ಧಾರವಾಡ: ಭಾರತ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠವಾದದ್ದು, ಅದರ ಶ್ರೇಷ್ಠತೆಯನ್ನು ಎತ್ತಿಹಿಡಿದು ಸಂವಿಧಾನದ ಆಶಯದಂತೆ ನಡೆಯುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
ಸಂವಿಧಾನದ ಪೀಠಿಕೆಯು ಸಂವಿಧಾನದ ತಿರುಳಾಗಿದೆ. ಪೀಠಿಕೆಯಲ್ಲಿ ಅಳವಡಿಸಿರುವ ಆಶಯಗಳನ್ನು ಭಾರತೀಯರಾದ ನಾವು ತಪ್ಪದೇ ಪಾಲಿಸಬೇಕು. ಭ್ರಾತೃತ್ವ, ಸಹಯೋದರತ್ವ ಸಾಮರಸ್ಯಗಳನ್ನು ಉಳಿಸಿ, ಬೆಳೆಸಲು ಸಂವಿಧಾನ ಮಾರ್ಗಸೂಚಿ ಎಂದರು.
ಸಂವಿಧಾನ ರಚನೆಗೊಂಡು 75 ವರ್ಷಗಳು ತುಂಬಿವೆ. ಈ ಸಂದರ್ಭದಲ್ಲಿ ರಾಜ್ಯದಾದ್ಯಂತ ಹೆಮ್ಮೆಯಿಂದ ಸಂವಿಧಾನದ ಮಹತ್ವ ಸಾರಲು ಹಬ್ಬದ ರೀತಿಯಲ್ಲಿ ಜಾಗೃತಿ ಜಾಥಾ ಮಾಡಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಜನವರಿ 26ರಂದು ಆರಂಭಗೊಂಡ ಸಂವಿಧಾನ ಜಾಗೃತಿ ಜಾಥಾ ಫೆ. 15ರ ವರೆಗೆ ಜಿಲ್ಲೆಯ 106 ಗ್ರಾಮಗಳಲ್ಲಿ ಯಶಸ್ವಿಯಾಗಿ ಸಂಚರಿಸಿದೆ ಎಂದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್. ದೊಡ್ಡಮನಿ, ಸಾರ್ವಜನಿಕರಿಗೆ, ವಿಕಲಚೇತನರಿಗೆ ಸಂವಿಧಾನ ಪೀಠಿಕೆ ಬೋಧಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಅಲ್ಲಾಭಕ್ಷ ಎಂ.ಎಸ್. ಸ್ವಾಗತಿಸಿದರು. ಜಿಲ್ಲಾ ವಿಕಲಚೇತನರ ಕಲ್ಯಾಣ ಅಧಿಕಾರಿ ಜಗದೀಶ ನಿರೂಪಿಸಿದರು. ವಿವಿಧ ತಾಲೂಕುಗಳಿಂದ ಆಗಮಿಸಿದ್ದ 50ಕ್ಕೂ ಹೆಚ್ಚು ವಿಲಕಚೇತನರು ತಮ್ಮ ಬೈಕ್‌ಗಳ ಮೂಲಕ ಕೆಸಿಡಿ ಕಾಲೇಜು ಮೈದಾನದಿಂದ ಬೈಕ್ ರ‍್ಯಾಲಿ ಆರಂಭಿಸಿದರು. ಬೈಕ್ ರ‍್ಯಾಲಿಯೊಂದಿಗೆ ಕೆಲಗೇರಿಯ ಜಗ್ಗಲಗಿ ಮೇಳ ಸಂಚರಿಸಿ ಸಾರ್ವಜನಿಕರ ಗಮನ ಸೆಳೆಯಿತು.