ಮರಣದಂಡನೆ ಶಿಕ್ಷೆಗೆ ಅಪರಾಧದ ಮಟ್ಟವೇ ಮುಖ್ಯ, ಭಾವನೆಯಲ್ಲ

KannadaprabhaNewsNetwork |  
Published : Mar 27, 2024, 01:05 AM ISTUpdated : Mar 27, 2024, 01:56 PM IST
Karnataka High Court

ಸಾರಾಂಶ

ತಾಯಿಯ ಕೊಲೆ ಮಾಡಿದ ಅಪರಾಧಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆ ರದ್ದುಪಡಿಸಿ ಜೀವಾವಧಿ ಶಿಕ್ಷೆಗೆ ಬದಲಿಸಿರುವ ಹೈಕೋರ್ಟ್‌, ಮರಣದಂಡನೆ ಶಿಕ್ಷೆ ನೀಡುವಾಗ ಭಾವನೆಯನ್ನು ಪ್ರಮುಖ ಅಂಶವಾಗಿ ಪರಿಗಣಿಸದೇ ಅಪರಾಧದ ಮಟ್ಟವನ್ನು ಮುಖ್ಯವಾಗಿ ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಾಯಿಯ ಕೊಲೆ ಮಾಡಿದ ಅಪರಾಧಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆ ರದ್ದುಪಡಿಸಿ ಜೀವಾವಧಿ ಶಿಕ್ಷೆಗೆ ಬದಲಿಸಿರುವ ಹೈಕೋರ್ಟ್‌, ಮರಣದಂಡನೆ ಶಿಕ್ಷೆ ನೀಡುವಾಗ ಭಾವನೆಯನ್ನು ಪ್ರಮುಖ ಅಂಶವಾಗಿ ಪರಿಗಣಿಸದೇ ಅಪರಾಧದ ಮಟ್ಟವನ್ನು ಮುಖ್ಯವಾಗಿ ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟಿದೆ.

ದೋಷಿ ತಿಮ್ಮಪ್ಪ ಎಂಬಾತ ಚಿತ್ರದುರ್ಗದ ವಿಚಾರಣಾ ನ್ಯಾಯಾಲಯ ತನಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ ಹರೀಶ್ ಕುಮಾರ್ ಮತ್ತು ಎಸ್.ರಾಚಯ್ಯ ಅವರ ವಿಭಾಗೀಯ ಪೀಠ ಭಾಗಶಃ ಅಂಗೀಕರಿಸಿ ವಿಚಾರಣೆ ನಡೆಸಿತು. 

ಮರಣದಂಡನೆ ಶಿಕ್ಷೆ ರದ್ದುಗೊಳಿಸಿ ಜೀವಾವಧಿ ಶಿಕ್ಷೆ ಹಾಗೂ ₹ 25ಸಾವಿರ ದಂಡ ವಿಧಿಸಿತು.ಅರ್ಜಿದಾರರ ಪರ ವಕೀಲರು, ಪ್ರಕರಣದಲ್ಲಿ ಪಾಟಿ ಸವಾಲು ಪರಿಣಾಮಕಾರಿ ಆಗಿರದಿದ್ದರೂ ವಶಪಡಿಸಿಕೊಂಡ ವಸ್ತುಗಳ ಆಧಾರದ ಮೇಲೆ ಪ್ರತ್ಯಕ್ಷದರ್ಶಿಗಳ ಸಾಕ್ಷ್ಯಗಳನ್ನು ನಂಬಲಾಗಲ್ಲ ಎಂದು ಸಾಬೀತು ಪಡಿಸಬಹುದು. 

ಈ ಪ್ರಕರಣದಲ್ಲಿ ಮೂರನೇ ಪ್ರತ್ಯಕ್ಷದರ್ಶಿ ಅಪರಾಧಿ ತಿಮ್ಮಪ್ಪ ಕೃತ್ಯ ಎಸಗಿದ ಬಳಿಕ ಮನೆಯೊಳಗೆ ತೆರಳಿ ಮಾರಾಕಾಸ್ತ್ರ ವಶಪಡಿಸಿಕೊಂಡಿದ್ದಾನೆ ಎಂದು ಹೇಳಿದ್ದಾನೆ. ಆದರೆ ಈ ಸಾಕ್ಷ್ಯ ಅಸಮಂಜಸವಾಗಿದೆ. 

ಹೀಗಾಗಿ ತಿಮ್ಮಪ್ಪಗೆ ವಿಧಿಸಲಾದ ಮರಣ ದಂಡನೆ ಶಿಕ್ಷೆಯನ್ನು ರದ್ದುಗೊಳಿಸುವಂತೆ ಮನವಿ ಮಾಡಿದರು.ಕೆಲಹೊತ್ತು ವಾದ ಆಲಿಸಿದ ನ್ಯಾಯಪೀಠ ಪ್ರಮುಖ ಸಾಕ್ಷಿಗಳ ಪಾಟಿ ಸವಾಲು ಪರಿಣಾಮಕಾರಿಯಾಗಿಲ್ಲ ಎಂಬ ಅರ್ಜಿದಾರರ ವಾದವನ್ನು ತಿರಸ್ಕರಿಸಿತು. 

ಅಪರಾಧಿ ತಿಮ್ಮಪ್ಪ ಪತ್ನಿಯಿಂದ ಬೇರ್ಪಟ್ಟು ಕೆಲ ವರ್ಷಗಳು ಕಳೆದಿದ್ದವು, ಪತ್ನಿ ದೂರವಾಗಲು ತಾಯಿಯೇ ಕಾರಣ ಎಂಬ ಸಿಟ್ಟು ಅಪರಾಧಿಯಲ್ಲಿತ್ತು. 

ಕೊಲೆಯನ್ನು ಉದ್ದೇಶ ಪೂರ್ವಕವಾಗಿ ಮಾಡಲಾಗಿದೆ ಹೊರತು ದಿಢೀರ್ ನಡೆದ ಕೃತ್ಯವಲ್ಲ ಎನ್ನುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಅಲ್ಲದೇ ಇದು ಅತಿ ಅಪರೂಪ ಎನ್ನುವಂತಹ ಪ್ರಕರಣವಲ್ಲ, ಹೀಗಾಗಿ ಅಪರಾಧಿಗೆ ಮರಣ ದಂಡನೆ ಶಿಕ್ಷೆ ವಿಧಿಸಿರುವುದು ಸೂಕ್ತವಲ್ಲ ಎಂದಿತು.

ಪ್ರಕರಣದ ಹಿನ್ನೆಲೆ:ಪತ್ನಿ ತನ್ನನ್ನು ತೊರೆದು ಹೋಗಲು ತಾಯಿ ಕಾರಣ ಎನ್ನುವ ಕಾರಣಕ್ಕೆ ತಾಯಿ ಮಗ ನಡುವೆ ನಡೆದ ವಾಗ್ವಾದ ತಾರಕಕ್ಕೇರಿದಾಗ ತಿಮ್ಮಪ್ಪ ತಾಯಿಯ ಕುತ್ತಿಗೆಗೆ ಮಚ್ಚಿನಿಂದ ತೀವ್ರವಾಗಿ ಹಲ್ಲೆ ನಡೆಸಿದ ಪರಿಣಾಮ ಆಕೆ ಮೃತಪಟ್ಟಿದ್ದಳು. 

ತಾಯಿಯನ್ನು ಕ್ರೂರವಾಗಿ ಹತ್ಯೆಗೈದ ಹಿನ್ನೆಲೆಯಲ್ಲಿ ತಿಮ್ಮಪ್ಪನ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಚಿತ್ರದುರ್ಗ ವಿಚಾರಣಾ ನ್ಯಾಯಾಲಯ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಚ್ಚೆತ್ತ ಬೆಂ.ವಿವಿ: ಲೋಪ ಸರಿಪಡಿಸಿ 400 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ
ಕುದುರೆಗಳಲ್ಲಿ ಗ್ಲ್ಯಾಂಡರ್ಸ್ ರೋಗ ಪತ್ತೆ: ಟರ್ಫ್ ಕ್ಲಬ್‌ ಸುತ್ತ ಪ್ರಾಣಿ ಸಂಚಾರ ನಿರ್ಬಂಧ