತ್ರವಲ್ಲ ಅದು ಕನ್ನಡಿಗರ ಭಾವನೆ ಎಂಬುದನ್ನು ನಾವೆಲ್ಲರೂ ಮರೆಯಬಾರದು ಎಂದರು.
ಬದುಕಿನಲ್ಲಿ ಸಂಸ್ಕಾರ, ಭರವಸೆ ತುಂಬುವ ಭಾಷೆ ಕನ್ನಡ
ಕನ್ನಡತನ ಬದುಕಿಗೆ ಸಂಸ್ಕಾರವನ್ನು ನೀಡುವುದರೊಂದಿಗೆ ವಿದ್ಯಾರ್ಥಿಗಳಿಗೆ ಭರವಸೆಯನ್ನೂ ಕಲಿಸುತ್ತದೆ ಎಂದು ಸಾಹಿತಿ ದೇವರಾಜು ಪಿ. ಚಿಕ್ಕಹಳ್ಳಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ಮಾತನಾಡಿ, ವೈದ್ಯಕೀಯ ವಿಷಯಗಳನ್ನು ಕೂಡ ಕನ್ನಡದಲ್ಲಿ ತಾವು ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿಗಳು ಅದನ್ನು ಆಸ್ವಾದಿಸುತ್ತಿದ್ದರು. ತಾವು ರಚಿಸಿರುವ ಕನ್ನಡ ವೈದ್ಯಕೀಯ ನಿಘಂಟು ಕನ್ನಡದಲ್ಲಿ ವೈದ್ಯಕೀಯ ವಿಷಯಗಳನ್ನು ಅರಿಯಲು ಸಹಕಾರಿಯಾಗಿದೆ ಎಂದರು.