ರಾಮನಗರ: ಜಾತಿ ಮತ್ತು ಧರ್ಮ ಎಂಬುದು ಬಹಳ ಸೂಕ್ಷ್ಮವಾದ ವಿಚಾರ. ಈಗ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವಿಚಾರವಾಗಿ ಉಂಟಾಗಿರುವ ಗೊಂದಲಗಳನ್ನು ಬಗೆಹರಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಸುದರ್ಶನ್ ಸಲಹೆ ನೀಡಿದರು.
ಜಾತಿ ಮತ್ತು ಧರ್ಮ ವಿಚಾರಗಳನ್ನು ಚರ್ಚೆ ಮಾಡುವಾಗ, ಕಾರ್ಯಕ್ರಮಗಳನ್ನು ರೂಪಿಸುವಾಗ ಹಾಗೂ ಕಾನೂನುಗಳನ್ನು ರಚನೆ ಮಾಡುವ ಸಂದರ್ಭದಲ್ಲಿ ಬಹಳ ದೊಡ್ಡ ಪ್ರಮಾಣದ ಜವಾಬ್ದಾರಿ ಸರ್ಕಾರದ ಮೇಲಿರುತ್ತದೆ. ಈಗ ಸಮೀಕ್ಷೆ ವಿಚಾರವಾಗಿ ಏಕಿಷ್ಟು ಗೊಂದಲಗಳಾಗುತ್ತಿವೆಯೊ ಗೊತ್ತಿಲ್ಲ. ಅವುಗಳನ್ನು ಬಗೆಹರಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಸರ್ಕಾರದಲ್ಲಿರುವ ಸಚಿವರೆಲ್ಲರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಪ್ರಾಥಮಿಕ ಅಧಿಸೂಚನೆ ಹೊರಡಿಸಿ :ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಆಗಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ಯಾವ್ಯಾವ ಸಮುದಾಯಗಳು ಹಿಂದುಳಿದಿವೆ, ಯಾವ ಕ್ಷೇತ್ರಗಳಲ್ಲಿ ಅವಕಾಶದಿಂದ ವಂಚಿತವಾಗಿವೆ. ಅದನ್ನು ಆ ಸಮುದಾಯಗಳು ಪಡೆದುಕೊಳ್ಳಬೇಕಾದರೆ ಅಂಕಿ ಅಂಶಗಳು ಇರಬೇಕಾಗುತ್ತದೆ ಎಂದು ನಿರ್ದೇಶನ ಕೂಡ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಜೆಟ್ ಗಳಲ್ಲಿ ಅನುದಾನಗಳಾಗಲಿ ಅಥವಾ ಕಾರ್ಯಕ್ರಮಗಳನ್ನು ಸಮುದಾಯಗಳಿಗೆ ನೀಡುವಾಗ ಅಂಕಿ ಅಂಶಗಳು ಇರಬೇಕಾಗುತ್ತದೆ. ಅದಕ್ಕಾಗಿ ಸಮೀಕ್ಷೆ ಆಗುವುದು ಅತ್ಯಗತ್ಯವಾಗಿದೆ ಎಂದರು.
ಜಾತಿ ಮತ್ತು ಧರ್ಮ ಅತ್ಯಂತ ಸೂಕ್ಷ್ಮವಾದ ವಿಚಾರ. ಈ ಬಗ್ಗೆ ಸಮೀಕ್ಷೆ ಮಾಡುವಾಗ ಮೊದಲು ಪ್ರಾಥಮಿಕ ಅಧಿಸೂಚನೆ ಹೊರಡಿಸಬೇಕು. ಆಗ ಗೊಂದಲಗಳು ಉಂಟಾಗುವುದಿಲ್ಲ. ಆಮೇಲೆ ಅಂತಿಮ ಅಧಿಸೂಚನೆ ಹೊರಡಿಸಬೇಕು. ಸರ್ಕಾರದ ಜೊತೆ ಸಮಾಲೋಚನೆ ಮಾಡಬೇಕು. ಸಂಬಂಧಿಸಿದ ಸಚಿವರು ಇಲಾಖೆಗಳಲ್ಲಿ ಸಭೆಗಳನ್ನು ನಡೆಸುವುದರ ಜೊತೆಗೆ ಕ್ಯಾಬಿನೆಟ್ ನಲ್ಲಿ ಚರ್ಚಿಸಬೇಕಾಗುತ್ತದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಇಂತಹ ಅನಾವಶ್ಯಕ ಗೊಂದಲಗಳು ಸೃಷ್ಟಿಯಾಗುತ್ತವೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯರವರು 16 ಬಜೆಟ್ ಮಂಡಿಸಿದ ದಾಖಲೆ ಬರೆದವರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 8 ಬಾರಿ ವಿಧಾನಸೌಧ ಪ್ರವೇಶಿವದರು. ಅನುಭವಿ ರಾಜಕಾರಣಿಗಳು ಸಾಮಾಜಿಕ ನ್ಯಾಯ, ಆಡಳಿತ, ಅಭಿವೃದ್ಧಿ ಪರವಾಗಿ ನಿರ್ಧಾರ ಕೈಗೊಳ್ಳುವಾಗ ಎಚ್ಚರಿಕೆಯ ಹೆಜ್ಜೆಯಿಟ್ಟು, ಅನಾವಶ್ಯಕ ಗೊಂದಲಗಳನ್ನು ನಿವಾರಿಸಬೇಕಿದೆ ಎಂದು ವಿ.ಸುದರ್ಶನ್ ತಿಳಿಸಿದರು.
19ಕೆಆರ್ ಎಂಎನ್ 3.ಜೆಪಿಜಿ