ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕವು ತಾಲೂಕಿನ ಹಿರೀಸಾವೆ ಹೋಬಳಿ ಕಬ್ಬಳಿಯ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಏರ್ಪಡಿಸಿದ್ದ ೨೦೨೫- ೨೬ನೇ ಸಾಲಿನ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಮತ್ತು ಕನ್ನಡ ಭಾಷೆಯಲ್ಲಿ ಪೂರ್ಣ ಅಂಕ ಗಳಿಸಿದ ಹೋಬಳಿಯ ಶಾಲೆಗಳ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ವಿದ್ಯೆ ಕಲಿತವರು ದಾರಿ ತಪ್ಪಬಹುದು, ಆದರೆ ಸಂಸ್ಕಾರ ಕಲಿತವರು ಎಂದಿಗೂ ದಾರಿ ತಪ್ಪುವುದಿಲ್ಲ. ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ೧೯೮೬ರಲ್ಲಿ ಅಖಿಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿ, ಮಕ್ಕಳಿಗೆ ಕೃತಿಗಳನ್ನು ರಚನೆ ಮಾಡಲು ಪ್ರೇರೆಪಿಸಿದ್ದರು ಎಂದು ತಿಳಿಸಿದರು.
ಕನ್ನಡ ಭಾಷೆ ಅಮೃತ ಭಾಷೆ, ರಾಜ್ಯದಲ್ಲಿರುವ ಅನ್ಯಭಾಷಿಕರಿಗೆ ಕನ್ನಡವನ್ನು ಕಲಿಸಬೇಕು. ಐಎಎಸ್, ಐಪಿಎಸ್ ಸೇರಿ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಕನ್ನಡ ಭಾಷೆ ಕಲಿತು, ಕೆಲಸ ಮಾಡಿದಾಗ ಜನರಿಗೆ ಅನುಕೂಲವಾಗುತ್ತದೆ. ಇತ್ತೀಚೆಗೆ ಕೆಲವು ನ್ಯಾಯಾಲಯದ ತೀರ್ಪುಗಳು ಕನ್ನಡದಲ್ಲಿ ಬರುತ್ತಿವೆ, ಮಂದಿನ ದಿನಗಳಲ್ಲಿ ಎಲ್ಲಾ ಕೋರ್ಟ್ ಗಳ ಆದೇಶ, ತೀರ್ಪುಗಳು ಸ್ಥಳಿಯ ಭಾಷೆಯಲ್ಲಿ ಬರುವಂತೆ ಅಗಬೇಕು ಎಂದರು.ಸಾಹಿತಿ ಪ್ರೊ. ಹೊಸೂರು ಎನ್. ತಮ್ಮಣ್ಣಗೌಡ ಮಾತನಾಡಿ, ಮಕ್ಕಳಲ್ಲಿ ಇರುವ ಜ್ಞಾನವು ಪರೀಕ್ಷೆಗಳ ಮೂಲಕ ಪ್ರತಿಭೆಯಾಗಿ ಹೊರಬರುತ್ತದೆ. ಮನೆಯಲ್ಲಿ ಹಿರಿಯರು, ಶಾಲೆಯಲ್ಲಿ ಶಿಕ್ಷಕರು ಮತ್ತು ಸಭೆಯಲ್ಲಿ ಗುರುಗಳು ಹೇಳುವುದನ್ನು ಶ್ರದ್ಧೆಯಿಂದ ಕೇಳಿದರೆ, ನಿಮ್ಮ ಭವಿಷ್ಯ ಉತ್ತಮವಾಗುತ್ತದೆ ಎಂದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಪ್ರೊ.ಎಚ್.ಪಿ ಶಂಕರ್, ಮಾಜಿ ಅಧ್ಯಕ್ಷ ಎಚ್.ಇ.ಬೋರಣ್ಣ, ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಟಿ.ತಿಮ್ಮೇಗೌಡ, ಕಸಾಪದ ಪದಾಧಿಕಾರಿಗಳು ಇದ್ದರು. ಸ್ವಾಮೀಜಿ ಸಾನ್ನಿಧ್ಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.