ಸತ್ಯ, ನ್ಯಾಯ ಎತ್ತಿಹಿಡಿಯುವುದೇ ಧರ್ಮಾಧಿಕಾರಿಗಳ ಜವಾಬ್ದಾರಿ

KannadaprabhaNewsNetwork |  
Published : Apr 04, 2025, 12:48 AM IST
ಪೋಟೋ, 3ಎಚ್‌ಎಸ್‌ಡಿ1 : ಸಾಣೇಹಳ್ಳಿಯ  ಲತಾ ಮಂಟಪದಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ಕರ್ನಾಟಕದ ಪರಿವರ್ತನೆಯ ಚಿಂತನೆ ಮತ್ತು ಕ್ರಿಯಾಯೋಚನೆ ಕುರಿತ ಸಮಾನ ಮನಸ್ಕರ ಸಂವಾದ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ಸಾಣೇಹಳ್ಳಿಯ ಲತಾ ಮಂಟಪದಲ್ಲಿ ನಡೆಯುತ್ತಿರುವ ಸಮಾನ ಮನಸ್ಕರ ಸಂವಾದ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕರ್ನಾಟಕದ ಪರಿವರ್ತನೆಯ ಚಿಂತನೆ, ಕ್ರಿಯಾಯೋಚನೆ ಕುರಿತ ಸಮಾನ ಮನಸ್ಕರ ಸಂವಾದ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಶ್ರೀ ಹೇಳಿಕೆಕನ್ನಡಪ್ರಭ ವಾರ್ತೆ ಹೊಸದುರ್ಗ

ಧರ್ಮ ಮತ್ತು ರಾಜಕೀಯ ಕ್ಷೇತ್ರಗಳ ವ್ಯಕ್ತಿಗಳಲ್ಲಿ ಆದರ್ಶಗಳು ಅರಳಿದಾಗ ಸಮಾಜದ ರಥ ಸುಗಮವಾಗಿ ಮುಂದೆ ಸಾಗುವುದು. ಸತ್ಯ, ನ್ಯಾಯ, ನೀತಿ, ಪ್ರಾಮಾಣಿಕತೆ, ದಯೆ, ಪ್ರೀತಿ ಇಂಥ ಮೌಲ್ಯಗಳನ್ನು ಎತ್ತಿಹಿಡಿಯುವುದೇ ಧರ್ಮಾಧಿಕಾರಿಗಳ ಜವಾಬ್ದಾರಿ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮಿಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿಯ ಲತಾ ಮಂಟಪದಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ಕರ್ನಾಟಕದ ಪರಿವರ್ತನೆಯ ಚಿಂತನೆ ಮತ್ತು ಕ್ರಿಯಾಯೋಚನೆ ಕುರಿತ ಸಮಾನ ಮನಸ್ಕರ ಸಂವಾದ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಲಿಂಗ, ಜಾತಿ, ದೇಶ, ಭಾಷೆ ಇತ್ಯಾದಿ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಗೌರವಿಸುವ ಗುಣ ಧರ್ಮಾಧಿಕಾರಿಗಳಲ್ಲಿರಬೇಕು. ಯಾರಲ್ಲಿ ಸುಳ್ಳು, ಅನೀತಿ, ಹಿಂಸೆ, ಭಯೋತ್ಪಾದನೆ, ಸರ್ವಾಧಿಕಾರ, ದಬ್ಬಾಳಿಕೆ ಇರುತ್ತದೆ ಅಂತವರಿಂದ ಸಮಾಜವನ್ನೂ ಸನ್ಮಾರ್ಗದಲ್ಲಿ ಕರೆದೊಯ್ಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ತಾತ್ವಿಕರು ಆಡಳಿತದ ಸೂತ್ರಧಾರಿಗಳಾದರೆ ಪಾರದರ್ಶಕ ಮತ್ತು ಪರಿಶುದ್ಧ ಆಡಳಿತ ಕೊಡಲು ಸಾಧ್ಯ. ಜನ ಬಯಸಿದ್ದನ್ನು ಕೊಡುವ ಬದಲು ಜನರಿಗೆ ಬೇಕಾದದ್ದೇನು ಎನ್ನುವ ದೂರದೃಷ್ಟಿಯುಳ್ಳವನಾಗಿ ಜನ ಕೇಳುವ ಮುನ್ನ ಕೊಡುವವನು ನಿಜವಾದ ಮುಖಂಡ. ಅಂಥದನ್ನೇ ಕೊಡುವನು. ಒಬ್ಬ ಪ್ರಜಾಪ್ರತಿನಿಧಿಗೆ ಬಸವಣ್ಣನವರ ಹಾಗೆ ಜನಪರ, ಜೀವಪರ ಚಿಂತನೆ ಇರಬೇಕು ಆದರೆ ಇಂದಿನ ಪ್ರಜಾ ಪ್ರತಿನಿಧಿಗಳು ಆದರ್ಶದ ಮಾತುಗಳನ್ನಾಡುತ್ತಾ ರಾಜಕೀಯಕ್ಕೆ ಬರುತ್ತಾರೆ ನಂತರ ಬಂಡವಾಳ ಶಾಹಿಗಳಾಗಲು ಸ್ಪರ್ಧೆಗೆ ಬಿದ್ದ ದರ್ಪ ದೌರ್ಜನ್ಯದೊಂದಿಗೆ ಅಧಿಕಾರ ಇರುವುದೇ ವ್ಯಕ್ತಿಗತ ಆಶೋತ್ತರಗಳ ಈಡೇರಿಕೆಗಾಗಿ ಎನ್ನುವ ಭ್ರಮೆಯಲ್ಲಿ ತೇಲಾಡುತ್ತಾರೆ ಎಂದರು.ಕೋಟಿ, ಕೋಟಿ ಹಣ, ಬಂಗಾರ, ಭೂಮಿ, ಅರಮನೆ, ಸೈಟ್ ಇತ್ಯಾದಿ ಇರುವವ ನಿಜವಾದ ಶ್ರೀಮಂತ ಅಲ್ಲ ಅವನು ಲೂಟಿಕೋರ. ಆತ ಬಾಹ್ಯ ಆಸ್ತಿಯನ್ನು ಮಾತ್ರ ಲೂಟಿ ಮಾಡುವುದಿಲ್ಲ. ತನ್ನೊಳಗಿನ ಶಾಂತಿ, ಸಮಾಧಾನ, ಸುಖ, ಪ್ರೀತಿ, ನೀತಿ, ಸತ್ಯ, ಜನಪರ ಕಾಳಜಿ ಇಂಥ ಆದರ್ಶ ಮೌಲ್ಯಗಳನ್ನೇ ಹರಾಜಿಗಿಟ್ಟುಕೊಂಡು ತನ್ನ ಬದುಕು ಬೆಂಕಿಯಲ್ಲಿ ಬೇಯುವಂತೆ ಮಾಡಿಕೊಳ್ಳುವನು. ಜನಪ್ರತಿನಿಧಿಗಳಂತೆ ಪ್ರಜಾಪ್ರಭುಗಳ ಜವಾಬ್ದಾರಿಯೂ ಇದೆ. ಅವರು ತಮ್ಮ ಮತವನ್ನು ಮಾರಾಟಕ್ಕಿಡದೆ, ಆಸೆ ಆಮಿಷಗಳಿಗೆ ಬಲಿಯಾಗದೆ ಅರ್ಹರಿಗೆ ಉಚಿತವಾಗಿ ನೀಡಬೇಕು. ಆಗ ಪ್ರಜಾಪ್ರಧಿನಿಧಿ ತಪ್ಪು ಮಾಡಿದರೆ ಕೇಳುವ ಎದೆಗಾರಿಕೆ ಬರುತ್ತದೆ. ಅವರು ಕೆಟ್ಟಿದ್ದಾರೆ, ಇವರು ಕೆಟ್ಟಿದ್ದಾರೆ ಎಂದು ದೂರುವ ಮುನ್ನ ಅವರನ್ನು ಅಲ್ಲಿಗೆ ಕಳಿಸಿದ ನಾವೇನಾಗಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.

ಪಾಂಡೋಮಟ್ಟಿಯ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಮಾತನಾಡಿ ಕರ್ನಾಟಕದ ರಾಜಕಾರಣದಲ್ಲಿ ಮೊಂಡುವಾದ ಮಾಡುವ ರಾಜಕಾರಣಿಗಳು ವಿಜೃಂಬಿಸುತ್ತಿದ್ದಾರೆ. ಕರ್ನಾಟಕದಲ್ಲಿ ಮುತ್ಸದ್ಧಿಗಳು ಆಡಳಿತದ ಚುಕ್ಕಾಣಿ ಹಿಡಿಯಬೇಕು. ನೇತಾರನಿಂದ ಮತದಾರ, ಮತದಾರನಿಂದ ನೇತಾರ ಭ್ರಷ್ಟನಾಗುತ್ತಿದ್ದಾನೆ. ಇಬ್ಬರೂ ಸರಿಯಾಗಬೇಕು. ರಾಜಕಾರಣ ಜಾತಿಯಿಂದ ಅಳೆಯದೇ ಸಿದ್ಧಾಂತಗಳಿಂದ ಅಳೆಯಬೇಕು. ರಾಜಕಾರಣ ಮಂಗನಾಟವಾಗಬಾರದು. ರಾಜಕಾರಣ ವ್ಯಾಪಾರ ಕೇಂದ್ರವಾಗಿದೆ. ಎಲ್ಲ ವ್ಯವಸ್ಥೆಗಳು ಸರಿಯಾಗಬೇಕಾದರೆ ರಾಜಕಾರಣ ಸರಿಯಾಗಬೇಕು. ಕರ್ನಾಟಕದಲ್ಲಿ ಸಚಿವರು, ಶಾಸಕರು, ಅಧಿಕಾರಿಗಳ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಬೇಕು. ಆಗ ಕನ್ನಡ ಭಾಷೆ ಉಳಿಯುತ್ತದೆ ಎಂದರು..

ಅಳಂದ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ ರಾಜಕೀಯ ಪರಿವರ್ತನೆಗೆ ಜನಾಂದೋಲನ ಕುರಿತು ಮಾತನಾಡಿ, ಇವತ್ತಿನ ರಾಜಕಾರಣ ನೋಡಿದರೆ ಅಸಹ್ಯವಾಗುತ್ತದೆ. ರಾಜಕಾರಣದಲ್ಲಿ ಬದಲಾವಣೆ ಬಂದು ಹೊಸ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಅಣಿಯಾಗಬೇಕು. ರೈತರು ಬಿಟ್ಟರೆ ಯಾವ ಅಧಿಕಾರಿ, ರಾಜಕಾರಣಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಇದಕ್ಕೆ ಕಾರಣ ನನಗೂ ತಿಳಿದಿಲ್ಲ. ಕೈಗಾರಿಕೆಯ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಇವತ್ತಿನ ಶಿಕ್ಷಣ ಪದ್ಧತಿಯನ್ನು ಮುಂದುವರಿಸಿಕೊಂಡು ಹೋದರೆ ಉದ್ಯೋಗವನ್ನು ಸೃಷ್ಠಿಸಲಿಕ್ಕೆ ಸಾಧ್ಯವಿಲ್ಲ. ಶಿಕ್ಷಣದಲ್ಲಿ ಬದಲಾವಣೆಯಾಗಬೇಕು. ಸಮಸ್ಯೆಗಳನ್ನಿಕೊಂಡು ಜನರ ಮುಂದೆ ಹೋಗದೇ ಅದಕ್ಕೆ ಪರಿಹಾರವನ್ನಿಟ್ಟುಕೊಂಡು ಹೋಗಬೇಕು. ಜನಪರವಾಗಿ ಆಂದೋಲನ ಮಾಡಿ ಜೈಲಿಗೆ ಹೋಗುವಂಥವರು ಕಡಿಮೆ ಬೇರೆ ಬೇರೆ ಕಾರಣಕ್ಕಾಗಿ ಜೈಲಿಗೆ ಹೋಗುವಂಥವರ ಸಂಖ್ಯೆ ಹೆಚ್ಚಾಗಿದೆ ಎಂದರು.

ಚಿಂತಕ ಹೆಗ್ಗೋಡಿನ ಪ್ರಸನ್ನ ಮಾತನಾಡಿ, ಏನೇ ಸಮಸ್ಯೆ ಬಂದರೂ ತದ್ವಿರುದ್ಧವಾಗಿ ಯೋಚನೆ ಮಾಡುತ್ತೇವೆ. ಧಾರ್ಮಿಕ ನಾಯಕರುನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಸಮಾನ್ಯ ಜನರು ಪ್ರಗತಿಯ ಭ್ರಮೆಯಲ್ಲಿದ್ದಾರೆ ಈ ಭ್ರಮೆಯಿಂದ ಹೊರಬರದೆ ಬದಲಾವಣೆ ತರೋದಕ್ಕೆ ಸಾಧ್ಯವಿಲ್ಲ. ಕಾಂಗ್ರೆಸ್‌ನವರಿಗೆ ಸೋಷಿಯಲ್ ಜಸ್ಟಿಸ್ ಪಾಪಪ್ರಜ್ಞೆಯಾಗಿ ಕಾಡುತ್ತಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಸರ್ವೋದಯ ಸಂಘಟನೆಯ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ ಕೃತಜ್ಞತೆ, ವಿವೇಕ, ಕರುಣೆ, ಆಂತರಿಕ ಶಾಂತಿ. ಮನುಷ್ಯ ದುರಾಸೆ, ಭಯ, ಮೂರ್ಖತನ ಇಡೀ ಜಗತ್ತನ್ನು ಆಳುತ್ತಿದೆ. ಮನುಷ್ಯನಿಗೆ ಕಡೆಗೀತೆ ಬಹಳ ಮುಖ್ಯ. ಮನುಷ್ಯನಿಗೆ ಈಗೋ ದಿಂದ ಇಕೋದ ಕಡೆಗೆ ಹೋಗುವ ಪ್ರಯತ್ನವನ್ನು ಮಾಡಬೇಕು. ಮನುಷ್ಯನಿಗೆ ನಕರಾತ್ಮಕ ಚಿಂತನೆಯನ್ನು ದೂರ ಮಾಡಿಕೊಳ್ಳಬೇಕು. ಮನುಷ್ಯ ವಾದದಿಂದ ಸಂವಾದದ ಕಡೆಗೆ ಹೋಗಬೇಕು. ಸಹನೂಭೂತಿಯನ್ನು ಮೈಗೂಡಿಸಿಕೊಳ್ಳಬೇಕು. ಒಂದು ಸಂಕಲ್ಪಶಕ್ತಿಯನ್ನಿಟ್ಟುಕೊಳ್ಳಬೇಕು. ರಾಜಕೀಯವಾಗಿ ಸಾತ್ವಿಕ, ತಾತ್ವಿಕ, ಸಜ್ಜನ ರಾಜಕಾರಣಿಗಳು ಬೇಕು. ದುರ್ಜನರು ರಾಜಕಾರಣದಲ್ಲಿ ವಿಜೃಂಭಿಸುತ್ತಿರುವುದು ನಾವು ನೋಡುತ್ತಿದ್ದೇವೆ. ಸಕಲ ಜೀವಾತ್ಮರಿಗೆ ಲೇಸನೆ ಮಾಡುವ ಕೆಲಸ ಆಗಬೇಕು ಕರ್ನಾಟಕದಲ್ಲಿ ಸರ್ವೋದಯ ರಾಜಕೀಯ ಬರಬೇಕು ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ರಘುಮೂರ್ತಿ, ಮುಖ್ಯಮಂತ್ರಿ ಚಂದ್ರು, ಬಿ.ಎಲ್.ಶಂಕರ್, ಎ.ಟಿ.ರಾಮಸ್ವಾಮಿ, ಎಂ.ಪಿ. ನಾಡಗೌಡ, ರವಿಕೃಷ್ಣಾರೆಡ್ಡಿ, ವಿ.ಆರ್.ಸುದರ್ಶನ್, ಡಾ.ಗೋಪಾಲ ದಾಬಡೆ, ಮಹಿಮಾ ಜೆ.ಪಟೇಲ್, ಅಬ್ದುಲ್ ರೆಹಮಾನ ಪಾಷಾ, ಭೈರೇಗೌಡ, ಡಾ. ರಾಘವನ್, ತೇಜಸ್ವಿ ಪಟೇಲ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ