ಕನ್ನಡಪ್ರಭ ವಾರ್ತೆ ಹುಳಿಯಾರು
ಬುಕ್ಕಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದಿಂದ ಹುಳಿಯಾರು ಸಮೀಪದ ಹೊಯ್ಸಳಕಟ್ಟೆ ಗ್ರಾಮದಲ್ಲಿ ಇತಿಹಾಸ ಪರಂಪರೆ ಸಂರಕ್ಷಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹೊಯ್ಸಳಕಟ್ಟೆಯಲ್ಲಿ ಎರಡು ವೀರಗಲ್ಲುಗಳು ಪತ್ತೆಯಾಗಿವೆ. ಅವುಗಳನ್ನು ಸಂರಕ್ಷಿಸಿ ಹಾಗೂ ಆ ವೀರಗಲ್ಲಿನಲ್ಲಿರುವ ಮಾಹಿತಿಯನ್ನು ಶಶಿಕುಮಾರ್ ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ಹಾಗೂ ಇಲ್ಲಿನ ಸಾರ್ವಜನಿಕರಿಗೆ ತಿಳಿಸಿದರು.
ವೀರಗಲ್ಲಿನಲ್ಲಿ ವೀರ ನಿಂತಿದ್ದು, ಆತನ ಹಿಂಭಾಗ ಹಸುಗಳ ಹಾಗೂ ಮೇಲ್ಭಾಗದಲ್ಲಿ ಸೂರ್ಯ- ಚಂದ್ರರ ಹಾಗೂ 2 ಸಾಲಿನ ಶಾಸನವನ್ನು ಕೆತ್ತಲಾಗಿದೆ. ಇದರ ಅರ್ಥ ಹಿಂದಿನ ಕಾಲದಲ್ಲಿ ಕಳ್ಳರು ಹಸುಗಳನ್ನು ಕದ್ದೊಯ್ಯುತ್ತಿದ್ದರು. ಆಗ ವೀರನು ಕಳ್ಳರೊಂದಿಗೆ ಹೋರಾಡಿ ಹಸುಗಳನ್ನು ಸಂರಕ್ಷಿಸುತ್ತಿದ್ದನು. ಹೀಗೆ ಸಂರಕ್ಷಿಸುವ ಸಂದರ್ಭದಲ್ಲಿ ವೀರನು ಮರಣ ಹೊಂದಿದರೆ ಆತನ ಚಿತ್ರವನ್ನು, ಅವನ ಹೆಸರನ್ನು ಕಲ್ಲಿನಲ್ಲಿ ಕೆತ್ತಿಸಿ ಆತನ ಕುಟುಂಬದ ನಿರ್ವಹಣೆಗೆ ಒಂದು ಸಲಗ, ಗದ್ದೆ ಕೊಡುತ್ತಿದ್ದರು. ಈ ವೀರಗಲ್ಲಿನಲ್ಲಿ ಎರಡು ಸಾಲಿನ ಶಾಸನದ ಪ್ರಕಾರ ಅವನು ವಡ್ಡರಹಳ್ಳಿಯ ವೀರ ಎಂದು ಕೆತ್ತಲಾಗಿದೆ. ಹೀಗೆ ಇತಿಹಾಸ ಸಾರುವ ವೀರಗಲ್ಲುಗಳನ್ನು ನಾವು ಸಂರಕ್ಷಿಸಬೇಕೆಂದು ಶಶಿಕುಮಾರ್ ತಿಳಿಸಿದರು.ಬುಕ್ಕಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಧರಣೇಂದ್ರ ಕುಮಾರ ಮಾತನಾಡಿ, ವೀರಗಲ್ಲಿನ ಬಗ್ಗೆ ಸ್ಥಳೀಯರಿಗೆ ಸರಿಯಾದ ಮಾಹಿತಿ ಇಲ್ಲದೆ ವೀರನು ದನದ ಕಳ್ಳ ಎಂಬ ಅಭಿಪ್ರಾಯವಿದ್ದು, ವೀರಗಲ್ಲುಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಇಲ್ಲಿರುವ ವೀರಗಲ್ಲುಗಳು ತುರುಗಳ್ ವೀರಗಲ್ಲುಗಳಾಗಿವೆ. ಅಂದರೆ ದನಗಳನ್ನು ಕಾಪಾಡಿದವನು ಹೋರಾಟದಲ್ಲಿ ಮಡಿದಾಗ ಅವನ ನೆನಪಿಗಾಗಿ ಅವನ ಚಿತ್ರ ಕೆತ್ತಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.