ಕನ್ನಡಪ್ರಭ ವಾರ್ತೆ ಹಿರಿಯೂರು
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಹಿರಿಯೂರು ತಾಲೂಕಿನ ರೈತರ ಕುಂದು ಕೊರತೆ ಸಭೆಯನ್ನು ತಹಶೀಲ್ದಾರ್ ಸಿದ್ದೇಶ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.ಸಭೆಯಲ್ಲಿ ವಿವಿಧ ರೈತರಿಂದ ಅಹವಾಲುಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಇಲಾಖೆಯಿಂದ ಪರಿಹಾರವನ್ನು ಸ್ಥಳದಲ್ಲಿಯೇ ಒದಗಿಸಲಾಯಿತು.
ಸಭೆಯಲ್ಲಿ ರೈತ ಮುಖಂಡ ಕೆಸಿ ಹೊರಕೇರಪ್ಪ ಮಾತನಾಡಿ, ಕೃಷಿ ಇಲಾಖೆಯಿಂದ ಉತ್ತಮ ಗುಣಮಟ್ಟವುಳ್ಳ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ನೀಡಬೇಕು. ರಸಗೊಬ್ಬರ ಮಳಿಗೆಗಳಲ್ಲಿ ರಸಗೊಬ್ಬರ ದರಪಟ್ಟಿಯನ್ನು ಪ್ರದರ್ಶಿಸಲು ರಸಗೊಬ್ಬರ ಮಳಿಗೆ ಮಾಲೀಕರಿಗೆ ನಿರ್ದೇಶನ ನೀಡಬೇಕೆಂದು ತಿಳಿಸಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ತೊಗರಿ ಮತ್ತು ಕಡಲೆ ಬಿತ್ತನೆ ಬೀಜ ಖರೀದಿ ಮಾಡಲು ಈಶ ರೈತ ಉತ್ಪಾದಕ ಸಂಸ್ಥೆಗೆ ಅನುಮತಿ ನೀಡಿರುವುದಕ್ಕೆ ನಮ್ಮ ವಿರೋಧವಿದೆ. ಕೂಡಲೇ ಸದರಿ ಅನುಮತಿಯನ್ನು ರದ್ದುಪಡಿಸಬೇಕೆಂದು ಮನವಿ ಮಾಡಿ ಸಭೆಯನ್ನು ಬಹಿಷ್ಕರಿಸಿ ಸಭೆಯಿಂದ ಹೊರನಡೆದರು.
ತಹಸೀಲ್ದಾರ್ ಎಂ ಸಿದ್ದೇಶ್ ಮಾತನಾಡಿ ಎಲ್ಲಾ ಇಲಾಖೆಗಳು ಸಕಾಲದಲ್ಲಿ ರೈತರಿಗೆ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಅರ್ಹ ಪಲಾನುಭವಿಗಳಿಗೆ ಯೋಜನೆಯ ಸವಲತ್ತುಗಳನ್ನು ಒದಗಿಸಬೇಕು. ಸಭೆಯಲ್ಲಿ ಸ್ವೀಕೃತವಾದ ಅಹವಾಲು ಅರ್ಜಿಗಳನ್ನು ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು.
ಉಪ ಕೃಷಿ ನಿರ್ದೇಶಕ ಉಮೇಶ್ ಮಾತನಾಡಿ ಈ ವರ್ಷದಲ್ಲಿ ರಸಗೊಬ್ಬರವನ್ನು ಎಫ್.ಎಫ್.ಎಸ್ ಮೊಬೈಲ್ ಆಪ್ ಮೂಲಕ ವಿತರಿಸಲಿದ್ದು ಇದಕ್ಕೆ ರೈತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಹಾಯಕ ಕೃಷಿ ನಿರ್ದೇಶಕ ಜೆ ಅಶೋಕ್ ಮಾತನಾಡಿ 2025-26ನೇ ಸಾಲಿನ ಬೆಳೆವಿಮೆ ನೊಂದಣಿ ಮತ್ತು ಕ್ಷೇಮು ಪಾವತಿಯ ಬಗ್ಗೆ ಮಾಹಿತಿ ನೀಡಿ ಒಟ್ಟು 12.5 ಕೋಟಿ ಬೆಳೆವಿಮೆಯನ್ನು ಶೇಂಗಾ ಮತ್ತು ಸೂರ್ಯಕಾಂತಿ ಬೆಳೆಗಳನ್ನು ಬೆಳೆದ ರೈತರಿಗೆ ಈಗಾಗಲೇ ಪಾವತಿಸಲಾಗಿರುತ್ತದೆ ಎಂದರು.ಸಭೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಪರಶುರಾಮ ಚಂದ್ರವಂಶಿ,ಕೃಷಿಕ ಸಮಾಜದ ನಿರ್ದೇಶಕ ಹೆಚ್.ಆರ್ ತಿಮ್ಮಯ್ಯ ಸೇರಿದಂತೆ ವಿವಿಧ ರೈತ ಮುಖಂಡರುಗಳು ಹಾಗೂ ವಿವಿಧ ಇಲಾಖೆಯ ಮುಖ್ಯಸ್ಥರುಗಳು ಹಾಜರಿದ್ದರು.