ರಾಮನಗರ: ಕರ್ನಾಟಕ ಏಕೀಕರಣದ ಹೋರಾಟಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಇತಿಹಾಸ ಮಂಡಳಿ, ಕರ್ನಾಟಕ ಸೇವಾ ದಳ ನಿರ್ಣಾಯಕ ಪಾತ್ರ ವಹಿಸಿದವು. ಈ ಸಂಘ ಸಂಸ್ಥೆಗಳ ನೇತಾರರಾಗಿ ಉಳವಿ ವಿ.ಪಿ. ಮಾದವರಾಯರು, ಡೆಪ್ಯೂಟಿ ಚನ್ನಬಸಪ್ಪ, ಹುಯಿಲಗೋಳ ನಾರಾಯಣ ರಾವ್, ಅನಕೃ, ಪಾಟೀಲ ಪುಟ್ಟಪ್ಪ ಸೇರಿದಂತೆ ಹಲ ಮಹನೀಯರು ಹಾಗೂ ಅಸಂಖ್ಯಾತ ಸಾಹಿತಿಗಳು, ಲೇಖಕರು, ಸಂಘ ಸಂಸ್ಥೆಗಳು ಕರ್ನಾಟಕ ಏಕೀಕರಣಕ್ಕೆ ಕಾರಣರಾದರು. ಅವರೆಲ್ಲರನ್ನು ಇಂದು ಸ್ಮರಿಸುವುದು ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, 1950ರಲ್ಲಿ ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರಚನೆಗೊಂಡವು. ಈಗಿನ ಕರ್ನಾಟಕವು ಮೊದಲು ಮೈಸೂರು ರಾಜ್ಯವಾಗಿತ್ತು. 1956ರ ನವೆಂಬರ್ 1 ಕ್ಕೂ ಮೊದಲು ಮೈಸೂರು ಸಂಸ್ಥಾನ, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮದ್ರಾಸ್ ಕರ್ನಾಟಕ ಹಾಗೂ ಇತರೆ ಸಣ್ಣ ಪುಟ್ಟ ಸಂಸ್ಥಾನಗಳಾಗಿ ಹರಿದು ಹಂಚಿಹೋಗಿತ್ತು. ನಂತರ ಕನ್ನಡನಾಡು ಮೈಸೂರು ರಾಜ್ಯವಾಗಿ ಏಕೀಕೃತವಾಯಿತು. ಈ ಮೈಸೂರು ರಾಜ್ಯಕ್ಕೆ ನವೆಂಬರ್ 1, 1973 ರಂದು "ಕರ್ನಾಟಕ " ರಾಜ್ಯ ಎಂದು ಮರು ನಾಮಕರಣ ಮಾಡಲಾಯಿತು ಎಂದರು.ಮೈಸೂರಿನ ಒಡೆಯರು ಸೇರಿದಂತೆ ಹತ್ತಾರು ರಾಜಮನೆತನಗಳು, ನಾಡಿನ ಸಾಂಸ್ಕೃತಿಕ ರಾಯಭಾರಿ ಜಗಜ್ಯೋತಿ ಬಸವಣ್ಣನವರಂತಹ ಶರಣರು, ಪುರಂದರದಾಸರು, ಕನಕದಾಸರು ದಾಸರಂತಹ ದಾಸಶ್ರೇಷ್ಠರು, ವಿಚಾರವಾದಿಗಳು ನಾಡಿನಲ್ಲಿ ಹುಟ್ಟಿ, ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತವನ್ನು ಶ್ರೀಮಂತಗೊಳಿಸಿರುವುದು ಹೆಮ್ಮೆಯ ಸಂಗತಿ. ಆದಿಕವಿ ಪಂಪ, ರನ್ನ, ಕುಮಾರವ್ಯಾಸ, ಅಮೋಘ ವರ್ಷ ನೃಪತುಂಗ, ಹರಿಹರ ರಾಘವಾಂಕ ಸೇರಿದಂತೆ ಬಿ.ಎಂ.ಶ್ರೀ, ಕುವೆಂಪು, ಶಿವರಾಮಕಾರಂತ, ಮಾಸ್ತಿ ವೆಂಕಟೇಶ ಐಯ್ಯಂಗಾರ್‌ರಂತಹ ಅಸಂಖ್ಯಾತ ಕವಿಗಳು ಕನ್ನಡ ಭಾಷೆಯ ಶಕ್ತಿ, ಸೊಬಗು, ಶ್ರೀಮಂತಿಕೆಯನ್ನು ತಮ್ಮ ಕಾವ್ಯ-ಕೃತಿಗಳ ಮೂಲಕ ಪ್ರಕಟಿಸಿದ್ದಾರೆ ಎಂದು ತಿಳಿಸಿದರು.
“ಕನ್ನಡ” ನಮ್ಮ ಮಾತೃಭಾಷೆ, ಅದು ನಮ್ಮ ಜೀವದ ಭಾಷೆ ಹಾಗಾಗಿ ಅದನ್ನು ಸ್ಪಷ್ಟವಾಗಿ ಬಳಸುವ ಮೂಲಕ ಇಲ್ಲಿನ ಸಾಹಿತ್ಯ-ಸಂಸ್ಕೃತಿ, ಆಚಾರ-ವಿಚಾರ, ಸಂಸ್ಕಾರ-ಸಂಪ್ರದಾಯ, ಘನತೆ-ಗಾಂಭೀರ್ಯಗಳನ್ನು ಗೌರವಿಸುವ ಮೂಲಕ ಸಮಾಜದ ಮುಖ್ಯವಾಹಿನಿಯ ಬಾಂಧವ್ಯಕ್ಕೆ ಪ್ರತಿಸ್ಪಂದಿಸುತ್ತ ಜೀವಂತವಾಗಿರಿಸೋಣ. ಕನ್ನಡ ತಾಯ್ನುಡಿಯನ್ನೇ ಬಳಸೋಣ ಮತ್ತು ಬೆಳೆಸೋಣ ಇದೇ ನಿಜವಾದ ಭಾಷಾಭಿಮಾನ ಎಂದರು.ಭಾರತದ ಅಭಿವೃದ್ಧಿ ನಕ್ಷೆಯಲ್ಲಿ ಕರ್ನಾಟಕ ಮುಂಚೂಣಿ ರಾಜ್ಯ. ಮಾಹಿತಿ ತಂತ್ರಜ್ಞಾನ, ಶೈಕ್ಷಣಿಕವಾಗಿ ಬೆಳೆಯುತ್ತಿರುವ ನಾಡು ನಮ್ಮದು. ವಿಜ್ಞಾನಿಗಳ ಕರ್ಮಭೂಮಿ ಕರ್ನಾಟಕ. ನಮ್ಮ ನಾಡಿನ ವೈಜ್ಞಾನಿಕ ಸಂಸ್ಥೆಗಳಿಗೆ ವಿಶ್ವಮಾನ್ಯತೆ ಇದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಶ್ರೀಮಂತ ಭಾಷೆ ನಮ್ಮದು ಎಂದು ಹೇಳಿದರು.
ಸುಮಾರು ಎರಡು ಸಾವಿರ ವರ್ಷಗಳ ಹೆಚ್ಚಿನ ಸಾಂಸ್ಕೃತಿಕ ಇತಿಹಾಸವುಳ್ಳ ನಮ್ಮ ಭಾಷೆಯ ಸಾಹಿತ್ಯ, ಪರಂಪರೆ ಶ್ರೀಮಂತವಾಗಿದೆ. ಕರ್ನಾಟಕದ ಶ್ರೇಷ್ಠ ಸಾಹಿತ್ಯ ಪರಂಪರೆಗೆ ವಿಶ್ವ ಮನ್ನಣೆ ದೊರೆತಿದೆ. ನಮ್ಮ ಸಾಹಿತ್ಯ ವಿಶ್ವದ ಯಾವುದೇ ಭಾಷೆಯ ಸಾಹಿತ್ಯದ ಮೌಲಿಕತೆಯನ್ನು ಸರಿಗಟ್ಟುವಂತಹುದು ಅದಕ್ಕೆ ತಾಜಾ ಉದಾಹರಣೆ ಬಾನು ಮುಫ್ತಾಕ್ ಅವರು. ಅಪ್ಪಟ ಕನ್ನಡ ಭಾಷೆಯಲ್ಲಿ ರಚಿಸಿದ ಅವರ “ಎದೆಯ ಹಣತೆ” ಎಂಬ ಕಥಾ ಸಂಕಲನದ ಅನುವಾದಕ್ಕೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ (BOOKER AWARD) ಗಳಿಸುವ ಮೂಲಕ ಕನ್ನಡ ಭಾಷೆಯ ಕಂಪನ್ನು ಜಗತ್ತಿನ ಗಮನಕ್ಕೆ ಚೆಲ್ಲಿದ್ದಾರೆ ಎಂದು ತಿಳಿಸಿದರು.ಜಿಲ್ಲೆಯ ಅಭಿವೃದ್ಧಿ ಸಾಧ್ಯತೆಗಳ ಹಲವಾರು ಮಜಲುಗಳನ್ನು ಹೊಂದಿರುವ ವಿಶಿಷ್ಟ ಜಿಲ್ಲೆ. ರೇಷ್ಮೆ, ಕೃಷಿಯ ಸಮೃದ್ಧಿ, ತೋಟಗಾರಿಕೆಗೆ ವಿಫುಲ ಅವಕಾಶ, ಹೊಸ ಉದ್ದಿಮೆಗಳನ್ನು ಆಕರ್ಷಿಸುವ ಶಕ್ತಿ ಈ ಜಿಲ್ಲೆಗಿದೆ. ಜಿಲ್ಲಾಡಳಿತವು ಜನರ ಆಶೋತ್ತರಗಳಿಗೆ ಮಿಡಿಯುತ್ತ, ಅಭಿವೃದ್ಧಿ ಪರ ಚಿಂತನೆ ನಡೆಸುತ್ತಾ, ಯೋಜಿಸಿದ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸುತ್ತಾ ಸದಾ ಪ್ರಗತಿಯತ್ತ ಸಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರವು ನಾಡಿನ ಸರ್ವಾಂಗೀಣ ಪ್ರಗತಿಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿವೆ. ಆರೋಗ್ಯ ಶಿಕ್ಷಣ, ಕೃಷಿ, ಕೈಗಾರಿಕೆ ಮತ್ತು ಸಾರಿಗೆ ಸೇರಿದಂತೆ ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ ಸಾಧಿಸಲು ನಮಗೆ ಸಾಧ್ಯವಾಗಿದೆ. ರಾಜ್ಯದ ಪ್ರತಿಯೊಬ್ಬ ಪ್ರಜೆಯ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯು ಸರ್ಕಾರದ ಆಶಯವಾಗಿದೆ. ಜನರ ಆಶೀರ್ವಾದದಿಂದ ಆಡಳಿತಕ್ಕೆ ಬಂದ ನಮ್ಮ ಸರ್ಕಾರವು ಜನತೆಗೆ ನೀಡಿದ ವಾಗ್ದಾನದಂತೆ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ, ಶಕ್ತಿ ಮತ್ತು ಯುವನಿಧಿ ಸೇರಿ ಪಂಚ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಸರ್ಕಾರದ ಯೋಜನೆಗಳ ಲಾಭ ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕೆಂಬುವುದು ನಮ್ಮ ಸರ್ಕಾರದ ಆಶಯ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.ಪೊಲೀಸ್ ಇಲಾಖೆ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನ ಹಾಗೂ ವಿವಿಧ ಶಾಲೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು. ಸಚಿವ ರಾಮಲಿಂಗಾರೆಡ್ಡಿ ಅವರು ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು.
ಶಾಸಕ ಇಕ್ಬಾಲ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ. ರಾಜು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಟರಾಜು ಗಾಣಕಲ್, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಎಸ್. ಗಂಗಾಧರ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚೇತನ್ ಕುಮಾರ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ಮೋಲ್ ಜೈನ್, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಉಪವಿಭಾಗಾಧಿಕಾರಿ ಬಿನೋಯ್ ಮತ್ತಿತರರು ಉಪಸ್ಥಿತರಿದ್ದರು.1ಕೆಆರ್ ಎಂಎನ್ 1.ಜೆಪಿಜಿ
1.ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಧ್ವಜಾರೋಹಣ ನೆರವೇರಿಸಿದರು.2.ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.