ಕನ್ನಡಪ್ರಭ ವಾರ್ತೆ ವಿಜಯಪುರ
ಅಹಿಂದ ನಾಯಕ ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸುವ ಮೂಲಕ ಕಾಂಗ್ರೆಸ್ ಹಿಂದುಳಿದ ವರ್ಗದ ವಿರೋಧಿ ನೀತಿ ಅನುಸರಿಸಿತ್ತು. ಇದೀಗ ಮತ್ತೆ ಮಂಕಾಳು ವೈದ್ಯ ಹಾಗೂ ಗಾಯತ್ರಿ ಅವರನ್ನು ಮಂತ್ರಿಗಳೆಂದು ಘೋಷಿಸಿ ಕೊನೆಗೆ ಕೈಬಿಟ್ಟಿದ್ದು, ಒಬ್ಬರೇ ಒಬ್ಬ ಮಹಿಳೆ ಇಲ್ಲದೆ ಸಚಿವ ಸಂಪುಟ ಮಾಡಿದ್ದಾರೆ. ಹಾಗಾಗಿ ಮಹಿಳಾ ವಿರೋಧಿ ಹಾಗೂ ಅಹಿಂದ ವಿರೋಧಿ ಕಾಂಗ್ರೆಸ್ ಸರ್ಕಾರ ಎಂದು ರಾಜ್ಯ ಬಿಜೆಪಿ ಓಬಿಸಿ ಮೋರ್ಚಾ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ಆರೋಪಿಸಿದರು.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿರ್ಮಲಾ ಸೀತಾರಾಂ ಅವರನ್ನು ಹಣಕಾಸು ಸಚಿವೆಯನ್ನಾಗಿ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಮೋದಿಯವರನ್ನು ನೋಡಿ ಕಲಿಯಬೇಕು. ಮೋದಿಯವರು ಪ್ರಧಾನಮಂತ್ರಿ ಕಿಸಾನ್ ಯೋಜನೆಯಲ್ಲಿ ರೈತರಿಗೆ ಕೊಡುತ್ತಿದ್ದ ₹6 ಸಾವಿರ ಪ್ರೋತ್ಸಾಹ ಧನವನ್ನು 2031ರವರೆಗೆ ವಿಸ್ತರಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ರೈತರಿಂದ ಭೂಮಿ ಕಸಿದುಕೊಂಡು ಲೇಔಟ್‌ಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ವರ್ತನೆ ಇದೇ ರೀತಿ ಮುಂದುವರಿದರೆ ಜನತೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ 105 ಹಿಂದುಳಿದ ವರ್ಗಗಳ ವಸತಿ ಶಾಲೆಗಳಿದ್ದು, ಪ್ರತಿವರ್ಷ ಸುಮಾರು 25ಸಾವಿರ ಅರ್ಜಿಗಳು ಬರುತ್ತವೆ. ಅದರಲ್ಲಿ ಕೇವಲ 9 ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕೊಡಲಾಗುತ್ತಿದೆ. ಇದರಿಂದ ಉಳಿದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಅವಕಾಶ ಕೊಡಬೇಕು. ಹಿಂದುಳಿದ ಮಕ್ಕಳಿಗೆ ಸೌಲಭ್ಯ ಕೊಡಲು ರಾಜ್ಯ ಸರ್ಕಾರದಲ್ಲಿ ಹಣವಿಲ್ಲವೇ ಎಂಬುದನ್ನು ಸಿಎಂ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲೆಯ ಕೆಲವು ಶಾಲೆಗಳಿಗೆ ಇನ್ನು ಪಠ್ಯಪುಸ್ತಕಗಳು ಬಂದಿಲ್ಲ. ವಿಳಂಬವಾಗಿ ಪಠ್ಯಪುಸ್ತಕ ಕೊಟ್ಟರೆ ಫಲಿತಾಂಶ ಕಡಿಮೆ ಬರುವುದು ಸಹಜ. ಇದುವರೆಗೂ ಕೆಲವು ವಿಷಯಗಳದ್ದು ಮಾತ್ರ ಪುಸ್ತಕ ನೀಡಲಾಗಿದೆ. ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳು ಗಮನಹರಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಈರಣ್ಣ ರಾವೂರ, ಸಾಬು ಮಾಶಾಳ, ವಿಜಯ ಜೋಶಿ ಇದ್ದರು.