ಕನ್ನಡಪ್ರಭ ವಾರ್ತೆ, ಶೃಂಗೇರಿ
ಜಾನಪದ ಪರಂಪರೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಇದು ನಮ್ಮ ಪೂರ್ವಿಕರಿಂದ ಪೀಳಿಗೆಯಿಂದ ಪೀಳಿಗೆಗೆ ಮುಂದುವರೆದುಕೊಂಡು ಬಂದಿದೆ.ಇಂತಹ ಪ್ರಾಚಿನ ಕಲಾಪರಂಪರೆಯಾಗಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಶೃಂಗೇರಿ ಘಟಕದ ಅಧ್ಯಕ್ಷ ಆಶೀಶ್ ದೇವಾಡಿಗತಾಲೂಕಿನ ಕೂತಗೋಡು ಪಂಚಾಯಿತಿ ವ್ಯಾಪ್ತಿ ಕೂತಗೋಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಜಾನಪದ ಗೀತೆ ಸ್ಪರ್ಧೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶ ಗಳಲ್ಲಿ ಜಾನಪದ ಸಾಹಿತ್ಯ, ಕಲೆ,ಸಂಸ್ಕೃತಿ ಇಂದಿಗೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಆದರೆ ಅದಕ್ಕೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿಲ್ಲ ಎಂದು ವಿಷಾದಿಸಿದರು.
ಬತ್ತದ ಗೆದ್ದೆ ನಾಟಿ, ಕೃಷಿ ಚಟುವಟಿಕೆ, ಹಬ್ಬ ಹರಿದಿನಗಳಲ್ಲಿ ಜಾನಪದ ಹಾಡುಗಳನ್ನು ಹಾಡಲಾಗುತ್ತಿತ್ತು. ಜಾನಪದ ಸಾಹಿತ್ಯ ಜನರ ಬಾಯಿಯಿಂದ ಬಾಯಿಗೆ ಬಂದ ಸಾಹಿತ್ಯ. ಇಂದಿನ ಆಧುನಿಕ ಭರಾಟೆಯಲ್ಲಿ ಜಾನಪದ ಸಾಹಿತ್ಯ, ಸಂಸ್ಕೃತಿ ಮರೆಯಾಗುತ್ತಿದೆ. ಇದಕ್ಕೆ ಕಾರಣ ನಮ್ಮ ಜಾನಪದ ಸಾಹಿತ್ಯ ನಿರ್ಲಕ್ಷ ಮಾಡುತ್ತಿರುವುದು. ನಾವೇ ನಿರ್ಲಕ್ಷ ಮಾಡಿದರೆ ಉಳಿಸಿ ಬೆಳೆಸುವವರು ಯಾರು ..? ಆದ್ದರಿಂದ ನಮ್ಮ ಜಾನಪದ ಸಾಹಿತ್ಯ ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಮಾಡ ಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ, ಸದಸ್ಯರಾದ ಶಾಮಣ್ಣ, ಕವಿತಾ, ಜೆಸಿಐನ ಅಶೋಕ್, ಹಳೇ ವಿದ್ಯಾರ್ಥಿ ಸಂಘದ ಶಿವಯ್ಯ ಕುರಾ, ಭಾಗ್ಯ ಮತ್ತಿತ್ತರರು ಇದ್ದರು.
14 ಶ್ರೀ ಚಿತ್ರ 2-ಶೃಂಗೇರಿ ತಾಲೂಕಿನ ಕೂತಗೋಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾವರಣದಲ್ಲಿ ನಡೆದ ಜಾನಪದ ಗೀತೆ ಸ್ಪರ್ಧೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ ಕಾರ್ಯಕ್ರಮದಲ್ಲಿ ಆಶೀಶ್ ದೇವಾಡಿಗ ಮಾತನಾಡಿದರು.