ದಾವಣಗೆರೆ : ಚುನಾವಣೆಗಳಲ್ಲಿ ಸೋತ ನಂತರ ಇವಿಎಂ ಬಗ್ಗೆ ಮಾತನಾಡುವುದು ಫ್ಯಾಷನ್ ಆಗಿದ್ದು, ವಿಪಕ್ಷಗಳು ನಿರಂತರವಾಗಿ ಇಂತಹ ಆರೋಪಗಳನ್ನು ಮಾಡಿಕೊಂಡೇ ಬಂದಿವೆ ಎಂದು ಹಾವೇರಿ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಭಾನುವಾರ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆಗೆ ಆಗಮಿಸಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದೆಹಲಿ ವಿಧಾನಸಭೆ ಚುನಾವಣೆ ಸ್ಪಷ್ಟ ಸಂದೇಶ ನೀಡಿದೆ. ಹಾಗಿದ್ದರೂ ಇವಿಎಂ ಬಗ್ಗೆ ವಿಪಕ್ಷಗಳು ಎಂದಿನಂತೆ ಆರೋಪ ಮಾಡುತ್ತಿವೆ ಎಂದರು.
ಯಾರು ದೇಶದ ಬಗ್ಗೆ ಚಿಂತನೆ ಮಾಡುತ್ತಾರೋ, ರಾಷ್ಟ್ರದ ಅಭಿವೃದ್ಧಿ ಬಗ್ಗೆ ಕೆಲಸ ಮಾಡುತ್ತಾರೋ, ಯಾರು ದೇಶವನ್ನು ಕಟ್ಟುತ್ತಾರೋ ಅಂತಹವರಿಗೆ ಜನಬೆಂಬಲ ಇದೆ ಎಂಬ ಸಂದೇಶವನ್ನು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ನೀಡಿದ್ದಾರೆ. ದೆಹಲಿ ಫಲಿತಾಂಶವು ದೇಶಕ್ಕೆ ಸ್ಷಷ್ಟತೆ ನೀಡಿದೆ. ಪ್ರೀತಿಯಿಂದ ದೇಶ ಕಟ್ಟುವವರಿಗೆ ಸ್ಪಷ್ಟ ಬಹುಮತವನ್ನು ದೆಹಲಿ ಮತದಾರರು ನೀಡಿದ್ದಾರೆ ಎಂದರು.
ದೇಶ ವಿಭಜನೆ, ದೇಶದ ಹಿತ ಮರೆತವರಿಗೆ ಸ್ಥಾನ ಇಲ್ಲ ಎಂಬುದು ಮತ್ತೆ ಸಾಬೀತಾಗಿದೆ. ದೇಶ ವಿಭಜನೆ ಬಗ್ಗೆ ರಾಷ್ಟ್ರದ ಹಿತವನ್ನೇ ಮರೆತು, ವಿದೇಶಗಳಲ್ಲಿ ಮಾತನಾಡುವವರಿಗೆ ದೆಹಲಿ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಸೋಲನ್ನು ಒಪ್ಪಿಕೊಳ್ಳದೇ ಕುಂಟುನೆಪ ಹೇಳುವುದು ಒಳ್ಳೆಯ ನಾಯಕನ ಲಕ್ಷಣವೂ ಅಲ್ಲ ಎಂದರು.
ಹೈಕಮಾಂಡ್ ಆಯ್ಕೆ ಮಾಡಿದ್ದೇ ಉತ್ತಮ ರಾಜ್ಯ ಬಿಜೆಪಿಯಲ್ಲಿ ಯಾವುದೇ ಗೊಂದಲಗಳೂ ಇಲ್ಲ. ನಮ್ಮದು ಪ್ರಜಾಪ್ರಭುತ್ವ ಇರುವಂತಹ ಪರ್ಷ. ನಮ್ಮ ಹೈಕಮಾಂಡ್ ಬಹಳ ಗಟ್ಟಿಯಾಗಿದೆ. ಅಂತಿಮವಾಗಿ ಈಗ ದೆಹಲಿ ಚುನಾವಣೆಯೂ ಮುಗಿದಿದೆ. ಈಗ ಪಕ್ಷ ಸಂಘಟನೆಗೂ ಇನ್ನು ವರಿಷ್ಠರು ಹೆಚ್ಚು ಸಮಯ ನೀಡುತ್ತಾರೆ. ಆಗ ಕರ್ನಾಟಕದ ಬಗ್ಗೆಯೂ ನಿರ್ಣಯವಾಗುತ್ತದೆ. ಎಲ್ಲವೂ ಶೀಘ್ರವೇ ಸುಖಾಂತ್ಯವಾಗಲಿದೆ ಎಂದು ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಯಾರ ಹೆಸರನ್ನೂ ಸೂಚಿಸಿಲ್ಲ. ನಾನು ಅಧ್ಯಕ್ಷನಾಗುವ ಯಾವುದೇ ಚರ್ಚೆಯಾಗಿಲ್ಲ. ಬಿ.ವೈ.ವಿಜಯೇಂದ್ರ ದೆಹಲಿಗೆ ಹೋದ ಮಾಹಿತಿಯೂ ನನಗಿಲ್ಲ. ಸಂಸದನಾಗಿ ನನ್ನ ಕೆಲಸ ಮಾಡುತ್ತಿದ್ದೇನೆ. ಕೆಲವರು ತಮ್ಮ ಅಭಿಪ್ರಾಯ ಹೇಳುತ್ತಿದ್ದಾರೆ. ನಿಮ್ಮ (ಮಾಧ್ಯಮ) ಮೂಲಗಳಿಗೆ ನೀವೇ ಉತ್ತರ ಕೊಡಬೇಕು. ಏನೇ ಇದ್ದರೂ ನಮ್ಮ ಹೈಕಮಾಂಡ್ ಒಳ್ಳೆಯ ತೀರ್ಮಾನ ಮಾಡುತ್ತೆ, ಹೈಕಮಾಂಡ್ ಆಯ್ಕೆ ಮಾಡಿದ್ದೇ ಉತ್ತಮ ಎಂದು ಬಸವರಾಜ ಬೊಮ್ಮಾಯಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.