ಕನ್ನಡಪ್ರಭ ವಾರ್ತೆ ಕಾಪುನಮ್ಮ ತುಳುನಾಡಿನ ಸಂಪ್ರದಾಯ, ಸಂಸ್ಕೃತಿ ಬಹಳ ಅನನ್ಯ ಹಾಗೂ ಅದ್ಭುತವಾದುದು. ನಮ್ಮ ಹಿರಿಯ ತಲೆಮಾರಿನ ಜನರು ಆಚರಿಸುತ್ತಿದ್ದ ಹಬ್ಬ ಹರಿದಿನಗಳು, ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಕೆಲವೊಂದು ಸಂಪ್ರದಾಯಗಳು ಮತ್ತು ಧಾರ್ಮಿಕ ಆಚರಣೆಗಳು ಇವುಗಳ ಬಗ್ಗೆ ತಿಳಿದುಕೊಂಡು, ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಜವಾಬ್ದಾರಿ ಇಂದಿನ ಪೀಳಿಗೆ ಮೇಲಿದೆ ಎಂದು ಉಡುಪಿಯ ಜಿ.ಶಂಕರ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಡಾ.ನಿಕೇತನಾ ಹೇಳಿದ್ದಾರೆ.ಅವರು ಕಟಪಾಡಿ ಮಹಿಳಾ ಮಂಡಲದಲ್ಲಿ ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ವತಿಯಿಂದ ನಡೆದ ಪೊಣ್ಜೊವೆಲೆನ ಆಟಿದ ಕೂಟ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿ, ಚೆನ್ನೆಮಣೆ ಆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ವಾಗ್ಮಿ, ಮೂರ್ತೆದಾರರ ಫೆಡರೇಷನ್ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮಾಜಿ ಅಧ್ಯಕ್ಷ ಪಿ.ಕೆ.ಸದಾನಂದ ಭಾಗವಹಿಸಿ, ಆಟಿ ತಿಂಗಳ ಸಾಂಪ್ರದಾಯಿಕ ತಿನಿಸುಗಳಲ್ಲಿ ಅಡಗಿರುವ ಮಹತ್ವ, ಹಿನ್ನೆಲೆ, ಆಟಿ ತಿಂಗಳ ವಿಶೇಷ ಆಚರಣೆ ಹಾಗೂ ಅವುಗಳ ಮಹತ್ವ ಇತ್ಯಾದಿಗಳ ಕುರಿತಾಗಿ ಮಾರ್ಮಿಕವಾಗಿ ವಿವರಿಸಿದರು.ಈ ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಒಕ್ಕೂಟದ ಅಧ್ಯಕ್ಷೆ ಪದ್ಮಾ ರತ್ನಾಕರ್ ವಹಿಸಿ ಸ್ವಾಗತಿಸಿದರು. ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಶೀಲಾ ಕೆ.ಶೆಟ್ಟಿ ಶುಭಾಶಂಸನೆಗೈದರು.
ಇದೇ ಸಂದರ್ಭ ಜಿಲ್ಲಾ ಒಕ್ಕೂಟದ ಅಧ್ಯಕ್ಷೆಯಾಗಿ ನೂತನವಾಗಿ ಆಯ್ಕೆಯಾಗಿರುವ ವಸಂತಿರಾವ್ ಕೊರಡ್ಕಲ್ ಅವರನ್ನು ಸನ್ಮಾನಿಸಲಾಯಿತು. ಆಟಿ ತಿಂಗಳ ಸಾಂಪ್ರದಾಯಿಕ ಅಡುಗೆಗಳನ್ನು ತಯಾರಿಸಿ ತಂದ ವಿವಿಧ ಮಹಿಳಾ ಮಂಡಳಿಗಳ ಅಧ್ಯಕ್ಷರನ್ನು ಶಾಲು ಹೊದಿಸಿ ಪುಷ್ಪ ನೀಡಿ ಗೌರವಿಸಲಾಯಿತು.ಒಕ್ಕೂಟದ ಉಪಾಧ್ಯಕ್ಷೆ ಜ್ಯೋತಿ ಎಂ.ರಾವ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಹಾಯ ಮೇರಿ ವಂದಿಸಿದರು. ಒಕ್ಕೂಟದ ಇನ್ನೋರ್ವ ಉಪಾಧ್ಯಕ್ಷೆ ಗೀತಾ ವಾಗ್ಳೆ ಬಂಟಕಲ್, ಖಜಾಂಚಿ ರೇವತಿ, ಗೀತಾ ರವಿ, ಸುಷ್ಮಾ ಶಿವರಾಂ ಶೆಟ್ಟಿ, ಯಶೋದಾ ಶೆಟ್ಟಿ, ಮಮತಾ ಸುಧಾಕರ್ ಶೆಟ್ಟಿ, ಸುಚರಿತಾ, ಕಟಪಾಡಿ ಗ್ರಾ.ಪಂ.ಅಧ್ಯಕ್ಷೆ ಪ್ರಭಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕೊನೆಯಲ್ಲಿ ಮಹಿಳಾ ಮಂಡಳಿಗಳ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಎಲ್ಲರಿಗೂ ಆಟಿ ಖಾದ್ಯಗಳ ಸಾಂಪ್ರದಾಯಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು.