ಕನ್ನಡಪ್ರಭ ವಾರ್ತೆ ಅಥಣಿ
ಮಾದಕ ವಸ್ತುಗಳ ಸೇವನೆಯಿಂದಾಗಿ ಅನೇಕ ಯುವಕರು ದುಶ್ಚಟಗಳು ದಾಸರಾಗುತ್ತಿದ್ದಾರೆ. ಇದು ಸಮಾಜದ ಮೇಲೆ ಮತ್ತು ಕುಟುಂಬದ ಮೇಲೆ ಕೆಟ್ಟ ದುಷ್ಪರಿಣಾಮ ಬೀರುತ್ತಿದೆ. ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಬಸವ ತತ್ವ ಪ್ರಸಾರ ಸಮಿತಿಯ ಅಧ್ಯಕ್ಷ ಸಂಗನಗೌಡ ಪಾಟೀಲ ಹೇಳಿದರು.ಇಲ್ಲಿನ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತದಿಂದ ನಡೆದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವದಲ್ಲಿಯೇ ಭಾರತ ಸುಸಂಸ್ಕೃತ ಮತ್ತು ಯುವಶಕ್ತಿ ಹೊಂದಿರುವ ರಾಷ್ಟ್ರ. ಸದೃಢ ಮತ್ತು ಆರೋಗ್ಯವಂತ ರಾಷ್ಟ್ರ ಕಟ್ಟಲು ಶ್ರಮಿಸಬೇಕಾದ ಯುವಶಕ್ತಿ ಇಂದು ದುಶ್ಚಟಗಳ ದಾಸರಾಗುತ್ತಿರುವುದು ವಿಷಾದನೀಯ. ದಾರಿ ತಪ್ಪುತ್ತಿರುವ ಯುವಕರನ್ನು ಸನ್ಮಾರ್ಗದಲ್ಲಿ ನಡೆಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿವಿಧ ವ್ಯಸನಗಳಿಂದ ಸವದಿ ಮತ್ತು ಇಳಕಲ್ಲ ಮಠದ ಲಿಂಗೈಕ್ಯ ಮಹಾಂತ ಅಪ್ಪಗಳ ಬದುಕು ನಮ್ಮೆಲ್ಲರಿಗೆ ಆದರ್ಶವಾಗಬೇಕು ಎಂದು ಹೇಳಿದರು.
ನ್ಯಾಯವಾದಿ ಧರೇಪ್ಪ ಠಕ್ಕಣ್ಣವರ ಮಾತನಾಡಿ, ಹಾಳಾದ ಸಂಸಾರಗಳನ್ನು ಉಳಿಸುವ ಸಲುವಾಗಿ ವ್ಯಸನಮುಕ್ತ ಸಮಾಜದ ನಿರ್ಮಾಣಕ್ಕೆ ಡಾ.ಮಹಾಂತ ಶಿವಯೋಗಿಗಳು ಮುಂದಾಗಿದ್ದರು. ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಕೊಳ್ಳುವ ಮಹಾಂತ ಜೋಳಿಗೆ ಕಾರ್ಯವು ಇಡೀ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಪ್ರಸಿದ್ಧಿ ಪಡೆಯಿತು. ರಾಜ್ಯ ಸರ್ಕಾರ ಕೂಡ ಅವರ ಜನ್ಮದಿನವನ್ನು ವ್ಯಸನ ಮುಕ್ತ ದಿನಾಚರಣೆ ಎಂದು ಆಚರಿಸಲು ಸೂಚಿಸಿದೆ. ಮುಂಬರುವ ವರ್ಷಗಳಲ್ಲಿ ತಾಲೂಕು ಆಡಳಿತದಿಂದ ಇನ್ನಷ್ಟು ವಿದಾಯಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವ ಜನಾಂಗದಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ಉಪ ತಹಸೀಲ್ದಾರ್ ಎಂ.ಎಂ.ಬಿರಾದಾರ ಮಾತನಾಡಿ, ಸ್ವಾತಂತ್ರ್ಯ ನಂತರ ಡಾ.ಮಹಾಂತ ಶಿವಯೋಗಿಗಳು ಸಮಾಜದ ಸ್ವಾಸ್ಥ್ಯ ಕಾಪಾಡಿ, ಅನಾಚಾರ ತಡೆಗಟ್ಟಲು ಹಗಲಿರುಲು ಶ್ರಮಿಸಿದರು. ಸಮಾಜದಲ್ಲಿನ ಅನಾಚಾರವನ್ನು ತಡೆಗಟ್ಟಲು ಸ್ವತಃ ಸಾಮಿಜಿಗಳು ಮನೆ ಮನೆಗೆ ತೆರಳಿ ಜನರ ದುಶ್ಚಟಗಳನ್ನು ತಮ್ಮ ಜೊಳಿಗೆಗೆ ಹಾಕಿಸಿಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಆರೋಗ್ಯವಂತ ಸಮಾಜ ಕಟ್ಟಲು ಶ್ರಮಿಸಬೇಕೆಂದರು.
ಈ ವೇಳೆ ನ್ಯಾಯವಾದಿ ಸಂಗಣ್ಣ ಗೂಗವಾಡ, ವಿಮೋಚನಾ ಸಂಸ್ಥೆಯ ಎಂ.ಬಿ ತೋಟಗಿ, ಹಿರಿಯ ಉಪ ನೋಂದಣಿ ಅಧಿಕಾರಿ ಎಸ್.ಎಂ. ಹಿಮೇಶ, ಸಮಾಜ ಕಲ್ಯಾಣ ಅಧಿಕಾರಿ ಪರಶುರಾಮ ಪತ್ತಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ ಎಸ್. ನೀರಾವರಿ ಯೋಜನೆ ಅಧಿಕಾರಿ ಪ್ರವೀಣ ಹುಣಸಿಕಟ್ಟಿ, ಡಾ.ಸುರೇಶ್ ಮೈಗೂರ, ಬಿಸಿಊಟ ಯೋಜನೆಯ ಸಹಾಯಕ ನಿರ್ದೇಶಕ ಎನ್ಎಂ ನಾಮದಾರ, ಸುನಿತಾ ನವಲಗುಂದ ಸೇರಿ ಇತರರಿದ್ದರು.