ಕೊಪ್ಪಳ:
ಕೊಪ್ಪಳ ತಾಲೂಕಿನ ಶಿವಪುರ, ಅಗಳಿಕೇರಿ, ಹಿಟ್ನಾಳ, ಹುಲಿಗಿ ಸೇರಿದಂತೆ ಸುತ್ತಮುತ್ತಲ ಪ್ರದೇಶ ವ್ಯಾಪ್ತಿಯಲ್ಲಿ ತಡರಾತ್ರಿ ಬೀಸಿದ ಬಿರುಗಾಳಿ ಮತ್ತು ಮಳೆಗೆ ನೂರಾರು ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ನೆಲಸಮವಾಗಿದೆ. ಕಟಾವಿಗೆ ಬಂದಿದ್ದ ಬೆಳೆ ನೆಲಕ್ಕೆ ಬಿದ್ದಿರುವುದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ. ಮಳೆ ಮತ್ತು ಬಿರುಗಾಳಿ ಜೋರಾಗಿ ಆಗಿರುವ ಪ್ರದೇಶದಲ್ಲಿ ಮಾತ್ರ ಹಾನಿಯಾಗಿದೆ. ಶಿವಪುರ ಗ್ರಾಮದ ಬಳಿಯೇ ಕೆಲವೊಂದು ಹೊಲಗಳಿಗೆ ಯಾವುದೇ ಹಾನಿಯಾಗಿಲ್ಲ. ಆದರೆ, ಕೆಲವೇ ಕೆಲವು ಪ್ರದೇಶದಲ್ಲಿ ಮಾತ್ರ ಭಾರಿ ಹಾನಿ ಮಾಡಿದೆ.
ಶಿವಪುರ ಗ್ರಾಮದ ಪರಪ್ಪ ತೋಟದ ಅವರ ಹೊಲದಲ್ಲಿ 6 ಎಕರೆಯಲ್ಲಿ ಬೆಳೆದಿದ್ದ ಭತ್ತದಲ್ಲಿ 2 ಎಕರೆ ಭತ್ತ ಸಂಪೂರ್ಣ ನೆಲಕ್ಕಚ್ಚಿದೆ. ಸುಳಿಗಾಳಿಯಿಂದ ಈ ರೀತಿ ಬೆಳೆ ನೆಲಸಮವಾಗಿದೆ ಎಂದು ರೈತರು ಹೇಳುತ್ತಿದ್ದಾರೆ.ಗಂಗಾವತಿ- ಮುನಿರಾಬಾದ್‌ನಲ್ಲಿ ಧಾರಾಕಾರ ಮಳೆ:
ಗಂಗಾವತಿ ಹೋಬಳಿಯಲ್ಲಿ 9.8 ಮಿಮೀ, ವೆಂಕಟಗಿರಿ ಹೋಬಳಿಯಲ್ಲಿ 8.6, ವಡ್ಡರಹಟ್ಟಿ ಗ್ರಾಮದಲ್ಲಿ 9.2 ಮಿಮೀ ಮಳೆ ಬಿದ್ದಿದೆ. ಆನೆಗೊಂದಿ, ಸಂಗಾಪುರ, ಡಣಾಪುರ, ಹಿರೇಜಂತಗಲ್, ಚಿಕ್ಕಜಂತಗಲ್, ಮರಳಿ, ಚಿಕ್ಕಬೆಣಕಲ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿಯೂ ಮಳೆ ಸುರಿದಿದೆ.ತಂಪೆರೆದ ಮಳೆ:ಬಿಸಿಲಿನ ಬೇಗೆಯಿಂದ ತತ್ತರಿಸಿದ ಜನರಿಗೆ ಗುರುವಾರ ಸುರಿದ ಮಳೆ ತಂಪೆರೆದಿದೆ. ಶಿವರಾತ್ರಿ ಮುಗಿಯುತ್ತಿದ್ದಂತೆ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚಳವಾಗಿ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕಿದ್ದರು. ಗುರುವಾರ ಬೆಳಗ್ಗೆ ಮುನಿರಾಬಾದ್ ಹಾಗೂ ಗಂಗಾವತಿ ಸುತ್ತಮುತ್ತ ಭರ್ಜರಿಯಾಗಿ ಸುರಿದ ಪರಿಣಾಮ ಭೂಮಿ ತಂಪುಗೊಂಡಿದೆ. ಇದರಿಂದ ಬಿಸಿಲಿನ ಝಳವು ಕಡಿಮೆ ಆಗಿದೆ. ಇಷ್ಟು ದಿನ ಸೂರ್ಯನಿಗೆ ಹೆದರಿ ಮನೆಯಲ್ಲಿದ್ದ ಜನರು ಮನೆಯಿಂದ ಹೊರಬಂದು ಮಳೆರಾಯನಿಗೆ ಕೈ ಮುಗಿದರು.