ಯುವ ಜನಾಂಗ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವುದು ಖೇದಕರ

KannadaprabhaNewsNetwork |  
Published : Sep 24, 2026, 02:00 AM IST
23ಎಸ್‌ವಿಆರ್‌01 | Kannada Prabha

ಸಾರಾಂಶ

ಇಂದಿನ ಯುವ ಜನಾಂಗದ ಹೆಚ್ಚು ಜನರು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದು, ನಮ್ಮ ಕಲೆ-ಸಂಗೀತದಿಂದ ವಿಮುಖರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಸವಣೂರು: ಸಿನಿಮಾ ಎಂಬುದು ಒಳ್ಳೆಯ ಸದಭಿರುಚಿಯ ಜೊತೆಗೆ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ರವಾನಿಸುವಂತಹುದಾಗಿರಬೇಕು ಎಂದು ಜೂನಿಯರ್ ರಾಜಕುಮಾರ ಖ್ಯಾತಿಯ ರಂಗ ಕಲಾವಿದ ಅಶೋಕ ಬಸ್ತಿ ಅಭಿಪ್ರಾಯಪಟ್ಟರು.

ತಾಲೂಕಿನ ತೆವರಮೆಳ್ಳಿಹಳ್ಳಿ ಗ್ರಾಮದ ಶ್ರೀ ಗಣೇಶ ಮಿತ್ರ ಮಂಡಳಿ ಆಯೋಜಿಸಲಾಗಿದ್ದ 39 ನೇ ವರುಷದ ಶ್ರೀ ಗಜಾನನೋತ್ಸವದ ಅಂಗವಾಗಿ ಮಂಗಳವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಇಂದಿನ ಯುವ ಜನಾಂಗದ ಹೆಚ್ಚು ಜನರು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದು, ನಮ್ಮ ಕಲೆ-ಸಂಗೀತದಿಂದ ವಿಮುಖರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ನಮ್ಮ ಕನ್ನಡ ಚಲನಚಿತ್ರಗಳ ಹಳೆಯ ಹಾಡುಗಳಲ್ಲಿನ ರಾಗ ಸಂಯೋಜನೆ ಮತ್ತು ಸಾಹಿತ್ಯ ನಿಜಕ್ಕೂ ಅದ್ಭುತವಾಗಿದೆ. ಕನ್ನಡಿಗರಾದ ನಾವೆಲ್ಲ ಕನ್ನಡ ಸಿನೆಮಾಗಳನ್ನು ನೋಡುವ ಮೂಲಕ ಚಿತ್ರೋದ್ಯಮವನ್ನು ಪ್ರೋತ್ಸಾಯಿಸುವುದು ಇಂದಿನ ಅಗತ್ಯತೆಯಲ್ಲೊಂದಾಗಿದೆ ಎಂದರು.

ಧಾರ್ಮಿಕ ಆಚರಣೆಗಳಲ್ಲಿ ನಮ್ಮ ಕಲಾಪ್ರಕಾರಗಳ ಪ್ರದರ್ಶನ ಅವಶ್ಯವಾಗಿದೆ ಎಂದರು.

ಜಲ ಯೋಗಪಟು ರಾಜೂ ಪೇಟಕರ ಮಾತನಾಡಿ, ಚಲನಚಿತ್ರವೂ ಸೇರಿದಂತೆ ಸಾಮಾಜಿಕ ಜಾಲ ತಾಣ ಮಾಧ್ಯಮ ಎಂಬುದು ಮನುಷ್ಯನ ಬದುಕಿನ ಸರ್ವ ಸ್ಥರಗಳ ಮೇಲೆ ಬಹುತೇಕ ಪ್ರಭಾವ ಬೀರುವಂತಹ ಒಂದು ಕ್ಷೇತ್ರವಾಗಿದ್ದು, ಮಾನವೀಯತೆಯುಕ್ತ ಆರೋಗ್ಯಕರ ಮಾಹಿತಿ, ಸಂದೇಶಗಳು ಇಲ್ಲಿ ಪ್ರಚುರಗೊಳ್ಳಬೇಕು ವಿನಹ ಅನಗತ್ಯ ಕ್ರೌರ್ಯ- ಹಿಂಸೆಗಳಲ್ಲ. ಈ ನಿಟ್ಟಿನಲ್ಲಿ ಸಾಹಿತಿಗಳು, ಬರಹಗಾರರು, ನಿರ್ದೇಶಕರು, ರೀಲ್ಸ್ ನಿರ್ವಾಹಕರು ಗಮನ ಹರಿಸುವ ಅವಶ್ಯಕತೆ ಇದೆ ಎಂದರು.

ಹಿರಿಯ ನಾಗರಿಕ ರುದ್ರಪ್ಪ ಹಲಸೂರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಬಿ.ಎಲ್.ಪೂಜಾರ, ಉದ್ಯಮಿ ಉಳವಪ್ಪ ಹಲಸೂರ, ಪ್ರಮುಖರಾದ ಸುರೇಶ ಹಲಸೂರ, ಯಲ್ಲಪ್ಪ ನಾಯಕನೂರ, ಗದಿಗೆಪ್ಪ ಹಲಸೂರ, ಎಚ್.ಆರ್.ನದಾಫ್, ಬಸವಣ್ಣೆಪ್ಪ ಹಲಸೂರ ಹಾಗೂ ಇತರರು ಪಾಲ್ಗೊಂಡಿದ್ದರು. ನಂತರ, ಕನ್ನಡ ಚಲನಚಿತ್ರ ಗೀತೆಗಳ ರಸಮಂಜರಿ ಕಾರ್ಯಕ್ರಮ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸುರಕ್ಷತೆ ಶಿಕ್ಷಕರ ಮೂಲ ಕರ್ತವ್ಯ: ಸಿದ್ರಾಮೇಶ್ವರ
ಕೊಪ್ಪಳದಲ್ಲಿ ಆಧಾರ್ ತಿದ್ದುಪಡಿಗೆ ಬೆಳಗಿನ ಜಾವವೇ ಕ್ಯೂ