ಕನ್ನಡಪ್ರಭ ವಾರ್ತೆ ಮಂಡ್ಯ
ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸುವ ಮೂಲಕ ಅವರನ್ನು ಸ್ವಾವಲಂಬಿ ಹಾದಿಯಲ್ಲಿ ನಡೆಸುವುದು ಪೋಷಕರ ಕರ್ತವ್ಯ ಎಂದು ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.ನಗರದ ಕೃಷಿಕ್ ಸರ್ವೋದಯ ಫೌಂಡೇಷನ್ ಸಭಾಂಗಣದಲ್ಲಿ ಕನ್ನಿಕಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ವತಿಯಿಂದ ನಡೆದ ಮಂಡ್ಯ ಜಿಲ್ಲೆಯ ಮಹಾನುಭಾವರು ಕೃತಿ ಬಿಡುಗಡೆ, ಪ್ರತಿಭಾ ಪುರಸ್ಕಾರ, ಕನ್ನಿಕಶಿಲ್ಪ ಪುಸ್ತಕ ಮತ್ತು ಸಮಾಜ ಸೇವಾ ಪ್ರಶಸ್ತಿ ಪ್ರದಾನದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಶಿಸ್ತು ಕಲಿಸಬೇಕು. ಮುಂದಿನ ಬದುಕಿನ ಬಗ್ಗೆ ಹಾಗೂ ತಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡುವುದು ಪೋಷಕರ ಜವಾಬ್ದಾರಿಯಾಗಿದೆ ಎಂದರು.
ಈ ನೆಲದಲ್ಲಿ ಅದೆಷ್ಟೋ ಮಂದಿ ರಾಜಕಾರಣಿಗಳು, ಸಾಹಿತಿಗಳು ಬಂದು ಹೋಗಿದ್ದಾರೆ. ಅಂತಹ ಮಹನೀಯರ ಬಗ್ಗೆ ಕನ್ನಿಕಾ ಅವರು ಬೆಳಕು ಚೆಲ್ಲಿದ್ದಾರೆ. ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.ಕಸಾಪ ಮಾಜಿ ಅಧ್ಯಕ್ಷ ಜಿ.ಟಿ.ವೀರಪ್ಪ ಮಾತನಾಡಿ, ಜಿಲ್ಲೆಯ ಕವಿಗಳು ರೈತ ಮತ್ತು ಸ್ವತಂತ್ರ ಹೋರಾಟಗಾರರ ಕಲೆ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಮಂಡ್ಯ ಜಿಲ್ಲೆಯ ಮಹಾನುಭಾವರು ಕೃತಿಯಲ್ಲಿ ಓದುವಂತೆ ಮಾಡಿರುವುದು ಶ್ಲಾಘನೀಯ ಎಂದರು.
ಕೃತಿ ಕುರಿತು ಮಾಂಡವ್ಯ ಎಕ್ಸಲೆನ್ಸ್ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಎಸ್.ಮಹೇಶ್ ಮಾತನಾಡಿದರು. ಇದೇ ವೇಳೆ ಲೇಖಕಿ ಎಚ್.ಆರ್.ಕನ್ನಿಕ ಅವರ ಮಂಡ್ಯ ಜಿಲ್ಲೆಯಯ ಮಹಾನುಭಾವರು ಕೃತಿ ಬಿಡುಗಡೆ ಮಾಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ, ಅಲಯ ಸೌತ್ ಮಲ್ಟಿಪಲ್ ಕೌನ್ಸಿಲ್ ಉಪಾಧ್ಯಕ್ಷ ಕೆ.ಟಿ.ಹನುಮಂತು ಕನ್ನಿಕಾ ಶಿಲ್ಪ ನವೋದಯ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎಚ್.ಬಿ.ರಾಮಕೃಷ್ಣ, ಮುಖಂಡ ಕೆ.ಎಂ.ಮಹೇಶ್ ಭಾಗವಹಿಸಿದ್ದರು.